ಭಟ್ಕಳ: ಇಲ್ಲಿಗೆ ಸಮೀಪದ ಅಳಿವೆಕೋಡಿ ಬಂದರಿನಿಂದ ಬುಧವಾರ ಮೀನುಗಾರಿಕೆಗೆ ತೆರಳಿದ್ದ ಗಿಲ್ನೆಟ್ ದೋಣಿಯೊಂದು ಬಾರೀ ಸಮುದ್ರದ ಅಲೆಗೆ ಸಿಲುಕಿ ಮುಳುಗಿದ ಪರಿಣಾಮವಾಗಿ ಭೀಕರ ದುರಂತ ಸಂಭವಿಸಿದೆ. ಈ ದುರಂತದ ಸಂದರ್ಭದಲ್ಲಿ ದೋಣಿಯಲ್ಲಿದ್ದ ಆರು ಮೀನುಗಾರ ಯುವಕರ ಪೈಕಿ ಇಬ್ಬರು ಮಾತ್ರ ಬದುಕಿ ಉಳಿದಿದ್ದು ಉಳಿದ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ. ಮುಳುಗಿದ ಯುವಕರ ದೇಹಗಳು ಇನ್ನೂ ಪತ್ತೆಯಾಗಿಲ್ಲ.
ನೀರಿನಲ್ಲಿ ಕಣ್ಮರೆಯಾದವರಲ್ಲಿ ಜಾಲಿಕೋಡಿಯ ರಾಮಕೃಷ್ಣ ಮೊಗೇರ, (40) ಅಳ್ವೆಕೊಡಿಯ ಸತೀಶ್ ತಿಮ್ಮಪ್ಪ ಮೊಗೇರ (26), ಮುಗ್ರಿಮನೆಯ ಗಣೇಶ್ ಮಂಜುನಾಥ ಮೊಗೇರ (27) ಹಾಗೂ ನಿಶ್ಚಿತ ಮೊಗೇರ (30) ಸೇರಿದ್ದಾರೆ.
ದುರಂತದಲ್ಲಿ ಬದುಕಿ ಉಳಿದವರನ್ನು ದೋಣಿಯ ಮಾಲೀಕ ಮನೋಹರ ಮೊಗೇರ ಮತ್ತು ಬೆಳ್ನಿಯ ಮೂಲದ ರಾಮ ಮಾಸ್ತಿ ಕಾರ್ವಿ ಎಂದು ಗುರುತಿಸಲಾಗಿದೆ. ಇವರಿಬ್ಬರನ್ನು ಸ್ಥಳೀಯ ಯುವಕರು ದೋಣಿಗಳ ಮೂಲಕ ರಕ್ಷಸಿ ದಡಕ್ಕೆ ಕರೆತಂದಿದ್ದು ತದನಂತರದಲ್ಲಿ ಕರಾವಳಿ ಭದ್ರತಾ ಪಡೆಯ ಪಿ ಎಸ್ ಐ ವೀಣಾ ಚಿತ್ತಪುರ ನೇತೃತ್ವದಲ್ಲಿ ಭಟ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ
ಬುಧವಾರ ಮದ್ಯಾಹ್ನ 3.3.ರ ಹೊತ್ತಿಗೆ ಆರು ಜನ ಮೀನುಗಾರ ಯುವಕರು ಸಮುದ್ರದಲ್ಲಿ ಬಲೆ ಹಾಕಿ ಮೀನು ಹಿಡಿಯು ಉದ್ದೇಶದಿಂದ ಗಿಲ್ನೆಟ್ ದೋಣಿಯೊಂದಿಗೆ ಹೊರಟಿದ್ದರು. ಸಮುದ್ರದ ಡಾಕ್ ದಾಟುವುದರೊಳಗಾಗಿ ದೋಣಿಯ ಇಂಜಿನ್‌ನಲ್ಲಿ ಸಮಸ್ಯೆ ಕಂಡು ಬಂದಿದೆ. ಇಂಜಿನ್ ಗೆ ಇಂಧನ ಪೂರೈಕೆ ಸ್ಥಗಿತಗೊಂಡಿದ್ದು ಆ ಸಮಸ್ಯೆಯನ್ನು ಸರಿಪಡಿಸುವುದರೊಳಗಾಗಿ ಭಾರೀ ಗಾತ್ರ ಕಡಲ ತೆರೆ ಅಪ್ಪಳಿಸಿ ದೋಣಿ ಮಗುಚಿ ಬಿದ್ದಿದೆ. ಅದರಲ್ಲಿದ್ದ ಮೀನುಗಾರ ಯುವಕರು ತಮ್ಮ ಬಳಿಯಿದ್ದ ಬಲೆಯೊಂದಿಗೆ ಸಮುದ್ರಕ್ಕೆ ಬಿದ್ದು, ಭಾರೀ ಅಲೆಯ ಹೊಡೆತಕ್ಕೆ ನೀರಿನ ಆಳಕ್ಕೆ ಹೋಗಿದ್ದಾರೆನ್ನಲಾಗಿದೆ.
ಕಳೆದ ಹದಿನೈದು ದಿನಗಳಿಂದ ಕಡಲಿನಲ್ಲಿ ಅಲೆಗಳ ಅಬ್ಬರ ತೀವ್ರ ಪ್ರಮಾಣದಲ್ಲಿದ್ದು ಮೀನುಗಾರಿಕೆಗೆ ಹೋದವರು ಸೂಕ್ತ ರಕ್ಷಣಾ ವ್ಯವಸ್ಥೆಯನ್ನೂ ಮಾಡಿಕೊಂಡಿರಲಿಲ್ಲ ಎನ್ನಲಾಗಿದೆ. ಸಾಮಾನ್ಯವಾಗಿ ಯುವಕರು ಲೈಫ್ ಜಾಕೆಟ್ ಗಳನ್ನು ಧರಿಸದೇ ಮೀನುಗಾರಿಕೆಗೆ ಹೋಗುವ ಪರಿಪಾಠವಿದೆ. ಇಂದಿನ ದುರಂತಕ್ಕೆ ಇದೂ ಒಂದು ಕಾರಣವಾಗಿದೆ. ಏಳೆಂಟು ದಿನಗಳ ಹಿಂದೆ ಇಂತಹುದೇ ದೋಣಿ ದುರಂತದಲ್ಲಿ ಗಂಗೊಳ್ಳಿಯ ನಾಲ್ವರು ಯುವಕರು ದುರ್ಮರಣ ಹೊಂದಿದ್ದನ್ನು ಸ್ಮರಿಸಬಹುದು.