ಚಿತ್ರದುರ್ಗ: “ಹಣ ಹಂಚಿಕೆ ಮಾಡದೆ ಚುನಾವಣೆ ಎದುರಿಸಲು ಬಿಜೆಪಿಗೆ ಬೇರೆ ಮಾರ್ಗವೇ ಇಲ್ಲ” ಎಂದು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಜೀರಳ್ಳಿ ತಿಪ್ಪೇಸ್ವಾಮಿ ಒಪ್ಪಿಕೊಂಡಿದ್ದಾರೆ.
ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಲೋಕಸಭಾ ಚುನಾವಣೆ ಮತ್ತು ನಾಮಪತ್ರ ಸಲ್ಲಿಕೆ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದ ವೀಡಿಯೋ ವೈರಲ್ ಆಗಿದ್ದು, ಪ್ರತಿಪಕ್ಷದ ಅಭ್ಯರ್ಥಿಗಳಿಗಿಂತ 100 ರೂ. ಹೆಚ್ಚಿಗೆ ಕೊಟ್ಟು ಚುನಾವಣೆ ಎದುರಿಸುವುದೊಂದೇ ಮಾರ್ಗ ಎಂದು ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ಅಜೆಂಡಾವನ್ನು ಬಹಿರಂಗಪಡಿಸಿದ್ದಾರೆ.
ಬೇರೆ ತಾಲೂಕಿನಲ್ಲಿ ಹೇಗಿದೆಯೋ ಅದು ನಮಗೆ ಬೇಕಾಗಿಲ್ಲ. ಆದರೆ ನಮ್ಮ ತಾಲೂಕಿನಲ್ಲಿ ದುಡ್ಡು ಹಂಚದೆ ಬೇರೆ ಮಾರ್ಗ ಇಲ್ಲ. ಪ್ರತಿಪಕ್ಷದ ಅಭ್ಯರ್ಥಿಗಳು ಕೊಡುವುದಕ್ಕಿಂತ ನೂರು ರೂಪಾಯಿ ಹೆಚ್ಚು ಕೊಡಿಸುವಂತಹ ಕೆಲಸ ಆಗಬೇಕು. ಅವರು ಏನೂ ಕೊಡದಿದ್ದರೂ ನಾವು ನೂರು ರೂಪಾಯಿ ಕೊಡಿಸೋಣ. ಮಂಡಲ ಅಧ್ಯಕ್ಷರು ಮುನ್ಸೂಚನೆ ಕೊಟ್ಟರೆ ಹಣದ ವ್ಯವಸ್ಥೆ ಮಾಡಿಸೋಣ. ಸದ್ಯ 500-600 ರೂಪಾಯಿ ಹಂಚುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಜ್ಜಾರು ಹೇಳಿದ್ದಾರೆ. 500 ರೂಪಾಯಿಗೆ ಗೆಲ್ತೀರಿ ಬಿಡಿ ಎಂದು ಮಂಡಲ ಅಧ್ಯಕ್ಷರು ಹೇಳಿದ್ದಾರೆ ಎಂದಿರುವ ವೀಡಿಯೋ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.