ಅಜ್ಜಂಪೀರ್‌ ಖಾದ್ರಿಗೆ ಉತ್ತಮ ಸ್ಥಾನ; ರಾಜೀನಾಮೆ ನೀಡಲ್ಲ; ಸಿದ್ದರಾಮಯ್ಯ ಘೋಷಣೆ

Most read

ಶಿಗ್ಗಾಂವ್: ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ  ಚುನಾವಣಾ ಪ್ರಚಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯಯ್ಯ ಅವರು ಕ್ಷೇತ್ರವನ್ನು ಪಟಾಣ ಅವರಿಗೆ ಬಿಟ್ಟುಕೊಟ್ಟಿರುವ ಅಜ್ಜಂಪೀರ್‌ ಖಾದ್ರಿ ಅವರಿಗೆ ಉತ್ತಮ ಸ್ಥಾನ ನೀಡುವ ಭರವಸೆ ನೀಡಿದ್ದಾರೆ.

ಕ್ಷೇತ್ರದ  ಹುರಳಿಕುಪ್ಪಿ ಎಂಬ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾದ ಮುಖ್ಯಮಂತ್ರಿಗಳು ಈ ಭರವಸೆ ನೀಡಿದ್ದಾರೆ.

ಇದು ಕೇವಲ ಉಪಚುನಾವಣೆಯಲ್ಲ. ನನಗೆ, ನನ್ನ ಸರ್ಕಾರಕ್ಕೆ ಹೆಚ್ಚಿನ ಶಕ್ತಿ ನೀಡುವ ಮಹತ್ವದ ಚುನಾವಣೆ. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಪೈಲ್ವಾನ್ ಪಠಾಣ್ ಅವರನ್ನು ಗೆಲ್ಲಿಸುವ ಮೂಲಕ ನನಗೆ ಶಕ್ತಿ ತುಂಬಿ ಎಂದು ಕೋರಿದ್ದಾರೆ.  ನಾವು ನುಡಿದಂತೆ ನಡೆದಿದ್ದೇವೆ. ಸರ್ಕಾರ ಬಂದ 8 ತಿಂಗಳಲ್ಲೇ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಇಡೀ ರಾಜ್ಯದ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುತ್ತಿದ್ದೇವೆ. ಇದಕ್ಕಾಗಿ ಗ್ಯಾರಂಟಿ ಯೋಜನೆಗಳಿಗಾಗಿ 56 ಸಾವಿರ ಕೋಟಿ ರೂಪಾಯಿಯನ್ನು ನೇರವಾಗಿ ರಾಜ್ಯದ ಜನರ ಖಾತೆಗೆ ಹಾಕಿದ್ದೇವೆ ಎಂದು ವಿವರಿಸಿದರು.

ಬಸರಾಜ ಬೊಮ್ಮಾಯಿ ಅವರು ಕೃಷಿ,  ಗೃಹ ಸಚಿವರಾಗಿ, ಮುಖ್ಯಮಂತ್ರಿಯಾಗಿ ಕ್ಷೇತ್ರಕ್ಕೆ ಏನು ನೀಡಿದ್ದಾರೆ ಎಂದು ನೀವೇ ಹುಡುಕಿ ಹೇಳಬೇಕು ಎಂದು ವ್ಯಂಗ್ಯವಾಡಿದ ಅವರು  ಕ್ಷೇತ್ರಕ್ಕೆ ಏನೂ ಕೆಲಸ ಮಾಡದ ಬೊಮ್ಮಾಯಿ ಅವರ ಪುತ್ರನಿಗೆ ಮತ ಹಾಕುವುದರಲ್ಲಿ ಅರ್ಥವೇ ಇಲ್ಲ ಎಂದು ಟೀಕಿಸಿದರು.

40 ವರ್ಷದಲ್ಲಿ ಸಣ್ಣ ಕಪ್ಪು ಚುಕ್ಕೆ ಕೂಡ ಇಲ್ಲದ ನನ್ನನ್ನು ಕೇವಲ ಷಡ್ಯಂತ್ರದಿಂದ ಕೆಳಗಿಳಿಸಲು ಬಿಜೆಪಿ ಮುಖಂಡರು ಪಿತೂರಿ ಮಾಡುತ್ತಿದ್ದಾರೆ. ಇದಕ್ಕೆ ನೀವು ಅವಕಾಶ ನೀಡ್ತೀರಾ ? ಬಿಜೆಪಿ ಷಡ್ಯಂತ್ರ ಸೋಲಿಸಬೇಕೆಂದರೆ ಶಿಗ್ಗಾಂವ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಎಂದು ಕರೆ ನೀಡಿದರು.

ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡ್ತಾರೆ ಎಂದು  ವಿಜಯೇಂದ್ರ, ಆರ್.ಅಶೋಕ, ಯತ್ನಾಳ್ ಎಲ್ಲರೂ ಬೊಬ್ಬೆ ಹೊಡೆಯುತ್ತಿದ್ದಾರೆ. ರಾಜ್ಯದ ಜನರ ನೈತಿಕ‌ ಶಕ್ತಿ ನನ್ನ ಜೊತೆಗೆ ಇರುವವರೆಗೂ ನಾನು ಬಿಜೆಪಿ ಪರಿವಾರದ ಷಡ್ಯಂತ್ರಕ್ಕೆ ಹೆದರುವ, ಬೆದರುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಐದಕ್ಕೆ ಐದೂ ವರ್ಷ ಪೂರೈಸುವುದು ಶತಸಿದ್ದ ಎಂದು ಘೋಷಿಸಿದರು.

ವಕ್ಫ್ ಆಸ್ತಿ ಸರ್ಕಾರದ ಆಸ್ತಿ ಅಲ್ಲ. ಅದು ವಕ್ಫ್ ಬೋರ್ಡ್ ಗೆ ಸೇರಿದ  ಆಸ್ತಿ. ಈ ಆಸ್ತಿ ಒತ್ತುವರಿ ಮಾಡಿದವರನ್ನು ತೆರವುಗೊಳಿಸಲು ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಅವಧಿಯಲ್ಲೂ ನೋಟಿಸ್ ನೀಡಿದ್ದಾರೆ. ಒತ್ತುವರಿ ತೆರವುಗೊಳಿಸಿದ್ದಾರೆ.  ಆದರೆ ನಮ್ಮ‌ ಸರ್ಕಾರ ಮಾತ್ರ ಯಾವುದೇ ರೈತರಿಗೂ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿ ನೋಟಿಸ್ ವಾಪಸ್ ಪಡೆಯಲು ಸ್ಪಷ್ಟ ನಿರ್ದೇಶನ ನೀಡಿದ್ದೇನೆ ಎಂದು ಬಹಿರಂಗ ಸಭೆಯಲ್ಲಿ ತಿಳಿಸಿದರು. ಅಜ್ಜಂಪೀರ್ ಖಾದ್ರಿ ಅವರಿಗೆ ಒಳ್ಳೆ ಸ್ಥಾನ ಕೊಡ್ತೇವೆ. ಶಿಗ್ಗಾಂವ್ ನಲ್ಲಿ ಪಠಾಣ್ ಅವರನ್ನು ಗೆಲ್ಲಿಸಿ ನನಗೆ ಶಕ್ತಿ ನೀಡಿ ಎಂದು ಸಿಎಂ‌ ಸಿದ್ದರಾಮಯ್ಯ ಮನವಿ ಮಾಡಿದರು. ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಹಾಜರಾಗುವುದಾಗಿಯೂ ಅವರು ತಿಳಿಸಿದ್ದಾರೆ.

More articles

Latest article