ರಂಗಭೂಮಿ | ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ
“ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ” ನಾಟಕದಲ್ಲಿ ಶ್ರೀರಾಮ್ ಸ್ವೀಟ್ ಬಾಕ್ಸ್ ಎಂಬ ಹೆಸರಿನಲ್ಲಿ ಬೀಫ್ ಬಾಕ್ಸ್ ಅನ್ನು ಇಟ್ಟಿದ್ದರು. ದಲಿತರ ನೋವುಗಳನ್ನು ಪ್ರತಿಬಿಂಬಿಸುವ ನಾಟಕದಲ್ಲಿ ಈ ದೃಶ್ಯ ಅವಶ್ಯಕತೆ ಇತ್ತೆ ? ಇದರಿಂದ ಅನಾವಶ್ಯಕವಾಗಿ ಒಂದು ಸಮುದಾಯದ ಭಾವನೆಗೆ ಧಕ್ಕೆ ಆಗುವುದಿಲ್ಲವೇ ? ನಾನು ಬಲಪಂಥೀಯನಲ್ಲದಿದ್ದರೂ, ನನಗೆ ಆ ದೃಶ್ಯ ಕಸಿವಿಸಿ ಎನ್ನಿಸಿತು. ಹಾಗೆಯೇ, ನಾಯಿ ಉಚ್ಚೆ ಹುಯ್ಯಬೇಡ… ಬಾ, ಅದು ಶಿವಲಿಂಗ ಅನ್ನುವ ದೃಶ್ಯ-ಸಂಭಾಷಣೆಗಳು ಯಾರಿಗೋ ಹರ್ಟ್ ಮಾಡುವುದಿಲ್ಲವೇ” ಎಂದು ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ ನಾಟಕ ನೋಡಿದ ಕಲಾವಿದರೊಬ್ಬರು ಪ್ರಶ್ನಿಸಿದ್ದಾರೆ.
ದಲಿತರು, ಬ್ರಾಹ್ಮಣರು, ಶೂದ್ರರು, ಶ್ರೀರಾಮ, ಶಿವಲಿಂಗ, ದೇವರುಗಳು, ಬೀಫ್ ಎಲ್ಲವೂ ಒಂದಿಲ್ಲೊಂದು ಗುರುತುಗಳು. ಕೆಲ ಸಮುದಾಯಕ್ಕೆ ಈ ‘ಗುರುತು’ಗಳು ಹೆಮ್ಮೆಯಾದರೆ ಇನ್ನು ಕೆಲ ಸಮುದಾಯಗಳಿಗೆ ಈ ಗುರುತುಗಳೇ ಸಹಿಸಲು ಅಸಾಧ್ಯವಾದ ಹೊರೆ ! ಶತಶತಮಾನಗಳಿಂದ ಈ ಹೊರೆಯನ್ನು ಹೊತ್ತುಕೊಂಡವರ ಕತೆಯೇ ‘ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ’ ನಾಟಕ. ಇಲ್ಲಿ ಶ್ರೇಷ್ಠತೆಯ ವ್ಯಸನಿ ಮನುಷ್ಯರಷ್ಟೇ ದೇವರೂ ಅಪರಾಧಿ !
ಅಸ್ಪೃಶ್ಯತೆ, ಅಸಮಾನತೆಯಿಂದ ಕೂಡಿರುವ ಜಾತಿ ವ್ಯವಸ್ಥೆಯಿಂದಲೇ ದಲಿತರು ಮತ್ತು ಶೋಷಿತ ಸಮುದಾಯಗಳು ಉದ್ಯೋಗ, ಶಿಕ್ಷಣ, ಬದುಕಿನ ಅವಕಾಶಗಳನ್ನು ಕಳೆದು ಕೊಂಡಿದ್ದಾರೆ. ಜಾತಿಯು ಧರ್ಮದೊಂದಿಗೆ ಮಿಳಿತವಾಗಿದ್ದು, ಧರ್ಮವನ್ನು ನಿರ್ಮೂಲನೆ ಮಾಡಬೇಕಾದರೆ ಅದರ ಗುರುತಾಗಿರುವ ದೇವರನ್ನು ನಮ್ಮ ಮನಸ್ಸಿನಿಂದ ಹೊರಗೆ ಒಗೆಯಬೇಕು. ಹಾಗಾಗಿಯೇ ಶೋಷಿತ ಸಮುದಾಯಗಳು ತಮಗೆ ಅವಕಾಶ ವಂಚಿಸಿದ ‘ಪಟ್ಟಭದ್ರ ದೇವರು’ಗಳನ್ನೂ ಶೋಷಕ ಸಮಾಜದ ಜೊತೆ ಸಮಾನಾಂತರಿಸಿ ಟೀಕಿಸಬೇಕಾಗುತ್ತದೆ ಮತ್ತು ವಿರೋಧಿಸಬೇಕಾಗುತ್ತದೆ. ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ ನಾಟಕ ಇದನ್ನೇ ಮಾಡುತ್ತದೆ.
‘ಜನರು ಹಳ್ಳಿಗಳಲ್ಲಿ ವಾಸಿಸಬೇಕು’ ಎಂದು ಗಾಂಧೀಜಿ ಹೇಳುತ್ತಾರೆ. ಆದರೆ ಶೋಷಕ ಸಮುದಾಯಕ್ಕೆ ‘ಹಳ್ಳಿಗಳಲ್ಲಿ ಪ್ರತ್ಯೇಕ ಗಣರಾಜ್ಯ’ ಇದೆ. ಅಂತಹ ಹಳ್ಳಿಗಳು ಶೋಷಿತ ಸಮುದಾಯಕ್ಕೆ ಕ್ರೂರವಾಗಿವೆ. ಗಾಂಧಿಯಂತಹ ರಾಷ್ಟ್ರೀಯವಾದಿಗಳಿಗೆ ಅರ್ಥವಾಗದ್ದು ವಿದ್ಯಾವಂತ ದಲಿತ ಯುವ ಸಮುದಾಯಕ್ಕೆ ಅರ್ಥವಾಗುತ್ತದೆ. ಹಳ್ಳಿಯ ಜಾತಿ ಅಸಮಾನತೆಯ ಸಮಾಜದಿಂದ ಹೊರ ಬಂದು ನಗರ ಸೇರಿದ ಯಾವ ದಲಿತನೂ ಮರಳಿ ಹಳ್ಳಿಗೆ ಮರಳಲು ಇಷ್ಟಪಡುವುದಿಲ್ಲ. ಹಾಗಂತ ನಗರಗಳೂ ದಲಿತರಿಗೆ, ಶೋಷಿತರಿಗೆ ಸಹ್ಯವಾಗಿಲ್ಲ. ನಗರಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಅಸ್ಪೃಶ್ಯತೆ ಜಾರಿಯಲ್ಲಿದೆ. ಅದನ್ನು ನಾಟಕವು ಬಹಳ ಮನಮುಟ್ಟುವಂತೆ ಪ್ರಸ್ತುತ ಪಡಿಸುತ್ತದೆ.
‘ಎಲ್ಲಿ ಮಿಂಚುಹುಳ ಇದೆಯೋ ಅಲ್ಲಿ ಮನುಷ್ಯ ವಾಸಿಸಬಹುದು’ ಎಂದು ಪರಿಸರ ವಿಜ್ಞಾನ ಹೇಳುತ್ತದೆ. ಹಾಗಾಗಿಯೇ ದಲಿತರು, ಶೋಷಿತರು ಈ ಸಮಾಜದಲ್ಲಿ ಬದುಕಬೇಕು ಎಂದರೆ ಶಿಕ್ಷಣ, ಉದ್ಯೋಗ, ಸ್ವಾಭಿಮಾನದ ಚಳವಳಿ, ಸಂಘರ್ಷವೆಂಬ ಮಿಂಚುಹುಳದ ಬೆನ್ನತ್ತಬೇಕು, ಪ್ರೀತಿಸಬೇಕು ಮತ್ತು ಎದೆಗಪ್ಪಿಕೊಳ್ಳಬೇಕು. ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರಿಂದ ರೋಹಿತ್ ವೇಮುಲಾವರೆಗೆ ಈ ಮಿಂಚುಹುಳದ ಬೆನ್ನತ್ತಿ ಹಿಡಿದು ಮುಂದಿನ ಜನಾಂಗಕ್ಕೆ ದಾಟಿಸಿದವರೇ ಆಗಿದ್ದಾರೆ. ಅವರೆಲ್ಲರೂ ಶೋಷಿತರಿಗೆ ಕಡುಕತ್ತಲೆಯ ಸಮಯದಲ್ಲಿ ದಾರಿ ತೋರುವ ಮಿನುಗು ಚುಕ್ಕೆಗಳಾದರು.
ನಗರ ಮತ್ತು ಹಳ್ಳಿಗಳಲ್ಲಿನ ಫ್ಯೂಡಲ್-ಬ್ರಾಹ್ಮಣ್ಯದ ಜಾತಿ ದೌರ್ಜನ್ಯಕ್ಕೆ ಪರಿಹಾರ ಏನು ? ನಾಟಕದ ಪ್ರಾರಂಭದಿಂದ ಕೊನೆಯವರೆಗೂ ಮೂರ್ನಾಲ್ಕು ಬಾರಿ ನಾವು ನಮಗೆ ಅರಿವಿಲ್ಲದಂತೆ ನಮ್ಮ ಕಣ್ಣಲ್ಲಿ ಕಣ್ಣೀರು ತುಂಬಿಕೊಳ್ಳುವ ಈ ದೃಶ್ಯಗಳನ್ನು ‘ಸಮಾಜದಿಂದ ಕಿತ್ತೊಗೆಯುವುದು ಹೇಗೆ ?’ ಎಂಬ ಪ್ರಶ್ನೆಗೆ ನಿರ್ದೇಶಕರು ನಾಟಕದ ಕೊನೆಗೆ ಉತ್ತರವನ್ನೂ ಕೊಟ್ಟಿದ್ದಾರೆ. ‘ಶ್ರೇಷ್ಠ ಕನಿಷ್ಠ ಅನ್ನೋದು ಇರೋವರೆಗೂ ಸಂಘರ್ಷ, ಹೋರಾಟ ಇದ್ದೇ ಇರ್ತದೆʼ ಎನ್ನುವ ರಾಕ್ ಶೈಲಿಯ ಹಾಡು ನಮ್ಮನ್ನು ಉಲ್ಲಸಿತಗೊಳಿಸುವುದರ ಜೊತೆಗೆ ‘ಸಮಾನತೆಗಾಗಿ ಸಂಘರ್ಷ’ದ ಕೆಚ್ಚಿನೊಂದಿಗೆ ಬೀಳ್ಕೊಡುತ್ತದೆ.
ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ ನಾಟಕದಲ್ಲಿ ಅಭಿನಯಿಸಿದ ನಟರಾದ ಭರತ್ ಡಿಂಗ್ರಿ, ಚಂದ್ರು, ಶ್ವೇತಾ ನಟರಲ್ಲ. ಬದಲಾಗಿ ಸಾವಿರಾರು ಜನರನ್ನು ಏಕಕಾಲದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್, ರೋಹಿತ್ ವೇಮುಲಾ, ದೂರದ ಜಮೈಕಾದ ಹಾಡುಗಾರ ಬಾಬ್ ಮಾರ್ಲಿ ಜೊತೆ ಸಂವಹನ ನಡೆಸಿದ ಸಂವಹನಕಾರರು. ಅಷ್ಟೊಂದು ಸಮರ್ಥವಾಗಿ ಇವರೆಲ್ಲರನ್ನೂ ನಮ್ಮ ಎದೆಗಿಳಿಸುತ್ತಾರೆ.
ಚಿಂತಕರಾದ ವಿ ಎಲ್ ನರಸಿಂಹಮೂರ್ತಿ ಮತ್ತು ಖ್ಯಾತ ನಿರ್ದೇಶಕ ಕೆ ಪಿ ಲಕ್ಷ್ಮಣ್ ಅವರು ಜಂಗಮ ಕಲೆಕ್ಟಿವ್ ಮೂಲಕ ತಳಮೂಲದ ದುಗುಡ ದುಮ್ಮಾನಗಳನ್ನು ರಂಗಕ್ಕಿಳಿಸಿ ಹೊಸ ರಂಗಪರಿಭಾಷೆಯನ್ನು ಬರೆದಿದ್ದಾರೆ. ‘ದಲಿತರ ಹಸಿವು, ಅವಮಾನಗಳಿಗೆ ದೇವರು ಪರಿಹಾರವಲ್ಲ. ಬುದ್ಧ, ಬಸವ, ಅಂಬೇಡ್ಕರ್ ಪರಿಹಾರ’ ಎಂದು ಕೆ ಪಿ ಲಕ್ಷ್ಮಣ್ ನಿರ್ದೇಶನದ ದಕ್ಲ ಕಥಾ ದೇವಿ ಕಾವ್ಯ ಗಟ್ಟಿಯಾಗಿ ಹೇಳುತ್ತದೆ ಎಂದು ಈ ಹಿಂದೆ ವಿಮರ್ಶೆ ಬರೆದಿದ್ದೆ. ದಕ್ಲ ಕಥಾ ದೇವಿ ನಾಟಕದಲ್ಲಿ ಜನಪದ ನಂಬಿಕೆಯನ್ನು ಅಂಬೇಡ್ಕರ್ ಜೊತೆ ‘ಮೊಸರು ಕಡೆದಂತೆ’ ಕತೆ ಹೇಳಿದರೆ, ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ ನಾಟಕದಲ್ಲಿ ವರ್ತಮಾನದಲ್ಲೇ ಶತಶತಮಾನಗಳ ನೋವು, ಹಸಿವು, ಅವಮಾನವನ್ನು ಹೇಳುತ್ತಾ ಅಂಬೇಡ್ಕರ್, ವೇಮುಲಾ, ಬಾಬ್ ಮಾರ್ಲಿಯನ್ನು ಮುಖಾಮುಖಿಯಾಗಿಸುತ್ತಾರೆ.
ರಂಗಭೂಮಿಯಲ್ಲಿ, ಸಾಹಿತ್ಯ ಲೋಕದಲ್ಲಿ ಕೆ ಪಿ ಲಕ್ಷ್ಮಣ್, ವಿ ಎಲ್ ನರಸಿಂಹಮೂರ್ತಿ ಯಾಕೆ ಭರವಸೆ ಮೂಡಿಸುತ್ತಾರೆ ಎಂದರೆ ಇಡೀ ನಾಟಕದ ಕತೆಯಲ್ಲಿ ವ್ಯಕ್ತವಾಗುವ ಶೋಷಣೆ ಮತ್ತು ಪರಿಹಾರಕ್ಕೆ ಪ್ರೇಕ್ಷಕರಾಗಿರುವ ಜನಸಮುದಾಯವನ್ನು ಜವಾಬ್ದಾರಿಯನ್ನಾಗಿಸುತ್ತಾರೆ ಮತ್ತು ಅಂತಹ ಫೀಲ್ ಕೊಟ್ಟು ಥಿಯೇಟರ್ ನಿಂದ ಬೀಳ್ಕೊಡುತ್ತಾರೆ. “ಸಮಾಜವನ್ನು ಆಳ್ವಿಕೆ ಮಾಡುತ್ತಿರುವ ಮೌಲ್ಯಗಳ ಬುಡ ಅಲ್ಲಾಡಿಸುತ್ತಿರುವ ಜಂಗಮ ಕಲೆಕ್ಟಿವ್ ನಂತೆಯೇ ಎಲ್ಲಾ ಸಮಾಜಮುಖಿ ಹೋರಾಟಗಳು ಸಾಂಸ್ಕೃತಿಕ ಕಣ್ಣುಗಳನ್ನು ಪಡೆಯಬೇಕಿದೆ” ಎಂದು ದೇವನೂರು ಮಹಾದೇವರು ಸುಮ್ಮನೆ ಹೇಳುತ್ತಾರೆಯೇ ?
ನವೀನ್ ಸೂರಿಂಜೆ
ಹಿರಿಯ ಪತ್ರಕರ್ತರು
ಇದನ್ನೂ ಓದಿ- ಸ್ವೀಟ್ ಕವರಲ್ಲಿ ಶೀಕ್ ಕಬಾಬ್- ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ