ಕಾರವಾರ: ಭಟ್ಕಳ ತಾಲ್ಲೂಕಿನ ಮುರುಡೇಶ್ವರದ ಸಮುದ್ರದಲ್ಲಿ ಮುಳುಗಿ ಕಣ್ಮರೆಯಾಗಿದ್ದ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲ್ಲೂಕಿನ ಎಂ.ಕೊತ್ತೂರು ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಮೂವರೂ ವಿದ್ಯಾರ್ಥಿನಿಯರ ಶವಗಳು ಪತ್ತೆಯಾಗಿವೆ; ದೀಕ್ಷಾ ಜೆ (15), ಲಾವಣ್ಯ (15) ಹಾಗು ವಂದನಾ (15) ಮೃತದೇಹ ಬುಧವಾರ ಮುರುಡೇಶ್ವರದ ಸಮುದ್ರದಲ್ಲಿ ಪತ್ತೆಯಾಗಿವೆ. ಎಲ್ಲ ವಿದ್ಯಾರ್ಥಿಗಳು 9 ನೇ ತರಗತಿಯಲ್ಲಿ ಓದುತ್ತಿದ್ದರು.
ಕರಾವಳಿ ಕಾವಲು ಪೊಲೀಸ್ ಪಡೆ ಹಾಗೂ ಸ್ಥಳೀಯ ಮೀನುಗಾರರ ಸಹಾಯದಿಂದ ಬುಧವಾರ ಮುಂಜಾನೆಯಿಂದ ಮೃತದೇಹದ ಪತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಬೆಳಿಗ್ಗೆ 11.30ಕ್ಕೆ ಇಬ್ಬರು ವಿದ್ಯಾರ್ಥಿನಿಯರ ಮೃತದೇಹ ಆರದ. ಎನ್.ಎಸ್ ರೆಸಿಡೆನ್ಸಿ ಹಿಂಬದಿ ಕಲ್ಲುಬಂಡೆ ಸಮೀಪ ಪತ್ತೆಯಾದರೆ, ಇನ್ನೋರ್ವ ವಿದ್ಯಾರ್ಥಿನಿ ಮೃತದೇಹ ಪಕ್ಕದ ಗುಡ್ಡದ ಕೆಳಗಡೆ ಪತ್ತೆಯಾಗಿದೆ.
ಕರಾವಳಿ ಪೊಲೀಸ್ ಕಾವಲು ಪಡೆ ಸಿಪಿಐ ಕುಸುಮಧರಾ ಅವರ ನೇತ್ರತ್ವದಲ್ಲಿ ಪತ್ತೆ ಕಾರ್ಯ ನಡೆಸಲಾಗಿತ್ತು. ಮಂಗಳವಾರ ಸಂಜೆ ಶ್ರಾವಂತಿ ಗೋಪಾಲಪ್ಪ (15) ಅವರ ಮೃತ ದೇಹ ಪತ್ತೆಯಾಗಿತ್ತು. ಇವರ ನಿಧನಕ್ಕೆ ಸಂತಾಪ ಸೂಚಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೃತ ಕುಟುಂಬಗಳಿಗೆ ತಲಾ ರೂ. 5 ಲಕ್ಷ ಪರಿಹಾರ ಘೋಷಿಸಿದ್ದರು.
ಕೊತ್ತೂರಿನ ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲೆ ಶಶಿಕಲಾ, ಅತಿಥಿ ಶಿಕ್ಷಕರಾದ ಚೌಡಪ್ಪ, ಶಾರದಮ್ಮ, ನರೇಶ್, ಸುನೀಲ್, ವಿಶ್ವನಾಥ್, ಲಕ್ಷಮ್ಮ ಅವರನ್ನು ನಿರ್ಲಕ್ಷ್ಯ, ಬೇಜವಾಬ್ದಾರಿ ಆರೋಪದಡಿ ಅಮಾನತು ಮಾಡಿ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಆದೇಶ ಹೊರಡಿಸಿದ್ದಾರೆ. ಇವರೆಲ್ಲರ ವಿರುದ್ಧ ಮುರುಡೇಶ್ವರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.