ಬೆಂಗಳೂರು: ನಾತಿಚರಾಮಿ ಕನ್ನಡ ಚಲನಚಿತ್ರಕ್ಕೆ ಐದು ರಾಷ್ಟ್ರಪ್ರಶಸ್ತಿಗಳನ್ನು ನೀಡಿದ್ದಕ್ಕೆ ಸಂಬಂಧಿಸಿದಂತೆ ಸ್ವಜನ ಪಕ್ಷಪಾತ, ಹಿತಾಸಕ್ತಿ ಸಂಘರ್ಷದ ಆರೋಪ ಪ್ರಕರಣದ ಇತ್ಯರ್ಥ ಬಾಕಿ ಇರುವಾಗಲೇ ನಿರ್ದೇಶಕ ಬಿ ಎಸ್ ಲಿಂಗದೇವರು ಅವರನ್ನು ರಾಜ್ಯ ಸರ್ಕಾರ 2020ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. ಈ ಕುರಿತು ಸ್ವತಃ ಬಿ ಎಸ್ ಲಿಂಗದೇವರು ಅವರು ಸಮಿತಿಯ ಇತರ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ವಾರ್ತಾ ಇಲಾಖೆಯ ಜಂಟಿ ಆಯುಕ್ತರಾದ ನವೀನ್ ಅವರೊಂದಿಗೆ ತಾವು ಮತ್ತು ಧನ ಆಯ್ಕೆ ಸಮಿತಿ ಅಧ್ಯಕ್ಷ ರಾಮಮೂರ್ತಿ ಸೇರಿ ಭೇಟಿ ಮಾಡಿ ಸಭೆ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ ಡಿ. 16ರಿಂದ ಚಲನವಿತ್ರ ವೀಕ್ಷಣೆ ನಿಗದಿಪಡಿಸಿ ಆದೇಶ ನೀಡಿದ್ದಾರೆ.
ಆದರೆ, ಈ ಹಿಂದೆ ಮನ್ಸೋರೆ ನಿರ್ದೇಶನದ ʼನಾತಿಚರಾಮಿʼ ಚಿತ್ರವನ್ನು ಐದು ರಾಷ್ಟ್ರಪ್ರಶಸ್ತಿಗಳಿಗೆ ಆಯ್ಕೆ ಮಾಡಿದ್ದ ಆಯ್ಕೆ ಸಮಿತಿಯಲ್ಲಿ ಬಿ ಎಸ್ ಲಿಂಗದೇವರು ಇದ್ದರಲ್ಲದೇ ಆ ಸಿನಿಮಾ ನಿರ್ಮಾಣದಲ್ಲಿ ಇವರೂ ಸಹಭಾಗಿತ್ವ ಹೊಂದಿದ್ದರು ಎನ್ನಲಾಗಿದೆ. ಹೀಗಿರುವಾಗ ತಾವು ಜೊತೆಗಿದ್ದು ನಿರ್ಮಾಣ ಮಾಡಿದ ಸಿನಿಮಾಕ್ಕೆ ಐದು ಪ್ರಶಸ್ತಿಗಳನ್ನು ಕೊಡಿಸಿದ್ದು ಹಿತಾಸಕ್ತಿ ಸಂಘರ್ಷ ಮತ್ತು ಸ್ವಜನ ಪಕ್ಷಪಾತವಾಗುತ್ತದೆ ಎಂದು ಆರೋಪಿಸಿ ಚಿತ್ರನಿರ್ದೇಶಕ ದಯಾಳ್ ಪದ್ಮನಾಭ ಎನ್ನುವವರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ಪರಿಶೀಲಿಸಿದ್ದ ಹೈಕೋರ್ಟು 2019ರಲ್ಲಿ ಪ್ರಕರಣವನ್ನು ಮಧ್ಯಸ್ಥಿಕೆ ಮೂಲಕ ಪರಿಹರಿಸಿಕೊಳ್ಳಲು ಸೂಚಿಸಿತ್ತು. ಅದರಂತೆ ಪ್ರಕರಣವು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಗೆ ವರ್ಗಾವಣೆಯಾಗಿ ಇನ್ನೂ ವಿಚಾರಣೆಯ ಹಂತದಲ್ಲಿದೆ. ಕಳೆದ ನವೆಂಬರ್ ತಿಂಗಳಲ್ಲಿ ಒಂದು ವಿಚಾರಣೆ ಇದ್ದು ಇದರಲ್ಲಿ ಹಾಜರಾಗಬೇಕಿದ್ದ ಬಿ ಎಸ್ ಲಿಂಗದೇವರು ಅವರು ಹಾಜರಾಗದೇ ಮತ್ತೆ ಸಮಯ ಕೇಳಿದ್ದರೆಂದು ಬಲ್ಲ ಮೂಲಗಳು ತಿಳಿಸಿವೆ.
ಬಿ ಎಸ್ ಲಿಂಗದೇವರು ಅವರ ಸಹಭಾಗಿತ್ವ ಹೊಂದಿರುವ ʼಅಕ್ಕ ಕಮ್ಯುನಿಕೇಶನ್ಸ್ ಪ್ರೈ. ಲಿ. ಎಂಬ ಸಂಸ್ಥೆಯು ನಾತಿಚರಾಮಿ ಸಿನಿಮಾದಲ್ಲಿ ಸಂಕಲನ (ಎಡಿಟಿಂಗ್) ನಡೆಸಿದ್ದು, ಐದು ರಾಷ್ಟ್ರಪ್ರಶಸ್ತಿಗಳಲ್ಲಿ ಚಿತ್ರದ ಸಂಕಲನ ವಿಭಾಗಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿತ್ತು. ಇಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದ ಬಿ ಎಸ್ ಲಿಂಗದೇವರು ತಾವೇ ಸಹಭಾಗಿತ್ತ ಒಡೆತನ ಹೊಂದಿರುವ ಅಕ್ಕ ಕಮ್ಯುನಿಕೇಶನ್ಸ್ ಹಿತಾಸಕ್ತಿಯಿಂದ ಈ ಪ್ರಶಸ್ತಿ ಕೊಡಿಸಿದ್ದರು ಎಂಬ ಆರೋಪ ಬಂದಿತ್ತು. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನಾತಿಚರಾಮಿ ಸಿನಿಮಾದ ನಿರ್ಮಾಪಕ ಎನ್ ರಮೇಶ್ ಎಂಬುವವರು ʼತಾವು ಸಿನಿಮಾದಲ್ಲಿ ಅಕ್ಕ ಎಂದು ಬಳಸಿರುವುದು ವಚನಕಾರ್ತಿ ಅಕ್ಕಮಹಾದೇವಿಯ ಪ್ರೇರಣೆಯಿಂದʼ ಎಂದು ಸಮರ್ಥಿಸಿಕೊಂಡಿದ್ದರೆನ್ನಲಾಗಿದೆ. ಹಾಗಿದ್ದರೆ ಸಿನಿಮಾದಲ್ಲಿ ಅಕ್ಕ ಕಮ್ಯುನಿಕೇಶನ್ಸ್ ಸಂಸ್ಥೆಯ ಲೋಗೋ ಹಾಕಿಕೊಂಡಿದ್ದು ಏಕೆ ಎಂಬ ಪ್ರಶ್ನೆ ಮುನ್ನೆಲೆಗೆ ಬಂದು ಸ್ವತಃ ಬಿ ಎಲ್ ಲಿಂಗದೇವರು ತಮ್ಮ ಸಂಸ್ಥೆ ನಾತಿಚರಾಮಿ ಸಿನಿಮಾ ನಿರ್ಮಾಣದಲ್ಲಿ ಪಾಲ್ಗೊಂಡಿದ್ದನ್ನು ಮಧ್ಯಸ್ಥಿಕೆಯಲ್ಲಿ ಒಪ್ಪಿಕೊಂಡಿದ್ದರು ಎನ್ನಲಾಗಿದೆ.
ಈಗ ಬಿ ಎಲ್ ಲಿಂಗದೇವರು ಅವರ ಮೇಲಿರುವ ಆರೋಪ ಸಾಬೀತಾದ ಸಂದರ್ಭದಲ್ಲಿ ಅವರನ್ನು ಜೀವಮಾನದ ವರೆಗೆ ಯಾವುದೇ ಸಿನಿಮಾ ಸಂಬಂಧಿತ ಆಯ್ಕೆ ಸಮಿತಿಯಲ್ಲಿ ಜ್ಯೂರಿ ಆಗಲು ನಿಷೇಧವೊಡ್ಡುವ ನಿಯಮವಿದೆ. ಅಲ್ಲದೇ ಅವರು ಸಹಭಾಗಿಯಾದ ಯಾವುದೇ ಸಿನಿಮಾವನ್ನೂ ಸಹ ಪ್ರಶಸ್ತಿಗಳಿಗೆ ಪರಿಗಣಿಸುವಂತಿಲ್ಲ. ಈ ನಿಮಯಗಳು ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳ ನಿಮಯಗಳಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿವೆ.
ಈಗ ಇಂತಹ ಗುರುತರ ಅಪವಾದವನ್ನು ಹೊತ್ತುಕೊಂಡು ಇನ್ನೂ ಪ್ರಕರಣದ ಇತ್ಯರ್ಥ ಆಗುವುದರೊಳಗಾಗಿ ರಾಜ್ಯ ಸರ್ಕಾರ ಮತ್ತೊಂದು ಸಿನಿಮಾ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಗೆ ಬಿ ಎಸ್ ಲಿಂಗದೇವರು ಅವರನ್ನು ನೇಮಕ ಮಾಡಿರುವುದು ಗಂಭೀರ ಅನುಮಾನಗಳನ್ನು ಪ್ರಶ್ನೆಗಳನ್ನು ಹುಟ್ಟುಹಾಕಿದೆ.