ಬೆಂಗಳೂರು: ಐಟಿ ನೋಟೀಸ್ ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 1800 ಕೋಟಿ ತೆರಿಗೆ ವಿಚಾರವಾಗಿ ದೆಹಲಿಯಲ್ಲಿ ನೋಟೀಸ್ ಕೊಟ್ಟಿದ್ದಾರೆ. ಈ ದೇಶದ ಪ್ರಜಾಪ್ರಭುತ್ವ, ಕಾನೂನು ಹರಾಜು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದೆ. ಅಧಿಕಾರ ಬರುತ್ತೆ ಹೋಗುತ್ತೆ, ಯಾವುದು ಕೂಡ ಶಾಶ್ವತವಲ್ಲ. ಯಾಕೆ ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇಂಡಿಯಾ ಮೈತ್ರಿಕೂಟವನ್ನು ಟಾರ್ಗೆಟ್ ಮಾಡಲಾಗಿದೆ. ಸೋಲಿನ ಭಯದಿಂದ ಎನ್ ಡಿ ಎ ಮೈತ್ರಿಕೂಟ ಹತಾಶೆಗೆ ಒಳಗಾಗಿದೆ ಎಂದಿದ್ದಾರೆ.
ನಿನ್ನೆ ರಾತ್ರಿ ನನಗೂ ಐಟಿ ನೋಟೀಸ್ ಬಂದಿದೆ. ಬಗೆಹರಿದ ವಿಚಾರಕ್ಕೆ ನೋಟಿಸ್ ಬಂದಿದೆ. ನನಗೆ ಶಾಕ್ ಆಗಿದೆ. ಸಾಕಷ್ಟು ವಿಚಾರ ಹುಟ್ಟಿಸುತ್ತಿದ್ದಾರೆ. ಬಿಜೆಪಿ ನಾಯಕರ ಮೇಲೂ ಸಿಬಿಐ ತನಿಖೆ ನಡೆಯುತ್ತಿದೆ. ಅವರಿಗೆ ವಿಚಾರಣೆಗೆ ಕರೆಯುವುದಿಲ್ಲ. ಕೇವಲ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದಿದ್ದಾರೆ.
ಕೋಲಾರ ಅಭ್ಯರ್ಥಿ ಘೋಷಣೆ ವಿಚಾರವಾಗಿ ಮಾತನಾಡಿದ ಡಿಕೆಶಿ, ಉಭಯ ಬಣಗಳಿಗೂ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಮುನಿಯಪ್ಪ, ರಮೇಶ್ ಕುಮಾರ್ ಜೊತೆ ಮಾತನ್ನಾಡಿದ್ದೇನೆ. ಅವರವರ ಅಭಿಪ್ರಾಯಯನ್ನು ಹೇಳಿದ್ದಾರೆ. ಗುಂಪು ರಾಜಕಾರಣ ನಮ್ಮಲ್ಲಿ ಇಲ್ಲ. ಯಾರೇ ಆದರೂ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿಲ್ಲ. ಸೀಟು ಗೆಲ್ಲೋದು ಬಿಡೋದು ನಂತರದ್ದು. ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ. ಅಂತಿಮವಾಗಿ ಯಾರೇ ಶಿಸ್ತು ಉಲ್ಲಂಘಿಸಿದರೂ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಶಿಸ್ತು ಉಲ್ಲಂಘನೆ ಮಾಡಿದವರೆಲ್ಲ ಈಗಾಗಲೇ ಕ್ಷಮೆ ಕೇಳಿದ್ದಾರೆ. ಶಾಸಕರು, ಸಚಿವರು ಆದರೂ ಎಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರಬೇಕು. ಎಲ್ಲರೂ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದಾರೆ. ಗೌತಮ್ ಪಕ್ಷದ ಸಾಮಾನ್ಯ ಕಾರ್ಯಕರ್ತ. ಮಾಜಿ ಮೇಯರ್ ಪುತ್ರ. ಹೊಸ ಮುಖ ಗೌತಮ್ ಗೆ ಅವಕಾಶ ನೀಡಿದ್ದೇವೆ ಎಂದರು.