ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಡೆಸಿದ ಪಾದಯಾತ್ರೆ ಆ ಪಕ್ಷದೊಳಗಿನ ಆಂತರಿಕ ಕಲಹ ಭುಗಿಲೇಳಲು ಹಾದಿ ಮಾಡಿಕೊಟ್ಟಂತಾಗಿದೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಯತ್ನ ಈಗ ತಿರುಗುಬಾಣವಾಗಿದ್ದು, ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ಭಿನ್ನಮತೀಯರು ಸೆಡ್ಡು ಹೊಡೆದು ನಿಂತಿದ್ದಾರೆ.
ಮೂಡ ಪ್ರಕರಣದ ಹಿನ್ನೆಲೆಯಲ್ಲಿ ಜೆಡಿಎಸ್ ಜೊತೆಗೂಡಿ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡು, ನಡೆಸಿದ ಬೆನ್ನಲ್ಲೇ ವಾಲ್ಮೀಕಿ ಹಗರಣ ವಿರೋಧಿಸಿ ಬಳ್ಳಾರಿಗೆ ಭಿನ್ನಮತೀಯ ನಾಯಕರ ಪಾದಯಾತ್ರೆ ಹಮ್ಮಿಕೊಂಡಿದ್ದು, ಬೆಳಗಾವಿಯಲ್ಲಿ ನಡೆದ ಭಿನ್ನಮತೀಯರ ಸಭೆ ರಾಜ್ಯ ಬಿಜೆಪಿ ಮುಖಂಡರ ನಿದ್ದೆಗೆಡಿಸಿದೆ.
ಪ್ರತ್ಯೇಕ ಪಾದಯಾತ್ರೆ ನಿರ್ಣಯದ ಬಗ್ಗೆ ಎಚ್ಚರಿಕೆಯ ನಡೆ ಇಡಲು ರಾಜ್ಯ ಬಿಜೆಪಿ ನಿರ್ಧರಿಸಿದೆ. ಭಿನ್ನಮತೀಯರ ಪಾದಯಾತ್ರೆ ಬೆಂಬಲಿಸಿದರೆ ಅದು ಬಿಜೆಪಿ ನಾಯಕತ್ವದ ದುರ್ಬಲತೆಯನ್ನು ತೋರಿಸುತ್ತದೆ, ಇನ್ನೊಂದೆಡೆ ವಿರೋಧಿಸಿದರೆ ಭ್ರಷ್ಟಾಚಾರದ ಪರವಾಗಿ ಇದ್ದೀರಿ ಎಂದು ಹಣಿಯಲು ಭಿನ್ನಮತೀಯರಿಗೆ ಅವಕಾಶ ನೀಡಿದಂತಾಗುತ್ತದೆ. ಹೀಗಾಗಿ ಬಿಜೆಪಿ ನಾಯಕತ್ವ ಅಡಕತ್ತರಿಗೆ ಸಿಲುಕಿದಂತಾಗಿದೆ.
ಆರ್ ಎಸ್ ಎಸ್ ಬೈಟಕ್ ನಲ್ಲಿ ಈ ಬಗ್ಗೆ ಚರ್ಚಿಸಲು ನಿರ್ಧಾರವಾಗಿತ್ತಾದರೂ ನಾಳೆ ನಡೆಯಬೇಕಿದ್ದ ಆರ್ ಎಸ್ ಎಸ್ ಸಭೆ ಮುಂದೂಡಿಕೆಯಾಗಿದೆ. ಮುಕುಂದ್ ನೇತೃತ್ವದಲ್ಲಿ ಆರ್ ಎಸ್ ಎಸ್ ಬೈಟಕ್ ನಾಳೆ ನಡೆಯಬೇಕಿತ್ತು.
ಬೆಳಗಾವಿ ಸಭೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಮುಖ ರಾಜ್ಯ ನಾಯಕರೊಂದಿಗೆ ಚರ್ಚಿಸುತ್ತಿದ್ದು, ಬೆಳಗಾವಿಯಲ್ಲಿ ನಡೆದ ಭಿನ್ನಮತೀಯರ ಸಭೆಯ ನಿರ್ಣಯಗಳ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಬೆಳಗಾವಿ ಸಭೆಗೆ ಹೋದವರನ್ನು ವಿಶ್ವಾಸಕ್ಕೆ ಪಡೆಯಲು, ಭಿನ್ನಮತೀಯರ ಪಾಳಯದಿಂದ ಹಿಂದಕ್ಕೆ ತರುವ ಕುರಿತೂ ಚರ್ಚೆ ನಡೆಯುತ್ತಿದೆ.
ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗದಂತೆ ರೆಬೆಲ್ ನಾಯಕರ ನಿಲುವು, ಅಭಿಪ್ರಾಯ ಆಲಿಸಲು ಚಿಂತನೆ ನಡೆಸಲಾಗುತ್ತಿದ್ದು, ಸಮಸ್ಯೆ ದೊಡ್ಡದಾಗುವ ಮೊದಲೇ ಡ್ಯಾಮೇಜ್ ಕಂಟ್ರೋಲ್ ವಿಜಯೇಂದ್ರ ಯತ್ನಿಸುತ್ತಿದ್ದಾರೆ. ಇನ್ನೊಂದೆಡೆ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ ಮೊದಲಾದ ಭಿನ್ನಮತೀಯರ ನಾಯಕರು ವಿಜಯೇಂದ್ರ ವಿರುದ್ಧ ಹೊಸಹೊಸ ಕಾರ್ಯತಂತ್ರ ಹೆಣೆಯುತ್ತಿದ್ದು, ರಾಜ್ಯ ಬಿಜೆಪಿ ಈಗ ಒಡೆದ ಮನೆಯಾಗಿಹೋಗಿದೆ.