Thursday, September 19, 2024

ಸಂವಿಧಾನ ವಿರೋಧಿ ಸರ್ಕಾರ ವಜಾ ಮಾಡಲು ರಾಜ್ಯಪಾಲರಿಗೆ ಮನವಿ: ಬಸವರಾಜ ಬೊಮ್ಮಾಯಿ

Most read

ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತಿಲ್ಲ. ದೇಶವಿರೋಧಿಗಳ ರಕ್ಷಣೆ ಮಾಡುತ್ತಿದೆ. ಈ ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಮಾಡುವುದಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ತೆರಳುವ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ‌ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ. ಮುಖ್ಯಮಂತ್ರಿ ಮಂಡಿಸಿರುವ ಬಜೆಟ್ ಸತ್ಯಕ್ಕೆ ದೂರವಾಗಿದೆ. ಈಗ ಪಾಕಿಸ್ತಾನ‌ ಪರ ಘೋಷಣೆ ಕೂಗಿದವರ ರಕ್ಷಣೆ ಮಾಡುತ್ತ ನೈತಿಕವಾಗಿ ದಿವಾಳಿಯಾಗಿದ್ದಾರೆ. ಇವರು ಪ್ರಜಾಪ್ರಭುತ್ವಕ್ಕೆ ದಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ‌ ಎಂದು ಆರೋಪಿಸಿದರು.

ವಿಧಾನ ಸೌಧದಲ್ಲಿಯೇ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು, ದೇಶದ ರಕ್ಷಣೆಗೆ ಇದು ಆಪತ್ತಿದೆ‌. ಅಧಿವೇಶನ ಮುಗಿದ ತಕ್ಷಣ ಇದೆಲ್ಲ ಮರೆತು ಹೋಗುತ್ತಾರೆ ಎಂದು ಕಾಂಗ್ರೆಸ್ ನವರು ಅಂದುಕೊಂಡಿದ್ದಾರೆ. ಆದರೆ, ಇದನ್ನು ರಾಜ್ಯದ ಜನರು ಮರೆಯುವುದಿಲ್ಲ. ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.

ಪಾಕ್ ಪರವಾಗಿ ಸರ್ಕಾರ ನಿಲ್ಲುತ್ತದೆ ಅಂದರೆ, ಈ ಸರ್ಕಾರ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ. ಈ ಸರ್ಕಾರ ಎಷ್ಟು ಬೇಗ ತೊಲಗುತ್ತದೆ ರಾಜ್ಯಕ್ಕೆ ಅಷ್ಟು ಒಳ್ಳೆಯದಾಗುತ್ತದೆ.

ಪಾಕಿಸ್ತಾನದ ಪರ ಘೊಷಣೆ ಕೂಗಿರುವುದು ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ. ಇವರು ಎಫ್ ಎಸ್ ಎಲ್ ವರದಿ ಕತೆ ಏಕೆ ಹೇಳುತ್ತಿದ್ದಾರೆ. ಈ ಪ್ರಕರಣ ಮುಚ್ಚಿ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಘಟನೆ ನಡೆದು 48 ಗಂಟೆ ಕಳೆದರೂ ಯಾರನ್ನೂ ಬಂಧಿಸಿಲ್ಲ. ಬೇರೆ ಘಟನೆ ನಡೆದಾಗ ಎಫ್ ಎಸ್ ಎಲ್ ವರದಿಗಾಗಿ ಕಾಯದೇ ಮೊದಲು ಬಂಧಿಸುತ್ತಿದ್ದರು. ಇದರಲ್ಲಿ ಏನೂ ಇಲ್ಲ ಅಂದರೆ ಪೊಲೀಸರು ಏಕೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡರು. ರಾಜ್ಯದ ಜನರು ಪಾಕಿಸ್ತಾನ ಪರ ವಾದವನ್ನು ಆಯ್ಕೆ ಮಾಡಿಲ್ಲ. ಇದು ಕನ್ನಡಿಗರ ಹಾಗೂ ಭಾರತೀಯರ ಹಾಗೂ ಸಂವಿಧಾನ ವಿರೋಧಿ ಸರ್ಕಾರ ಈ ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

More articles

Latest article