ಬೆಂಗಳೂರು: ಬಿಜೆಪಿಯವರು ಸಂವಿಧಾನ ಸಮ್ಮಾನ ಎನ್ನುವ ಸುಳ್ಳು ಕಾರ್ಯಕ್ರಮ ಆಯೋಜಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ರಾಜ್ಯದ ಜನ ಜಾತ್ಯಾತೀತವಾಗಿ ಬಿಜೆಪಿಯರಿಗೆ ಉಗಿದು ಮನೆಗೆ ಕಳುಹಿಸಿದ್ದಾರೆ. ಇದೇ ಕಾರಣಕ್ಕೆ ತಮ್ಮ ಮಾನವನ್ನು ಉಳಿಸಿಕೊಳ್ಳಲು ಸುಳ್ಳಿನ ಆಟ ಕಟ್ಟುತ್ತಿದ್ದಾರೆ. ನಾಗ್ಪುರ ವಿಶ್ವವಿದ್ಯಾನಿಲಯದ ಹಳೇ ವಿದ್ಯಾರ್ಥಿಯಾದ ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ಸರ್ಕಾರದ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಾಗೂ ಕಾಂಗ್ರೆಸ್ ಪಕ್ಷದ ನಡುವಿನ ಸಂಬಂಧ ಸಂಕೀರ್ಣವಾದುದು. ಅವರನ್ನು ಈ ಹಿಂದೆ ನಮ್ಮ ಪಕ್ಷವು ಕೆಲವೊಂದು ಸಂದರ್ಭದಲ್ಲಿ ಒಪ್ಪಿದೆ. ಸಾಕಷ್ಟು ಸಂದರ್ಭಗಳಲ್ಲಿ ಅವರನ್ನು ಅಪ್ಪಿಕೊಂಡಿದೆ. ಒಂದೇ ಸಾಲಿನಲ್ಲಿ ಅವರ ಮತ್ತು ಕಾಂಗ್ರೆಸ್ ಸಂಬಂಧವನ್ನು ಬಣ್ಣಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಎಂದಿಗೂ ಅಂಬೇಡ್ಕರ್ ಅವರ ವಿರುದ್ಧ ಇರಲಿಲ್ಲ. ನಾವು ಯಾವುದೇ ಕಾರಣಕ್ಕೂ ಮನುಸ್ಮೃತಿಯನ್ನು ಒಪ್ಪಿಲ್ಲ ಮತ್ತು ಅಂಬೇಡ್ಕರ್ ಅವರನ್ನು ವಿರೋಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ನಾಗ್ಪುರದಿಂದ ಪಡೆದ ಸುಳ್ಳಿನ ತರಬೇತಿಯನ್ನು ಯಡಿಯೂರಪ್ಪ ಅವರು ಇಲ್ಲಿ ಪ್ರಯೋಗಿಸಿದ್ದಾರೆ. ಅಂಬೇಡ್ಕರ್ ಅವರನ್ನು ದ್ವೇಷ ಮಾಡುವ, ಸಂವಿಧಾನ ದ್ರೋಹಿಗಳು, ವಿರೋಧಿಗಳು ಇಂದು ಸಂವಿಧಾನದ ಪರವಾಗಿ ಮಾತನಾಡುತ್ತಿದ್ದಾರೆ. ಸಂವಿಧಾನವನ್ನು ಜಾರಿಗೆ ತರುವ ವೇಳೆ ಬಿಜೆಪಿಯವರು ಸಂವಿಧಾನ ವಿರೋಧಿಯಾಗಿ ವರ್ತಿಸಿದ್ದರು. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಹಾಗೂ ಅವರ ಅಂತ್ಯ ಸಂಸ್ಕಾರಕ್ಕೆ ಕಾಂಗ್ರೆಸ್ ಜಾಗ ನೀಡಲಿಲ್ಲ ಎಂದು ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದರು.
ಸರ್ದಾರ್ ಪಟೇಲ್ ಅವರನ್ನು ಅನುಸರಿಸಲು ಹೊರಟಿರುವ ಈಗಿನ ಕೇಂದ್ರದ ನಕಲಿ ಗೃಹಮಂತ್ರಿಗಳಾದ ಗಡಿಪಾರು ಅಮಿತ್ ಶಾ ಅವರು ʼಅಂಬೇಡ್ಕರ್ ಅವರ ಹೆಸರನ್ನು ಹೇಳುವುದು ಅನೇಕರಿಗೆ ಇಂದಿನ ಫ್ಯಾಷನ್ ಆಗಿದೆ. ಅದರ ಬದಲು ದೇವರ ನಾಮ ಜಪ ಮಾಡಿದ್ದರೆ ಸ್ವರ್ಗಕ್ಕೆ ಹೋಗುತ್ತಿದ್ದರುʼ ಎನ್ನುವ ಅವರ ಉದ್ದೇಶಪೂರ್ವಕ ಮಾತುಗಳು ಪೂರ್ವನಿಯೋಜಿತ ಅಲ್ಲದೇ ಸಂಘ ಪರಿವಾರದ ಗುಪ್ತ ಕಾರ್ಯಸೂಚಿಗಳನ್ನು ಜಾರಿಗೆ ತರಲು ಹವಣಿಸುತ್ತಿದ್ದಾರೆ. ಅಂಬೇಡ್ಕರ್ ಅವರ ಬಗ್ಗೆ ಗೌರವ ಇದ್ದಿದ್ದರೆ ಅಮಿತ್ ಶಾ ಅವರು ಎಳಸು ಹೇಳಿಕೆ ನೀಡುತ್ತಿರಲಿಲ್ಲ ಎಂದು ಟೀಕಿಸಿದರು.
ಅಂಬೇಡ್ಕರ್ ಅವರು ಜೀವನ ಚರಿತ್ರೆ ಬರೆದ ಅಶೋಕ್ ಗೋಪಾಲ್ ಎನ್ನುವವರು 1952, ಜನವರಿ 18 ನೇ ತಾರೀಕು ಬಾಂಬೆ ಉತ್ತರ ಮೀಸಲಾತಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುತ್ತಾರೆ. ಅವರು ಚುನಾವಣೆಯಲ್ಲಿ ಸೋತಾಗ ಅವರ ಪರಾಭವಕ್ಕೆ ಕಾರಣ ಯಾರು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕಮ್ಯುನಿಷ್ಟ್ ನಾಯಕ ಡಾಂಗೆ ಅವರು ಹಾಗೂ ಸಾವರ್ಕರ್ ಅವರು ನನ್ನ ವಿರುದ್ದ ಬಿರುಸಿನ ಪ್ರಚಾರ ನಡೆಸಿದ್ದಕ್ಕೆ ಸೋಲಬೇಕಾಯಿತು ಎಂದು ಅವರು ಹೇಳಿದ್ದಾರೆ. 1997 ರಲ್ಲಿ ಅರುಣ್ ಶೌರಿ ಅವರ ವರ್ಷಿಪಿಂಗ್ ಪೇಸ್ ಗಾಡ್ ಎಂದು ಅಂಬೇಡ್ಕರ್ ಅವರನ್ನು ತೀವ್ರವಾಗಿ ಟೀಕೆ ಮಾಡಿದ್ದರು. ಅಲ್ಲದೇ ಇವರು ತಮ್ಮ ಪುಸ್ತಕದಲ್ಲಿ ಸಂವಿಧಾನ ಕರಡು ಸಮಿತಿಯಲ್ಲಿ ಏನೆಲ್ಲಾ ನಡೆಯಿತು ಎಂದು ವ್ಯಂಗ್ಯವಾಗಿ ಬರೆದಿದ್ದಾರೆ. ಈ ವ್ಯಕ್ತಿ ಬಿಜೆಪಿಯ ಬುದ್ದಿವಂತರು ಎಂದು ಕರೆಸಿಕೊಳ್ಳುವ ಪಾಳಯದಲ್ಲಿ ಇದ್ದವರು ಎಂದರು.
1949 ನ. 26 ರಂದು ಕಾಂಗ್ರೆಸ್ ಪಕ್ಷ ಸಂವಿಧಾನವನ್ನು ಜಾರಿಗೆ ತಂದಿತು. ಇದೇ ತಿಂಗಳ ದಿನಾಂಕ 30 ರಂದು ಆರ್ ಎಸ್ ಎಸ್ ಮುಖವಾಣಿ ಆರ್ಗನೈಜರ್ ಪತ್ರಿಕೆ ಮೂಲಕ ಸಂಘ ಪರಿವಾರದ, ಹಿಂದೂ ಮಹಾಸಭಾದ ನಾಯಕರು ಅಸಹನೆ ವ್ಯಕ್ತಪಡಿಸುತ್ತಾರೆ. ಸಂವಿಧಾನದಲ್ಲಿ ಭಾರತೀಯತೆ ಎಂಬುದು ಇಲ್ಲ. ಇದರಲ್ಲಿ ಪಾಶ್ಚಿಮಾತ್ಯತೆ ಹೆಚ್ಚಿದೆ ಅದನ್ನು ನಮ್ಮ ಮೇಲೆ ಹೇರುತ್ತಿದ್ದಾರೆ ಎಂದು ಟೀಕಿಸುತ್ತಾರೆ. 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಗಳಾಗಿದ್ದ ವೇಳೆ ಜಸ್ಟೀಸ್ ವೆಂಕಟಚಲಯ್ಯ ಅವರ ನೇತೃತ್ವದಲ್ಲಿ ಸಂವಿಧಾನ ಪರಿಷ್ಕರಣೆಗೆ ಕೈ ಹಾಕುತ್ತಾರೆ. ಅಂದು ದೇಶದ ಕೆ.ಆರ್.ನಾರಾಯಣ್ ಅವರು ರಾಷ್ಟ್ರಪತಿಗಳಾಗಿದ್ದ ಕಾರಣಕ್ಕೆ ತಡೆ ಬೀಳುತ್ತದೆ. 2008 ರಲ್ಲಿ ಆರ್ ಎಸ್ ಎಸ್ ಸರಸಂಘ ಚಾಲಕರಾಗಿದ್ದ ಸುದರ್ಶನ್ ಅವರು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದರು. ಅಲ್ಲದೇ ಕರ್ನಾಟಕದ ಬಿಜೆಪಿ ಸಂಸದನೊಬ್ಬ ನಮಗೆ 400 ಸ್ಥಾನಗಳನ್ನು ನೀಡಿ ಸಂವಿಧಾನ ಬದಲಾವಣೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ರಾಜ್ಯದ ಜನ ತಿರಸ್ಕರಿಸಿದರು ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಶನ್ ಪಕ್ಷದಿಂದ ಚುನಾವಣೆಗೆ ನಿಲ್ಲುತ್ತಾರೆ. ಕೊನೆಯ ದಿನದವರೆಗೂ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಮನವಿ ಮಾಡಲಾಗಿತ್ತು. ಅವರು ಒಪ್ಪದೇ ಇದ್ದಾಗ ಕಾಂಗ್ರೆಸ್ ಇತರೇ ಅಭ್ಯರ್ಥಿಯನ್ನು ನಿಲ್ಲಿಸುತ್ತದೆ. ನಂತರ ರಾಜ್ಯಸಭಾ ಚುನಾವಣೆಯಲ್ಲಿ ಎಲ್ಲರ ಬೆಂಬಲ ಅವರಿಗೆ ಸಿಗುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಸಂವಿಧಾನ ರಚನಾ ಸಮಿತಿಯಲ್ಲಿ ಕರಡು ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡುವುದು ಕಾಂಗ್ರೆಸ್ ಪಕ್ಷ. ನವೆಂಬರ್ 25, 1949 ರಂದು ಅಂಬೇಡ್ಕರ್ ಅವರನ್ನು ಆಯ್ಕೆ ಮಾಡಲಾಗುತ್ತದೆ. ಬಾಬಾ ಸಾಹೇಬ್ ಅವರು ತಮ್ಮ ಕಡೆ ಭಾಷಣದಲ್ಲಿ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಬೆಂಬಲವಾಗಿ ನಿಂತ ಕಾರಣಕ್ಕೆ ಸಂವಿಧಾನ ರಚನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ನೆಹರು ಅವರು ಹಾಗೂ ಅಂಬೇಡ್ಕರ್ ಅವರು 1952 ರಲ್ಲಿ ಹಿಂದೂ ಕೋಡ್ ಬಿಲ್ ಜಾರಿಗೆ ತಂದಾಗ ಹಿಂದೂ ಮಹಾಸಭಾ ಸೇರಿದಂತೆ ಆರ್ ಎಸ್ ಎಸ್ ಇದನ್ನು ವಿರೋಧ ಮಾಡಿತ್ತು. ಈ ಬಿಲ್ ಅಲ್ಲಿ ಮಹಿಳೆಯರಿಗೆ ತಂದೆ ಆಸ್ತಿಯಲ್ಲಿ ಸಮಾನ ಹಕ್ಕು ವಿರುದ್ದ ಮಾತನಾಡಿದ್ದರು. ಅಂದು ರಾಮ್ ಲೀಲಾ ಮೈದಾನದಲ್ಲಿ ದೊಡ್ಡ ಸಮಾವೇಶ ನಡೆಸಿ ಸಂವಿಧಾನವನ್ನು ಸುಡುವ ಕೆಲಸ ಮಾಡಿದ್ದರು ಎಂದು ವಿವರಿಸಿದರು.
1932 ರಲ್ಲಿ ಬಿ.ಎಸ್.ಮುಂಜೆ ಅವರು, ʼಅಂಬೇಡ್ಕರ್ ಅವರಿಗೆ ಸಹಾಯ ಮಾಡುವುದು ಎಂದರೆ ಹಾವಿಗೆ ಹಾಲೆರೆದಂತೆʼ ಎಂದು ಹೇಳಿದ್ದರು. ಪ್ರತಿಯೊಬ್ಬ ಸಂಘ ಪರಿವಾರದವರು ಮೀಸಲಾತಿ ವಿರೋಧಿಗಳು. ತ್ರಿವರ್ಣ ಧ್ವಜ ಈ ದೇಶಕ್ಕೆ ಅಶುಭ ಸೂಚಕ ಎಂದಿಗೂ ಅದು ಶ್ರೇಯಸ್ಸನ್ನು ಕೊಡುವುದಿಲ್ಲ ಎಂದು ಗೋಳ್ವಾಲ್ಕರ್ ಹೇಳಿದ್ದರು. 2001 ನೇ ಇಸವಿಯ ತನಕ ಆರ್ ಎಸ್ ಎಸ್ ತನ್ನ ಕಚೇರಿಯ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿರಲಿಲ್ಲ. ದತ್ತಾಪು ತೆಗಡೆಯವರು ಅಂಬೇಡ್ಕರ್ ಅವರು ಆರ್ ಎಸ್ ಎಸ್ ನವರು. ಇವರು ಚುನಾವಣೆ ವೇಳೆ ಬಾಬಾ ಸಾಹೇಬರ ಜೊತೆ ಕೆಲಸ ಮಾಡಿದ್ದರು ಎಂದು ಸುಳ್ಳು ಹೇಳುತ್ತಿದ್ದಾರೆ. ಇವರು ಅಪ್ಪಟ ಅಂಬೇಡ್ಕರ್ ಅವರ ಅನುಯಾಯಿ ಆಗಿದ್ದವರು. ಆರ್ ಎಸ್ ಎಸ್, ಬಿಜೆಪಿಯವರು ಪರಿಶಿಷ್ಟರು ಹಾಗೂ ಆದಿವಾಸಿಗಳ ಬಳಿ ಅಂಬೇಡ್ಕರ್ ಅವರು ನಮ್ಮವರು ಎಂದು ಬಿಂಬಿಸಲು ಹೊರಟಿದೆ. ಜನವರಿ 25, 1927 ನೇ ಇಸವಿಯಲ್ಲಿ ಮನುಸ್ಪೃತಿಯನ್ನು ಸುಟ್ಟಾಗ ಏಕೆ ಇವರುಗಳು ಸುಮ್ಮನಿದ್ದರು. ಬಾಬಾ ಸಾಹೇಬರು ಸನಾತನಿಗಳಾಗಿದ್ದರೆ ಏಕೆ ಮನುಸ್ಪೃತಿ ಸುಡುತ್ತಿದ್ದರು ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಟೀಕೆಯ ಬಗ್ಗೆ ಕೇಳಿದಾಗ, ಬೊಮ್ಮಾಯಿ ಅವರು ಹೊಸದಾಗಿ ಬಿಜೆಪಿಗೆ ಸೇರಿದ್ದಾರೆ. ಅವರು ಸರ್ವಪಕ್ಷ ಸದಸ್ಯರು. ಈ ಹಿಂದೆ ಆರ್ ಎಸ್ ಎಸ್ ನ ಗೋಳವಾಲ್ಕರ್ ಹಾಗೂ ಮುಂಜೆ ಅವರು ಏನು ಹೇಳಿದ್ದರು ಎಂಬುದ ಕುರಿತು ಮೊದಲು ಮಾತನಾಡಲಿ ಎಂದು ತಿರುಗೇಟು ನೀಡಿದರು. ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಾಮಚಂದ್ರಪ್ಪ, ಶ್ರೀನಿವಾಸಮೂರ್ತಿ, ಬೆಂಗಳೂರು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೃಷ್ಣಪ್ಪ ದ್ರಪ್ಪ, ಶ್ರೀನಿವಾಸಮೂರ್ತಿ, ಬೆಂಗಳೂರು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೃಷ್ಣಪ್ಪ ಉಪಸ್ಥಿತರಿದ್ದರು.