ಪ್ರಜಾಪ್ರಭುತ್ವ ಉಳಿದಿರುವುದು ವರದಿಗಾರರಿಂದ, ಮಾಧ್ಯಮಗಳ ಮಾಲೀಕರಿಂದಲ್ಲ: ಬಿ.ಕೆ ಹರಿಪ್ರಸಾದ್

Most read

ಬೆಂಗಳೂರು: ವರದಿಗಾರರಿಂದ ಪ್ರಜಾಪ್ರಭುತ್ವ ಉಳಿದಿದೆ ಹೊರತು ಮಾಧ್ಯಮಗಳ ಮಾಲೀಕರಿಂದ ಅಲ್ಲ. ಮಾಲೀಕರನ್ನು ಇಡಿ, ಐಟಿ, ಸಿಬಿಐ ಮೂಲಕ ನಿಯಂತ್ರಿಸಲಾಗುತ್ತಿರುತ್ತದೆ. ವರದಿಗಾರರು ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡುತ್ತಿದ್ದಾರೆ. ವರದಿಗಾರರಿಗೆ ಯಾವುದೇ ತನಿಖಾ ಸಂಸ್ಥೆಗಳ ಭಯವಿಲ್ಲ. ಈ ಬಾರಿ ಎಲ್ಲಾ ಬದಲಾವಣೆ ಆಗುವ ಕಾರಣ ನೀವುಗಳು ನಿಶ್ಚಿಂತೆಯಿಂದ ಇರಬಹುದು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಹೇಳಿದರು.

ನಗರದ ಕೆಪಿಸಿಸಿ ಕಚೇರಿಯಲ್ಲಿ ಏರ್ಪಿಸಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮ ವಿಭಾಗದ ಜವಾಬ್ದಾರಿ ತೆಗೆದುಕೊಂಡಾಗ ಅವರು ಇದನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆಯೇ ಎನ್ನುವ ಆತಂಕ ಇತ್ತು. ಆದರೆ ಪ್ರಿಯಾಂಕ್ ಅವರು ವಹಿಸಿಕೊಂಡ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಮಾಧ್ಯಮ ವಿಭಾಗ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಶಕ್ತಿ ತೋರಿಸಿಕೊಟ್ಟಿದ್ದಾರೆ ಎಂದು ಪ್ರಿಯಾಂಕ್ ಕಾರ್ಯವೈಖರಿಯನ್ನು ಪ್ರಶಂಸಿಸಿದರು.

ಕಾಂಗ್ರೆಸ್ ಪಕ್ಷದ ಚುನಾವಣಾ ನೀತಿ, ನಮ್ಮ ಕಾರ್ಯಕ್ರಮಗಳನ್ನು ಜನರಿಗೆ ಯಶಸ್ವಿಯಾಗಿ ತಲುಪಿಸಿ ಇಡೀ ತಂಡ ಮಾದರಿಯಾಗಿ ಕೆಲಸ ಮಾಡಿದೆ. ಮುಂದಿನ ಐದು ವರ್ಷಗಳ ನಂತರ ಈ ದೇಶದಲ್ಲಿ ಮತ್ತೊಮ್ಮೆ ಚುನಾವಣೆ ನಡೆಯಬೇಕು. ಇದೇ ಕೊನೆಯ ಚುನಾವಣೆ ಆಗಬಾರದು. ಸಹಸ್ರಾರು ಜನ ಕಾಂಗ್ರೆಸ್ ಕಾರ್ಯಕರ್ತರು, ಜನಸಾಮಾನ್ಯರು ಹೋರಾಟ ಮಾಡಿ ಗಳಿಸಿದ ಸ್ವಾತಂತ್ರ್ಯ, ಅಂಬೇಡ್ಕರ್ ಅವರ ಸಂವಿಧಾನ, ಜಾತ್ಯಾತೀತ ತತ್ವ ಸೇರಿದಂತೆ ನಮ್ಮ ದೇಶದ ಮೌಲ್ಯಗಳನ್ನು ಉಳಿಸಬೇಕಾಗಿದೆ. ಮಾಧ್ಯಮ ವಿಭಾಗ ಕಾಂಗ್ರೆಸ್ ಪಕ್ಷದ ಕನ್ನಡಿ. ಹೊಸದಾಗಿ ಜವಾಬ್ದಾರಿವಹಿಸಿಕೊಂಡವರು ಕಾಂಗ್ರೆಸ್ ಪಕ್ಷದ ನಿಲುವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಬೇಕು.

ಇದೇ ವೇಳೆ ಸಾಮಾಜಿಕ ಜಾಲತಾಣ ಅಧ್ಯಕ್ಷರಾಗಿ, ಸಹ- ಅಧ್ಯಕ್ಷರಾಗಿ ಮತ್ತು ಮಾಧ್ಯಮ ಸಂಚಾಲಕರು, ಸಂಯೋಜಕರಾಗಿ ನೂತನವಾಗಿ ಜವಾಬ್ದಾರಿವಹಿಸಿಕೊಂಡವರಿಗೆ ಇದೇ ವೇಳೆ ಶುಭಕೋರಲಾಯಿತು.

More articles

Latest article