ಕತೆಗಾರ್ತಿಯಾಗಿ ಕಾದಂಬರಿಗಾರ್ತಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಪ್ರಸಾದ್ ಅವರಐದನೇ ಕಥಾ ಸಂಕಲನ ʼಚೋದ್ಯʼ . 13 ಕಥೆಗಳನ್ನು ಒಳಗೊಂಡ ಈ ಸಂಕಲನದ ಕುರಿತ ದೇವಿಕಾ ನಾಗೇಶ್ ಅವರ ವಿಮರ್ಶೆ ಇಲ್ಲಿದೆ.
“ಪ್ರೀತಿಗೆ ಶರಣಾಗುವುದೊಂದನ್ನು ಉಳಿದು ಬೇರೆ ಎಲ್ಲವೂ ನಿರರ್ಥಕವೆನಿಸುವ ಕಾಲವೊಂದು ಬರಲಿದೆ.” ಜಲಾಲುದ್ದೀನ್ ರೂಮಿ.
ಕತೆಗಾರ್ತಿಯಾಗಿ ಕಾದಂಬರಿಗಾರ್ತಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಪ್ರಸಾದ್ ಅವರ ಐದನೇ ಕಥಾ ಸಂಕಲನ ಚೋದ್ಯ. ಲೋಕಾಂತವೊಂದು ಏಕಾಂತವಾಗಿ ಹುತ್ತ ಗಟ್ಟುವ ಅಪರೂಪದ ಕ್ಷಣವೇ ಕಥನ ಕಥೆ ಹುಟ್ಟುವ ಕ್ಷಣ. ಈ ಏಕಾಂತವನ್ನು ಸದಾ ದಕ್ಕಿಸಿಕೊಳ್ಳುತ್ತ ಅದನ್ನು ದಿವ್ಯ ವಾಗಿಸುತ್ತ ಕಥೆ ಬರೆಯುವ ಅನುಪಮಾ ಪ್ರಸಾದ್ ಸಾರಾ ಅಬೂಬಕರ್ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಡಾ.ಬೆಸಗರಹಳ್ಳಿ ರಾಮಣ್ಣ ಸಾಹಿತ್ಯ ಪ್ರಶಸ್ತಿ, ಸಂಗಂ ಸಾಹಿತ್ಯ ಪ್ರಶಸ್ತಿ ಇತ್ಯಾದಿ ಹಲವು ಸಾಹಿತ್ಯ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿ ಕೊಂಡಿದ್ದಾರೆ. ವಸ್ತುಗಳ ಆಯ್ಕೆಯಲ್ಲಿ ವಿಷಯ ವೈವಿಧ್ಯತೆಯನ್ನು ಒಳಗೊಂಡಿರುವ 13 ಕಥೆಗಳನ್ನು ಒಳಗೊಂಡ ಸಂಕಲನ ಚೋದ್ಯ.
ಇಲ್ಲಿನ ಕಥಾ ಪಾತ್ರಗಳು ಮೂಡಿಸುವ ಜೀವನ ಮೌಲ್ಯಗಳು ಜೀವನ ಪ್ರೀತಿಯ ನಿತ್ಯದ ಹುಡುಕಾಟದಲ್ಲಿ ಬದುಕಿನ ದಾರುಣ ಸತ್ಯಗಳಿಗೆ ಮುಖಾಮುಖಿಯಾಗುತ್ತಾ ಮಾನವೀಯ ತುಡಿತಗಳಿಗೆ ಸ್ಪಂದಿಸುತ್ತಲೇ ವಾಸ್ತವದಲ್ಲಿ ಮಿಂದೆದ್ದು ಸೈ ಅನ್ನಿಸಿಕೊಂಡಂತಹವು. ‘ಮೊಲ್ಲೆ ಹೂ ಮಾದೇವಿ ಮೀಮಾಂಸೆ ‘ಕಥೆಯ ನಾಯಕಿ ಮಾದೇವಿ ಕೂಲಿ ಕಾರ್ಮಿಕರಾದ ಸ್ಲಂ ನಿವಾಸಿ. ಸ್ವಂತ ವ್ಯಾಪಾರ ಮಾಡಿ ಸರೀಕರ ಹೊಟ್ಟೆ ಕಿಚ್ಚಿನ ನಡುವೆಯೂ ಆರಕ್ಕೇರದೆ ಮೂರಕ್ಕೆ ಇಳಿಯದೆ ಸ್ವಾಭಿಮಾನದ ಬದುಕು ಕಟ್ಟಿ ಕೊಂಡವಳು. ಗಂಡ ಯಲ್ಲಪ್ಪ ಕುಡಿತದ ಅಮಲಿನಲ್ಲಿ ಹೊಡೆಯ ಬಂದಾಗ ಇಬ್ಬರ ನಡುವೆ ನಡೆದ ಸೆಣಸಾಟದಲ್ಲಿ ಶೆಡ್ಡಿನೊಳಗಿದ್ದ ಕಲ್ಲು ತಾಗಿ ಆಕಸ್ಮಿಕ ಸಾವನ್ನಪ್ಪಿದ್ದಾಗ ಕಣ್ಣಿಗೆ ಕಾಣದ ದೇವರಂತೆ ಮಾದೇವಿಯ ಪಾಲಿಗೆ ಒದಗಿ ಬಂದವ ಪೊಲೀಸು ನಾಗಪ್ಪ. ಮಗ ಮಾದೇಶನನ್ನು ದುಡಿದು ಓದಿಸಬೇಕು ಎನ್ನುವ ತಾಯಿಯ ಆಸೆಗೆ ಕಲ್ಲು ಹಾಕಿದವ ಜೋಸೆಫ್. ಒಂದು ಹಂತದಲ್ಲಿ ತನ್ನ ಕರುಳ ಕುಡಿ ಮಾದೇಶ ತನ್ನನ್ನು ತೊರೆದಾಗಲೂ ಕ್ಯಾರೆ ಅನ್ನದೇ ಬದುಕಿದ ಮಾದೇವಿ ತಾನು, ತನ್ನದು ಎನ್ನುವ ವ್ಯಾಮೋಹ ತೊರೆಯುತ್ತಾಳೆ. ತಾಯಿ ಇಲ್ಲದ ಹುಡುಗ ಮಂಜನಿಗೆ ಶಿಕ್ಷಣ ಮುಂದುವರಿಸುವುದಕ್ಕೆ ಬೇಕಾದ ಅನುಕೂಲತೆಯನ್ನು ತನ್ನ ವ್ಯಾಪ್ತಿಗೆ ದಕ್ಕಿದಂತೆ ಮಾಡಿಕೊಡುತ್ತಾಳೆ. ಜೀವನ ನಡೆಸಲು ಗುರಿ ಮಾದರಿಗಳು ಬೇಕು ಎನ್ನುವವರ ನಡುವೆ ಯಾವ, ಯಾರ ಸಮೀಕರಣಕ್ಕೂ ದಕ್ಕದೆ ಇವರಂತವರು ಇರುವುದರಿಂದಲೇ ಇಂದಿಗೂ ಭೂಮಿಯಲ್ಲಿ ಇಂದಿಗೂ ಮಳೆ ಬೆಳೆ ಇದೆ ಎನ್ನುವುದಕ್ಕೆ ಮಾದರಿಯಾಗುತ್ತಾಳೆ.
“ಕುಂತ್ಯಮ್ಮ ಳ ಮಾರಾಪು” ಸಂಕಲನದ ಒಂದು ವಿಶಿಷ್ಟ ಕತೆ. “ಸಾಮಾಜಿಕ ಸಂದರ್ಭಗಳ ಹಿನ್ನೆಲೆಯಲ್ಲಿ ವ್ಯಕ್ತಿಗತ ಬದುಕಿನ ದುರ್ದಮ್ಯತೆಯಲ್ಲಿ ಯಾರು ತಪ್ಪು ಎಂದು ತೀರ್ಮಾನಗಳನ್ನು ಘೋಷಿಸುವುದು ಸಾಧ್ಯವಿಲ್ಲ “ ಎನ್ನುವ ಎಂ.ಎಸ್. ಆಶಾದೇವಿಯವರ ಮಾತುಗಳು ಈ ಕಥೆಯ ಪಾತ್ರಗಳ ಒಳಗುದಿಯನ್ನು ಮಾರ್ಮಿಕವಾಗಿ ತೆರೆದಿಡುತ್ತದೆ. ನಿತ್ಯ ನರಕವೆನ್ನುವಂತೆ ಬದುಕುತ್ತಿರುವ ಕುಂತ್ಯಮ್ಮಳ ಸಾವು… ನಮ್ಮ ಎಲ್ಲರ ಮನೆಯ ಕದವನ್ನು ಯಾವ ಹೊತ್ತೂ ತಟ್ಟ ಬಹುದಾದ ಬೆನ್ನ ಹಿಂದಿನ ಸತ್ಯ…. ಮತ್ತು ಈ ನಡುವೆ ಬದುಕುತ್ತಿರುವವರ ಬಿಡುಗಡೆಯ ಹಾದಿಯೂ ಹೌದು. ಕಥೆಯಲ್ಲಿ ಬರುವಕುಂತ್ಯಮ್ಮಳ ಮಾರಾಪು ನಾವೆಲ್ಲರೂ ಹೊತ್ತು ನಡೆಯಲೇಬೇಕಾದ ನಮ್ಮೆಲ್ಲರ ಬದುಕಿನ ಗಂಟು ಆಗಿ ಕಥೆಯ ಉದ್ದಕ್ಕೂ ರೂಪಕವಾಗಿ ಮೂಡಿಸುವ ಅನುಭವ ವಿಶಿಷ್ಟವಾದದ್ದು. ಹೆಣ್ಣಿನ ಘನತೆ, ಮನ ಸ್ಥೈರ್ಯ ಮುಕ್ಕಾಗದಂತೆ ಯಾವುದೇ ಅತಿರೇಕವಿಲ್ಲದೆ ಸಹಜವಾಗಿ ಮೂಡಿ ಬಂದ ಕಥೆಯಿದು.
ಮೋಳಜ್ಜಿ ಯ ಚೋದ್ಯಗಳು’ ಈ ಸಂಕಲನದ ಮತ್ತೊಂದು ಗಮನಾರ್ಹ ಕಥೆ. ರಾಜೇಶ್ವರಿ ಯಾನೆ ಮೋಳಿ ಮನೆಯ ಬಡತನ ಮತ್ತು ಕುರೂಪದ ಕಾರಣಕ್ಕೆ ವಿವಾಹವಿಲ್ಲದೆ ಉಳಿದವಳು. ಹೆಂಡತಿ ಸತ್ತ ರಂಗಮಯ್ಯ ನ ಅಕ್ಕ ಗೋದಾವರಿಯ ಕಣ್ಣಿಗೆ ಬಿದ್ದು ವಿವಾಹ ಭಾಗ್ಯ ಕಂಡವಳು. ರಂಗಮಯ್ಯನನ್ನು ಮದುವೆಯಾದವಳು. ಇವರಿಗೆ ಮಕ್ಕಳು ಹುಟ್ಟಿದರು. ಈಕೆ ಅತ್ತಿಗೆಯ ಮೇಲ್ವಿಚಾರಣೆಯಲ್ಲಿ ಕೋಡಿ ಮನೆಯ ಜವಾಬ್ದಾರಿ ಹೊತ್ತಳು. ಕೆಲಸ ಮಾಡಲಿಕ್ಕೆಂದೇ ಹುಟ್ಟಿದಳೇನೋ ಎನ್ನುವಂತೆ ಬದುಕುತ್ತಿದ್ದ ಮೋಳಿಯಾನೆ ರಾಜೇಶ್ವರಿ ಸ್ವತ: ಅವಳ ಮಕ್ಕಳಿಗೆ ಹಾಲು ಉಣಿಸುತ್ತಿದ್ದದ್ದು ಬಿಟ್ಟರೆ ತಾನು ಹೊತ್ತು ಹೆತ್ತ ಮಕ್ಕಳಿಗೆ ತಾಯಿಯಾಗುವ ಬಯಕೆ ತನ್ನ ಮಕ್ಕಳನ್ನು ಎತ್ತಿ ಆಡಿಸುವ ಮೂಲಕ ಅನುಭವಿಸಲಿಲ್ಲ. ಆಕೆ ನಿಜ ಅರ್ಥದಲ್ಲಿ…ತಾಯಿಯಾದದ್ದು ಅತ್ತಿಗೆ ಗೋದಾವರಿ ಸಾವನ್ನಪ್ಪಿದ ನಂತರ. ಗಂಡ ಪ್ರೀತಿಸುವ ಗಂಡನಾದನೆ ಅಂದರೆ ಇಲ್ಲ… ತಾನು ಆಳಲಿಕ್ಕೆ ಇರುವವನು ಎನ್ನುವ ದರ್ಪದ ಗಂಡನಿಗೆ ಒಮ್ಮೆ ಈಕೆ ಎದುರಾಡಿದ್ದೇ ಅಪರಾಧವಾಗಿ ಗಂಡ ಹೆಂಡಿರ ನಡುವೆ ಇದ್ದ ದೈಹಿಕ ಸಂಪರ್ಕವೂ ಮಾತೂ ಸಂಪೂರ್ಣ ನಿಂತು ಹೋಗಿತ್ತು. ಆದರೆ ಕೋಡಿ ಮನೆಯ ಶ್ರೇಯಸ್ಸಿನಲ್ಲಿ ರಂಗಮಯ್ಯರಷ್ಟೇ ಪರಿಶ್ರಮ ಮೋಳಿ ಅಜ್ಜಿಯದ್ದು ಇತ್ತು. ಬಡತನದಲ್ಲಿ ಅರಳಿದ ಈ ಕುಸುಮ ಮಕ್ಕಳ ತಾಯಿಯಾಗಿ, ಕೋಡಿಮನೆಯ ಅಜ್ಜಿಯಾಗಿ ಬದುಕು ಬೆಸೆಯುವ ವಿವೇಕವಾಗಿ ತುಂಬು ಜೀವನ ನಡೆಸಿದ್ದೇ ಒಂದು ಚೋದ್ಯ ಎನ್ನುವಂತೆ ಕಥೆ ಅರಳುತ್ತದೆ.
ಅನುಪಮಾ ಅವರ ಕಥೆಗಳಲ್ಲಿರುವ ಒಂದು ವೈಶಿಷ್ಟ್ಯತೆ ಎಂದರೆ ಕಥಾ ವಸ್ತುವಿಗೆ ಪೂರಕ ಎನ್ನುವಂತೆ ಸಮಕಾಲೀನ ಬದಲಾವಣೆಗಳನ್ನು ಹಳ್ಳಿ ಪಟ್ಟಣಗಳ ಸಂದರ್ಭದ ಅಗತ್ಯಕ್ಕೆ ಅನುಕೂಲವಾದ ವಸ್ತುಗಳನ್ನು ಬಳಸುವುದು. ಡೈಪರ್, ಸ್ಯಾನಿಟರಿ ಪ್ಯಾಡು ಆಧುನಿಕತೆಯ ಕೊಡುಗೆಯಾದರೂ ಇವು ನೀಡುವ ಅನುಕೂಲಗಳು ಕುಂತ್ಯಮ್ಮಗೆ ಸಹಕಾರಿಯಾಗಿದೆ. ಆದರೆ ಡೈಪರ್ಗಳನ್ನು ಬೆಂಕಿಯಲ್ಲಿ ಸುಡುವ ಪ್ರಸಂಗ ಆಧುನಿಕತೆಯ ಕೊಡುಗೆ ತರುವ ಗಂಡಾಂತರವನ್ನು ಸೂಚ್ಯವಾಗಿ ಹೇಳುತ್ತದೆ.
‘ಸ್ಯಾನಿಟರಿ ಪ್ಯಾಡ್ ‘ಕಥೆ ವಿವರಿಸುವುದು ಬದಲಾದ ಜೀವನ ಕ್ರಮ, ಗಂಡು ಹೆಣ್ಣು ಇಬ್ಬರೂ ನಿಭಾಯಿಸಲು ಶಕ್ತರಾಗಬೇಕಾಗಿರುವ ಪೋಷಕತ್ವದ ಜವಾಬ್ದಾರಿ. ಲಿಂಗತ್ವದ ಮಿಥ್ ಗಳನ್ನು ದಾಟಿ ಲಿಂಗ ಸಮಾನತೆಯ ನೆಲೆಯಲ್ಲಿ ಬದುಕು ವಿಸ್ತರಿಸಿಕೊಂಡ ದಾಂಪತ್ಯದ ಮಾದರಿ ದಂಪತಿಗಳು ಡಾ. ದಿವಾಕರ್ ಡಾ. ಶಾಲಿನಿ. ಇವರ ಮಗಳು ದಿವ್ಯ ಈ ಕಾಲದಲ್ಲಿ ಸಾಮಾನ್ಯವೇ ಅನ್ನುವಂತೆ ಹದಿಹರೆಯಕ್ಕೆ ಮುನ್ನವೇ ಋತುಚಕ್ರ ಪ್ರಾರಂಭವಾದವಳು. ಅಮ್ಮನ ಅನುಪಸ್ಥಿತಿಯಲ್ಲಿ ಅಪ್ಪ ಮಗಳ ಆತಂಕ ಗೊಂದಲಗಳಿಗೆಲ್ಲ ನ್ಯಾಯ ಒದಗಿಸಲು ಪ್ರಯತ್ನಿಸುತ್ತಾನೆ. ಆದರೆ ಅಮಾಯಕ ಮಗಳಿಗೆ ಗೊತ್ತಿಲ್ಲದಂತೆ ನಡೆದ ಘಟನೆಯಿಂದಾಗಿ ಆದ ಅನಾಹುತದ ಸಂಪೂರ್ಣ ಹೊರೆಯನ್ನು ತಾನು ವಹಿಸಿಕೊಂಡು ಆಗ ಮಗಳ ಮುಗ್ಧತೆಗೆ ಯಾವುದೇ ರೀತಿಯಲ್ಲಿ ನೋವು ಆಗದಂತೆ ಅದನ್ನು ಅಪ್ಪ ದಿವಾಕರ್ ನಿರ್ವಹಿಸಿದ ರೀತಿ ವಿಸ್ಮಯ ಹುಟ್ಟಿಸುವಂತದು. ಇದು ಒಂದು ಹಂತದಲ್ಲಿ ಗಂಡ ಹೆಂಡತಿಯರ ನಡುವಿನ ಸಂಬಂಧದಲ್ಲಿ ಬಿರುಕು ತರಲು ಕಾರಣವಾಗುತ್ತದೆ. ಆದರೆ ದಿವಾಕರ ವಹಿಸಿದ ಮೌನ… ಮಗಳು ದಿವ್ಯ ಪ್ರಾಪ್ತ ವಯಸ್ಸಿಗೆ ಬಂದ ನಂತರ ತನ್ನ ಬದುಕು ನೇರಮಾಡಲು ಅಪ್ಪ ಎದುರಿಸಿದ ಸಂಘರ್ಷಗಳನ್ನು ಅರಿತು ಅಪ್ಪನನ್ನು ಭೇಟಿಯಾಗುತ್ತಾಳೆ. ಗಂಡು ಲೋಕವನ್ನು ನಾವು ಅರಿಯುವಾಗ ಅವರಲ್ಲಿನ ಅಹಂನ್ನು ಒಪ್ಪಿ ಅಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇದೆ . ಮತ್ತು ಅಂತಿಮವಾಗಿ ಗೆಲ್ಲುವುದು ಪ್ರೀತಿ ಒಂದೇ ಎನ್ನುವ ವಾಸ್ತವವನ್ನು ಧ್ವನಿ ಪೂರ್ಣವಾಗಿ ಕಥೆ ಕಟ್ಟಿಕೊಡುತ್ತದೆ.
‘ಖೆಡ್ದಾ’ ನಗರ ಜೀವನದ ಒಳಸುಳಿಗಳನ್ನು ಅದರ ನಾಜೂಕುತನ ವಿಕಾರಗಳನ್ನು ತೆರೆದಿಡುವ ಕಥೆ.
ಕಡಲು ಕಡೆದ ಚೆಂಡು ಕಡಲಿನೊಂದಿಗೆ ಬೆಸೆದ ಬೆಸ್ತರ ಜೀವನ ಸಂಘರ್ಷವನ್ನು ಮಾಡಿಕೊಡುವ ಕಥೆ. ಅಪ್ಪನ ಅಕಾಲ ಮೃತ್ಯು ಸೂರ್ಯರೇಖ ಎನ್ನುವ ಮುಗ್ಧ ಹುಡುಗಿಗೆ ಉಂಟು ಮಾಡಿದ ಆಘಾತ. ಹಳ್ಳಿಯಲ್ಲಿ ಕಮರಿ ಹೋಗಬಹುದಾಗಿದ್ದ ಕ್ರೀಡಾ ಪ್ರತಿಭೆಯೊಂದು ಗೋವಿಂದ ಮೇಷ್ಟ್ರು ಎನ್ನುವ ಪಿ. ಟಿ. ಸರ್ ಅವರ ಕಣ್ಣಿಗೆ ಬಿದ್ದು ಹಳ್ಳಿಯಿಂದ ದಿಲ್ಲಿಯವರೆಗೆ ಮಿಂಚಲು ಇರುವ ಸಾಧ್ಯತೆಗಳ ಕಡೆ ಬೆಳಕು ಚೆಲ್ಲುವ ಕಥೆಯಿದು. ಪ್ರತಿಭೆಯನ್ನು ಗುರುತಿಸಿ ಪೋಷಿಸಿ ಬೆಳೆಸುವಲ್ಲಿ ಇರಬೇಕಾದ ತಾಯಿ ಕರುಳು, ಅಂತ:ಕರಣ ಈ ಭೂಮಿಯ ಅನಂತ ಜೀವಜಾಲವನ್ನು ಕಾಯುವ ಪೊರೆಯುವ ಶಕ್ತಿ ಎನ್ನುವ ತನ್ಮಯತೆಯನ್ನು ಮೂಡಿಸುವಲ್ಲಿ ಕಥೆ ಯಶಸ್ವಿ ಯಾಗಿದೆ.
‘ಕಳಚಿದ ಬೇರು ‘ಬದಲಾದ ಸನ್ನಿವೇಶದಲ್ಲಿ ಶಿಕ್ಷಣ, ವೈದ್ಯಕೀಯ ಕ್ಷೇತ್ರ ದಂಧೆಯಾಗಿ ಬೆಳೆಯುತ್ತಿರುವ ಸೂಕ್ಷ್ಮವನ್ನು ತೆರೆದಿಡುವ ಕಥೆ…ವಲಸೆಯಿಂದ ಆಗುವ ದುರಂತ ಮತ್ತು ಕುಟುಂಬ ಜೀವನದಲ್ಲಿ ಬರಿದಾಗುತ್ತಿರುವ ಭಾವ ಕೋಶದ ತಂತುಗಳ ಸೂಕ್ಷ್ಮ ಸಂವೇದನೆ ಇರುವ ಕಥೆ.. ‘ಹುಸೇನನ ಅಂಗಡಿಯಲ್ಲಿ’ ಮುಖಾಮುಖಿಯಾಗುವ ಸಹಪಾಠಿಗಳು ಮಾಲಿನಿ, ಝಕೀರ್… ಶಾಲಾ ದಿನಗಳನ್ನು ನೆನಪಿಸಿ ಕೊಳ್ಳುತ್ತಾರೆ. ಆಟದ ಮೈದಾನದಲ್ಲಿ ಕಳಚಿ ಬಿದ್ದ ಕೆಂಪು ರಕ್ತದ ಬಟ್ಟೆಯೇ ಕಾಮಾಕ್ಷಿ ಎಂಬ ಸಹಪಾಠಿಯನ್ನು ಶಾಲೆ ತೊರೆಯುವಂತೆ ಮಾಡಿದ ಪ್ರಸಂಗ ಮಾಲಿನಿಗೆ ನೆನಪಾಗಿ ಬಾಲ್ಯದ ಆ ದಿನಗಳಲ್ಲಿ ಮುಟ್ಟು ತಂದೊಡ್ಡಿದ ಕೀಳರಿಮೆ ಹೆಣ್ಣು ಮಕ್ಕಳನ್ನು ಶಿಕ್ಷಣ ವಂಚಿತರಾಗಿಸಿದ ಸನ್ನಿವೇಶ ಆ ಕಾಲದ ವಾಸ್ತವವನ್ನು ಈ ಕಥೆ ನಿರೂಪಿಸುತ್ತದೆ
’ಮಥಾಯ್ ಡಾಕ್ಟ್ರ ಧರ್ಮ ಸಂಕಟ ‘ಬಹುತ್ವ ಭಾರತ ಯಾವುದೇ ಹಳ್ಳಿಯಲ್ಲಾದರೂ ನಡೆಯಬಹುದಾದ ಕಥೆ. ದಿನನಿತ್ಯದ ಅಗತ್ಯಕ್ಕಾಗಿ ಜೊತೆಯಾದ ಮೂರು ಕುಟುಂಬಗಳು ಪರಸ್ಪರರನ್ನು ಗೌರವ ಪ್ರೀತಿಯಿಂದ ನಡೆಸಿ ಕೊಂಡವರು. ಇಲ್ಲಿ ನಾಗಿ ಮತ್ತು ಖತೀಜಮ್ಮನ ಪ್ರೀತಿ ಸ್ನೇಹ ಒಂದು ರೀತಿಯಲ್ಲಿ ವಿಶಿಷ್ಟವಾದದ್ದು. ಇಸ್ಮಾಯಿಲ್, ಖತೀಜಾ ದಂಪತಿಗಳಿಗೆ ಗರ್ಭ ಕಟ್ಟುವುದರಲ್ಲಿ ಸಮಸ್ಯೆ ಇದೆ ಎನ್ನುವುದು ತಿಳಿದಾಗ ಐವಿಎಫ್ ಮೂಲಕ ಮಗು ಪಡೆಯಲು ಖತೀಜಮ್ಮಾಗೆ ಅಂಡಾಣುವನ್ನು ದಾನ ನೀಡುವ ಮೂಲಕ ಮಗುವಾಗುವ ಸಾಧ್ಯತೆ ತಿಳಿದು ಅಂಡಾಣು ದಾನಕ್ಕೆ ಮುಂದೆ ಬಂದವಳು ನಾಗಿ. ಹೀಗೆ ಹುಟ್ಟಿದ ಮಗು ಸಲೀಮ. ಈ ಎಲ್ಲವುಗಳಿಗೆ ಸಾಕ್ಷಿಯಾದವರು ಮಥಾಯ್ ಡಾಕ್ಟರ್… ಜಾತಿ, ಮತ, ವರ್ಗಗಳಿಗೂ ಮೀರಿದ ಧರ್ಮವಿದೆ. ಅದೇ ಮಾನವಿಯ ಮೌಲ್ಯಗಳನ್ನು ಒಳಗೊಂಡಂತಹ ಪ್ರೀತಿ ಸಾಮರಸ್ಯ ಸಹಜೀವನವೆಂಬ ಜೀವನ ಮೌಲ್ಯ ವಿರುವ ಧರ್ಮ ಎನ್ನುವುದನ್ನು ಈ ಕಥೆ ಸರಳ ಸುಂದರವಾಗಿ ತೆರೆದಿಡುತ್ತದೆ.
ಅಗ್ರಹಾರ ಕೃಷ್ಣಮೂರ್ತಿ ಅವರು ಹೇಳುವಂತೆ ಅನುಪಮಾ ಈಗ ಬರೆಯುತ್ತಿರುವವರ ನಡುವೆ ತುಂಬಾ ಮುಖ್ಯ ಮತ್ತು ಸೂಕ್ಷ್ಮ ಮನಸ್ಸಿನ ಲೇಖಕಿ. ಬಡವರ ಬದುಕಿಗೆ ಘನತೆ ತರುವ ಕಥೆಗಳು ಇವರವು. ಜಾತಿ ಧರ್ಮಗಳಾಚೆಯ ಆರೋಗ್ಯ ಪೂರ್ಣ ದೃಷ್ಟಿ ಕೋನ ಇವರದು. ‘ಜಾಡರಿಯದ ದಾರಿಯಲ್ಲಿ’, ‘ಮುಖವಿಲ್ಲದವರು’,’ ಪುಟ್ಟ ದೇವತೆ ಯ ಸ್ವಪ್ನ ಗಳು ‘ಕೇರಳಾಪುರದಲ್ಲೊಂದು ದಿನ’ ಈ ಸಂಕಲನದ ಉಳಿದ ಕಥೆಗಳು.. ಇಲ್ಲಿ ವಲಸೆ ಇದೆ, ರಾಜಕಾರಣವಿದೆ, ಕೊಲೆ ಇದೆ, ಸರಕಾರಿ ವ್ಯವಸ್ಥೆ ಇದೆ. ವಿವಿಧ ಸ್ಕೀಮ್ ಗಳಿವೆ. ಕಣ್ಣೊರೆಸುವ ತಂತ್ರಗಾರಿಕೆ ಇದೆ. ಹಿಂಸೆ ಇದೆ. ದೌರ್ಜನ್ಯವಿದೆ.. ಹಾಗೆ ಇವೆಲ್ಲವುಗಳನ್ನು ಮೀರಿದಂತೆ ಜೀವನ ಪ್ರೀತಿ ಇದೆ. ಮಗುವಿನ ಮುಗ್ಧತೆ, ಅಮಾಯಕತೆಗಳಿವೆ. ಹದಿಹರೆಯದ ಹರ್ಷಉಲ್ಲಾಸಗಳಿವೆ.
ಒಟ್ಟಾರೆಯಾಗಿ ಕಥನ ಕಲೆ ಅನುಪಮಾ ಅವರಿಗೆ ಒಲಿದಿದೆ. ಯಾವುದೇ ವಸ್ತುವಾದರೂ ಅದನ್ನು ಹುತ್ತ ಗಟ್ಟಿಸುತ್ತ ಕಥೆಯಾಗಿಸುವ ಹಂತದಲ್ಲಿ ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುವ ಶ್ರದ್ಧೆ, ತಾಳ್ಮೆ ಇವರಿಗೆ ಸಿದ್ಧಿಸಿದೆ ಎನ್ನುವುದನ್ನು ಈ ಸಂಕಲನದ ಬಹುತೇಕ ಕಥೆಗಳು ಸಾಬೀತು ಪಡಿಸುತ್ತವೆ.
ದೇವಿಕಾ ನಾಗೇಶ್, ಮಂಗಳೂರು
ಕವಯಿತ್ರಿ, ಆಕ್ಟಿವಿಸ್ಟ್
ಇದನ್ನೂ ಓದಿ- ‘ಧಿಕ್ಕಾರ’ ನಾಟಕ : ವರ್ತಮಾನದ ಸುಡುಹಗಲಿಗೆ ನಾಟಕದ ಪೋಷಾಕು