ಬಾಗಲಕೋಟೆ: ಬಾದಾಮಿ ಕ್ಷೇತ್ರಕ್ಕೆ ಕಳೆದೆರಡು ವರ್ಷಗಳ್ಲಲಿ 2000 ಕೋಟಿ ಅನುದಾನ ನೀಡಲಾಗಿದ್ದು ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಬಾಗಲಕೋಟೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಬಾದಾಮಿಯ ಇಮ್ಮಡಿ ಪುಲಿಕೇಶಿ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಚಾಲುಕ್ಯ ಉತ್ಸವ -2026 ಉದ್ಘಾಟಿಸಿ ಮಾತನಾಡಿದರು.
ಚಾಲುಕ್ಯರು ನಿರ್ಮಿಸಿದ ದೇಗುಲಗಳ ವಾಸ್ತುಶಿಲ್ಪದ ಮಹತ್ವ ಅರಿಯುವ ಉದ್ದೇಶವನ್ನು ಚಾಲುಕ್ಯ ಉತ್ಸವ ಹೊಂದಿದೆ. ಬಾದಾಮಿ ಐಹೊಳೆ ಪಟ್ಟದಕಲ್ಲುಗಳ ವೈಭವವನ್ನು ವೀಕ್ಷಿಸಲು ದೇಶವಿದೇಶಗಳಿಂದ ಜನರು ಬರುತ್ತಾರೆ. ಚಾಲುಕ್ಯರ ಆಡಳಿತ ವೈಖರಿಯಂತೆ ನಮ್ಮ ಸರ್ಕಾರವೂ ಸರ್ವಧರ್ಮಗಳ ಸಮನ್ವಯತೆಯನ್ನು ಪಾಲಿಸುತ್ತದೆ. ನಾನು ಮುಖ್ಯಮಂತ್ರಿಯಾಗಿ ಈ ಎರಡು ವರ್ಷದಲ್ಲಿ ಬಾದಾಮಿಕ್ಷೇತ್ರಕ್ಕೆ ಸುಮಾರು 2 ಸಾವಿರ ಕೋಟಿ ರೂ.ಗಳ ಅನುದಾನವನನ್ನು ನೀಡಿದ್ದೇನೆ. 1400 ಕೋಟಿ ರೂ.ಗಳ ಏತನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಅಲ್ಲದೇ 400 ಕೋಟಿ ರೂ.ಗಳಲ್ಲಿ ಬಾದಾಮಿಗೆ ಕುಡಿಯುವ ನೀರಿನ ಯೋಜನೆ, 50 ಕೋಟಿ ರೂ.ಗಳಲ್ಲಿ ರಸ್ತೆ ಯೋಜನೆ ಸೇರಿದಂತೆ ಹಲವು ಅಭಿವೃದ್ದಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ನಮ್ಮ ಪ್ರಣಾಳಿಕೆಯಲ್ಲಿ 590 ಭರವಸೆಗಳಲ್ಲಿ 240 ಈಡೇರಿಸಲಾಗಿದ್ದು, 5 ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಬಾದಾಮಿ ಕ್ಷೇತ್ರದ ಜನರ ಉಪಕಾರವನ್ನು ಮರೆಯುವುದಿಲ್ಲ:
ಐದು ವರ್ಷಗಳ ಕಾಲ ಬಾದಾಮಿ ಕ್ಷೇತ್ರದ ಶಾಸಕ ನಾಗಿದ್ದೆ, 2018 ರಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಸ್ಪರ್ಧಿಸಿದ್ದು, ಐದು ಬಾರಿ ಗೆದ್ದಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಲಾಯಿತು. ಆದರೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸಿದ್ದರು ಎನ್ನುವುದನ್ನು ಮರೆಯಲು ಸಾಧ್ಯವಿಲ್ಲ. ಬಾದಾಮಿ ಕ್ಷೇತ್ರಕ್ಕೆ ಬಂದು ಎರಡು ಅಥವಾ ಮೂರು ಬಾರಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿ ಜನರ ಆಶೀರ್ವಾದ ಬೇಡಿರಬಹುದು. ಇಲ್ಲಿನ ಜನರು ದೊಡ್ಡ ಮನಸ್ಸು ಮಾಡಿ ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದರಿಂದ ವರುಣಾ ಕ್ಷೇತ್ರದಲ್ಲಿ ಗೆದ್ದು ಮಂತ್ರಿಯಾಗಲು ಸಾಧ್ಯವಾಯಿತು ಎನ್ನುವುದನ್ನು ಮರೆಯಲಾಗುವುದಿಲ್ಲ. ನಿಮ್ಮ ಉಪಕಾರವನ್ನು ನಾನೆಂದಿಗೂ ಮರೆಯುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಬಾದಾಮಿ ಶಾಸಕನಾಗಿದ್ದ ಸಂದರ್ಭದಲ್ಲಿ ಚಾಲುಕ್ಯ ಉತ್ಸವ ನಡೆಯಲಿಲ್ಲ ಹಾಗೂ ಇಮ್ಮಡಿ ಪುಲಕೇಶಿ ಪ್ರತಿಮೆ ಸ್ಥಾಪನೆಯಾಗಲಿಲ್ಲ ಎನ್ನುವುದು ನೋವಿನ ಸಂಗತಿ. ಇಂದು ಭೀಮಸೇನಾ ಚಿಮ್ಮನಕಟ್ಟಿಯವರ ಒತ್ತಾಯದಿಂದ ಪ್ರತಿಮೆ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು. ಈ ವರ್ಷ ಚಾಲುಕ್ಯ ಉತ್ಸವ ನಡೆಯಲೇಬೇಕೆಂದು ಈ ಭಾಗದ ಶಾಸಕರ ಒತ್ತಾಯದ ಮೇರೆಗೆ ಬಜೆಟ್ ನಲ್ಲಿಯೇ ಚಾಲುಕ್ಯ ಉತ್ಸವವನ್ನು ಘೋಷಣೆ ಮಾಡಲಾಯಿತು. ಮೂರು ಕೋಟಿ ರೂ ಗಳನ್ನೂ ಇದಕ್ಕಾಗಿ ಒದಗಿಸಲಾಗಿದೆ. ಉತ್ಸವಕ್ಕೆ ಒಂದು ಕೋಟಿ ರೂ ಗಳನ್ನು ಹೆಚ್ಚುವರಿಯಾಗಿ ನೀಡಲಾಗುವುದು ಎಂದರು. ಇಮ್ಮಡಿ ಪುಲಕೇಶಿ ಪ್ರತಿಮೆ ಅನಾವರಣಕ್ಕೆ ಸರ್ಕಾರ ನೆರವು ಒದಗಿಸಲಿದೆ ಎಂದರು.
ಕೇಂದ್ರ ಸರ್ಕಾರದ ನೆರವಿಗೆ ಮನವಿ ಪತ್ರ:
ಕೇಂದ್ರ ಸರ್ಕಾರದಿಂದ ನೆರವು ಒದಗಿಸುವುದಾಗಿ ಸಂಸದರು ತಿಳಿಸಿದ್ದು ಇದಕ್ಕೆ ಮನವಿ ಪತ್ರವನ್ನು ನಾಳೆಯೇ ಕೊಡಲಾಗುವುದು. ಕೇಂದ್ರ ಸರ್ಕಾರ ನಮ್ಮ ಮನವಿಗಳಿಗೆ ಹೋಗುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಇವರಿಗೆ ಮನವಿಯನ್ನು ನೀಡಿರಲಿಲ್ಲ. ರಾಜ್ಯದ ಮನವಿಗಳಿಗೆ ಕೇಂದ್ರ ಸರ್ಕಾರ ಕಿವಿಗೊಡುತ್ತಿಲ್ಲ. ರಾಜ್ಯಸರ್ಕಾರ ಸಧ್ಯದಲ್ಲಿಯೇ ಮನವಿಯನ್ನು ಸಲ್ಲಿಸುತ್ತದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಅನುದಾನವನ್ನು ಕೊಡಿಸಲು ಬಿಜೆಪಿ ಸಂಸದರು ಪ್ರಯತ್ನಿಸಬೇಕು ಎಂದರು.
ಸಚಿವರಾದ ಬೈರತಿ ಸುರೇಶ್, ಆರ್.ಬಿ.ತಿಮ್ಮಾಪುರ, ಶಾಸಕರಾದ ಭೀಮ್ ಸೇನ್ ಚಿಮ್ಮನಕಟ್ಟಿ, ವಿಜಯಾನಂದ ಕಾಶಪ್ಪನವರ್ ಸೇರಿ ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು ಮತ್ತು ಮುಖಂಡರುಗಳು ಉಪಸ್ಥಿತರಿದ್ದರು.

