ನವದೆಹಲಿ: ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ25 ಮಂದಿ ಮೃತಪಟ್ಟಿದ್ದಾರೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಜಾಫರ್ ಎಕ್ಸ್ ಪ್ರೆಸ್ ರೈಲು ನಿಲ್ದಾಣಕ್ಕೆ ಆಗಮಿಸುವುದಕ್ಕೂ ಮುನನ್ ಈ ಸ್ಪೋಟ ಸಂಭವಿಸಿದೆ. ನಿಲ್ದಾಣದ ಬುಕ್ಕಿಂಗ್ ಕೇಂದ್ರದಲ್ಲಿ ಸ್ಫೋಟ ಸಂಭವಿಸಿದೆ ಎಂದು ಬಲೂಚಿಸ್ತಾನದ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಮುಜಾಮ್ ಜಾ ಅನ್ಸಾರಿ ತಿಳಿಸಿದ್ದಾರೆ. ಸ್ಫೋಟದಲ್ಲಿ 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಹೇಳಲಾಗಿದೆ.
ಗಾಯಾಳುಗಳನ್ನು ಸಿವಿಲ್ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. ಸುಮಾರು 100ಕ್ಕೂ ಹೆಚ್ಚು ಪ್ರಯಾಣಿಕರು ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾದಿಂದ ರಾವಲ್ಪಿಂಡಿಗೆ ಪ್ರಯಾಣಿಸಲು ರೈಲಿಗಾಗಿ ಕಾಯುತ್ತಿದ್ದರು. ಆಗ ಈ ಸ್ಫೋಟ ಸಂಭವಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸ್ಫೋಟದ ದೃಶ್ಯಗಳು ನಿಲ್ದಾಣದ ಸಿಸಿಟಿವಿಗಳಲ್ಲಿ ಸೆರೆಯಾಗಿವೆ.
ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಈ ನಿಲ್ದಾಣದಲ್ಲಿ ಆತ್ಮಾಹುತಿ ದಾಳಿ ನಡೆಸಿರುವುದು ತಾನೇ ಎಂದು ಪ್ರತ್ಯೇಕತಾವಾದಿ ಗುಂಪು ಹೇಳಿಕೊಂಡಿದೆ. ಈ ಸ್ಫೋಟವು ಆತ್ಮಾಹುತಿ ದಾಳಿಯಾಗಿರಬಹುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೆಂದು ಪ್ರತ್ಯೇಕತಾವಾದಿ ಗುಂಪಿನ ಹೇಳಿಕೆಯನ್ನು ಸಂಪೂರ್ಣವಾಗಿ ನಂಬುವಂತಿಲ್ಲ. ಆದ್ದರಿಂದ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ನೀಡಿರುವ ಹೇಳಿಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಪ್ರತ್ಯೇಕತಾವಾದಿ ಗುಂಪುಗಳು ಆಗಿಂದಾಗ್ಗೆ ಇಂತಹ ದಾಳಿಗಳನ್ನು ನಡೆಸುತ್ತವೆ. ಚೀನಾದ ಜನರನ್ನು ಸಹ ಇಲ್ಲಿ ಗುರಿಯಾಗಿಸಲಾಗಿದೆ. ಮುಖ್ಯವಾಗಿ ‘ಬೆಲ್ಟ್ ಅಂಡ್ ರೋಡ್’ ಯೋಜನೆಯಿಂದ ಪಾಕಿಸ್ತಾನಕ್ಕೆ ಬಂದವರನ್ನು ಗುರಿಯಾಗಿಸಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಸ್ಫೋಟಕಗೊಂಡ ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಸ್ಫೋಟಕಗಳನ್ನು ಚೀಲಗಳಲ್ಲಿ ಬಚ್ಚಿಟ್ಟು ಸ್ಪೋಟಿಸಿರಬಹುದು ಎಂದು ಹೇಳಿದ್ದಾರೆ.
ಸ್ಫೋಟಗೊಂಡ ದೃಶ್ಯಗಳ ವಿಡಿಯೋಗಳು ವೈರಲ್ ಆಗುತ್ತಿವೆ. ಕ್ವೆಟ್ಟಾ ನಿಲ್ದಾಣದ ಮೇಲ್ಛಾವಣಿಯು ಹಾರಿಹೋಗಿರುವುದನ್ನು ವಿಡಿಯೋಗಳಲ್ಲಿ ಕಾಣಬಹುದಾಗಿದೆ. ಟೀ ಅಂಗಡಿಯೊಂದು ಸಂಪೂರ್ಣ ಧ್ವಂಸಗೊಂಡಿದೆ. ಪ್ರಯಾಣಿಕರ ಲಗೇಜ್ ಚೆಲ್ಲಾಪಿಲ್ಲಿಯಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.