ಬೆಂಗಳೂರು: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿ ಪ್ರತಿ ಹಂತದಲ್ಲಿಯೂ ದುರುದ್ದೇಶ ಪೂರ್ವಕವಾಗಿ ಹಣಿಯುವ ಕೆಲಸ ಮಾಡಲಾಗುತ್ತಿದೆ. ಅದರಲ್ಲಿಯೂ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ರಾಷ್ಟೀಯ ಅಧ್ಯಕ್ಷ ಜೆ. ಪಿ. ನಡ್ದಾ ಅವರು ಇದರಲ್ಲಿ ಮುಖ್ಯವಾದವರು ಎಂದು ಮಾಜಿ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ಆಪಾದಿಸಿದ್ದಾರೆ.
ರಾಹುಲ್ ಗಾಂಧಿ ಅವರು ಇತ್ತೀಚೆಗೆ ಬಳಸಿದ ಸ್ಟೇಟ್ ಎನ್ನುವ ಪದದ ವಿಶಾಲಾರ್ಥ ಇವರಿಗೆ ಅರ್ಥವೇ ಆಗಿಲ್ಲ. ಅಮಿತ್ ಮಾಳವೀಯ ಅವರಂತೂ ನಾಲಾಯಕ್ ವ್ಯಕ್ತಿ. ರಾಹುಲ್ ಗಾಂಧಿ ಅವರು ಅಮೇರಿಕಾದ ಜಾರ್ಜ್ ಸೋರೋಸ್ ಅವರ ಪುಸ್ತಕದಿಂದ ನಕಲು ಮಾಡಿ ಮಾತನಾಡಿದ್ದಾರೆ ಎಂದು ಹೇಳಿದ್ದಾನೆ. ರಾಹುಲ್ ಗಾಂಧಿ ಅವರು ಆರ್ ಎಸ್ ಎಸ್ ಮೇಲಿನ ಟೀಕೆಗೂ ಆತನ ಪುಸ್ತಕಕ್ಕೂ ಸಂಬಂಧವೇ ಇಲ್ಲ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಯಾವುದೇ ವಿಷಯವನ್ನು ಪ್ರಸ್ತಾಪಿಸಿದರೂ ಅದನ್ನು ಕೂದಲು ಸೀಳಿದಂತೆ ಸೀಳಿ, ಸೀಳಿ ಅದಕ್ಕೆ ಬೇರೆಯದ್ದೇ ಅರ್ಥ ಬರುವಂತೆ ಮಾಡುವ ಕೆಲಸವನ್ನು ಈಗಲೂ ಮಾಡುತ್ತಿದ್ದಾರೆ. ಈ ಪರಿಪಾಠ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ದಿನದಿಂದ ಪ್ರಾರಂಭವಾಯಿತು ಎಂದರು.
ಸ್ಟೇಟ್ ಎಂದರೆ ಪ್ರಭುತ್ವ. ಇದರ ವಿರುದ್ಧವೇ ರಾಹುಲ್ ಗಾಂಧಿ ಅವರು ನಾವು ಹೋರಾಟ ಮಾಡಬೇಕಾಗಿದೆ. ಆರ್ ಎಸ್ ಎಸ್, ಬಿಜೆಪಿ ಜೊತೆಗೆ ಸ್ಟೇಟ್ ವಿರುದ್ಧವೂ ಹೋರಾಟ ಮಾಡಬೇಕು ಎನ್ನುವುದು ಅವರ ಮಾತಿನ ತಾತ್ಪರ್ಯ. ಇದನ್ನು ಮೂರ್ಖರು ಬೇರೆ ಅರ್ಥದಲ್ಲಿ ತಿಳಿದುಕೊಂಡಿದ್ದಾರೆ. ಈ ಪದಕ್ಕೆ ವಿಶಾಲವಾದ ಅರ್ಥವಿದೆ ಎಂದು ತಿಳಿಸಿದರು.
ರಾಮಮಂದಿರ ಸ್ಥಾಪನೆಯಾದ ಮೇಲೆ ನಿಜವಾದ ಸ್ವಾತಂತ್ರ್ಯ ದೊರೆಯಿತು ಎಂದು ಹೇಳುವ ಮೂಲಕ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಪಮಾನ ಮಾಡುವ ಮೂಲಕ ಈ ದೇಶದ ಮೇಲೆ ದಾಳಿ ಮಾಡಿದ್ದಾರೆ. ಇಲ್ಲಿನ ಮೋದಿ ಸರ್ಕಾರ “ಅಥಾರಿಟೇರಿಯನ್ ಸರ್ಕಾರ”. ಈ ಬಿಜೆಪಿ ಸರ್ಕಾರ ಸ್ವಾಯತ್ತ ಸಂಸ್ಥೆಗಳು, ಪತ್ರಿಕಾ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಸೇರಿದಂತೆ ಅನೇಕ ವಿಚಾರಗಳನ್ನು ಒಪ್ಪುವುದಿಲ್ಲ. ಅತ್ಯಂತ ಹೆಚ್ಚು ಪತ್ರಕರ್ತರು ಬಂಧನಕ್ಕೆ ಒಳಪಟ್ಟಿರುವುದು ಮೋದಿ ಆಡಳಿತದಲ್ಲಿ ಎಂದು ವಿವರಿಸಿದರು.
ಸಿಬಿಐ, ಇಡಿ ಸೇರಿದಂತೆ ಇತರೇ ತನಿಖಾ ಸಂಸ್ಥೆಗಳು ಹೆಚ್ಚು ಕೇಸನ್ನು ದಾಖಲು ಮಾಡಿರುವುದು ವಿರೋಧ ಪಕ್ಷಗಳ ಮೇಲೆ. ಬಿಜೆಪಿ ತನ್ನ ಮೂಗಿನ ನೇರಕ್ಕೆ ಆಡಳಿತ ಮಾಡುತ್ತಿದೆ. ಇದರಿಂದ ಸ್ಟಾನ್ ಸ್ವಾಮಿ, ಸಾಯಿಬಾಬಾ ಅವರು ಜೈಲಿನಲ್ಲಿಯೇ ಪ್ರಾಣ ಬಿಡಬೇಕಾಯಿತು. ಆಂಧ್ರ ಪ್ರದೇಶದಲ್ಲಿ ಶ್ರೀಮಂತ ವ್ಯಕ್ತಿಯೊಬ್ಬ ಬಿಜೆಪಿ ಜೊತೆ ಭಿನ್ನಾಭಿಪ್ರಾಯ ಬಂದು ಕಾಂಗ್ರೆಸ್ ಸೇರಿದರು. ಇದು ನಡೆದು 48 ಗಂಟೆಯೊಳಗೆ ಅವರನ್ನು ಬಂಧಿಸಿದ್ದರು. ಎಲ್ಲವನ್ನೂ ಮೋದಿ ಅವರು ತಮ್ಮ ಕೈಗೊಂಬೆ ಮಾಡಿಕೊಳ್ಳಲು ಹೊರಟಿದ್ದಾರೆ ಎಂದರು.
ಈ ದೇಶಕ್ಕೆ ನಿಜವಾಗಿ ಸ್ವಾತಂತ್ರ್ಯ ಬಂದಿದ್ದು ಬಾಲರಾಮನ ಪ್ರತಿಷ್ಠಾಪನೆಯ ಎನ್ನುವ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯನ್ನು ಈ ದೇಶದ ಜನ ಒಪ್ಪಲು ಸಾಧ್ಯವಿಲ್ಲ. ಸುಮಾರು ಮೂರೂವರೆ ಕೋಟಿ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಇವರೆಲ್ಲರಿಗೂ ಆರ್ ಎಸ್ ಎಸ್ ಅಪಮಾನ ಮಾಡಿದೆ. ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರು ಈ ದೇಶಕ್ಕೆ ಒಂದೊಂದು ದಿನಕ್ಕೆ ಒಂದೊಂದು ಬಾರಿ ಸ್ವಾತಂತ್ರ ಸಿಕ್ಕಿತು ಎಂದು ಹೇಳಿಕೆಯನ್ನು ನೀಡುತ್ತಲೇ ಇರುತ್ತಾರೆ. ಬಾಬ್ರಿ ಮಸೀದಿಯನ್ನು ಒಡೆದ ದಿನ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಿದ್ದರು. ಬಿಜೆಪಿ 2014ರಲ್ಲಿ ಪೂರ್ಣ ಪ್ರಮಾಣದ ಬಹುಮತ ಪಡೆದಾಗ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಿದ್ದರು. ಹೀಗೆ ಸ್ವಾತಂತ್ರ ಹೋರಾಟಗಾರರಿಗೆ ಬಿಜೆಪಿ ಅಪಮಾನ ಮಾಡುತ್ತಲೇ ಬಂದಿದೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಎಲ್. ಹನುಮಂತಯ್ಯ ಅಭಿಪ್ರಾಯಪಟ್ಟರು.
ಮೋಹನ್ ಭಾಗವತ್ ಬೇರೆ ಯಾವುದೇ ದೇಶದಲ್ಲಿ ಇದ್ದಿದ್ದರೆ ಈ ಹೊತ್ತಿಗಾಗಲೇ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿತ್ತು. ಬಿಜೆಪಿಯ ಸಂವಿಧಾನ ವಿರೋಧಿ ನಡವಳಿಕೆ, ದೇಶದ ಸಾರ್ವಭೌಮತೆಗೆ ಧಕ್ಕೆ ತರುತ್ತಿರುವದರ ಬಗ್ಗೆ ನಾವೆಲ್ಲರೂ ಸೇರಿ ಜಾಗೃತಿ ಮೂಡಿಸಬೇಕಿದೆ. ಇದೇ ನಮ್ಮೆಲ್ಲರ ಮುಂದಿರುವ ಸವಾಲು ಎಂದು ಕರೆ ನೀಡಿದರು. ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು, ಮಾಜಿ ಮೇಯರ್ ರಾಮಚಂದ್ರಪ್ಪ ಇದ್ದರು.