ಬೆಳಗಾವಿ: ಬಿಜೆಪಿ ರಾಜ್ಯ ಅಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಒಬ್ಬ ದೊಡ್ಡ ಕಲೆಕ್ಷನ್ ಮಾಸ್ಟರ್. ಅವರಪ್ಪ ಯಡಿಯೂರಪ್ಪ ಅವರ ಹೆಸರು ಕೆಡಿಸಿದ್ದು ವಿಜಯೇಂದ್ರ. ಅವರ ‘ಟ್ರಾನ್ಸ್‌ಫರ್ ಕಲೆಕ್ಷನ್ ಎಷ್ಟು ಎಂದು ಲೆಕ್ಕ ಬಿಚ್ಚಿಡಬೇಕೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಓಲೈಸಿಕೊಳ್ಳಲು ರಾಜ್ಯ ಸರ್ಕಾರದ ಖಜಾನೆ ಖಾಲಿ ಮಾಡಿದ್ದಾರೆ ಎಂಬ ವಿಜಯೇಂದ್ರ ಅವರ ಆರೋಪಕ್ಕೆ ತಿರುಗೇಟು ನೀಡಿದರು.
ವಿಜಯೇಂದ್ರ ಅವರಿಗೆ ಜೀವನದ ಅನುಭವವೂ ಇಲ್ಲ, ಶಾಸನಸಭೆಯ ಅನುಭವವೂ ಇಲ್ಲ. ತಪ್ಪಿಸಿಕೊಂಡು ಎಲ್ಲೆಲ್ಲೋ ಓಡಿ ಹೋಗುವುದನ್ನು ಬಿಟ್ಟು ಸದನಕ್ಕೆ ಬಂದು ಪ್ರಶ್ನೆ ಮಾಡುವುದನ್ನು ಕಲಿತುಕೊಳ್ಳಲಿ. ಆಗ ಯಾವ ಖಜಾನೆ ಖಾಲಿ ಆಗಿದೆ, ಯಾವುದು ತುಂಬಿದೆ ಎಂದು ಉತ್ತರ ಕೊಡುತ್ತೇವೆ ಎಂದರು.
ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಕುರಿತುಸಮರ್ಪಕವಾಗಿ ಚರ್ಚಿಸಿಲ್ಲ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಶಿವಕುಮಾರ್ ಅವರು, ಮಹದಾಯಿ, ಮತ್ತಿ ನೀರಾವರಿ ಯೋಜನೆಗಳನ್ನು ಕುರಿತಾದ ಪ್ರಶ್ನೆಗಳಿಗೆ ಕುರಿತು ನಾನು ಉತ್ತರಿಸಿದ್ದೇನೆ ಎಂದು ಪ್ರತಿಕ್ರಿಯಿಸಿದರು.
ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರು ಮತ್ತು ಮೆಕ್ಕೆಜೋಳ ಬೆಳೆಯುವ ರೈತರ ಸಮಸ್ಯೆಗಳಿಗೆ ಸರ್ಕಾರ ಈಗಾಗಲೇ ಸ್ಪಂದಿಸಿದೆ. ಸರ್ಕಾರ ಯಾವತ್ತೂ ರೈತರ ಪರವಾಗಿಯೇ ಇರುತ್ತದೆ ಎದು ತಿಳಿಸಿದರು.

