ಬಿಜೆಪಿ ಶಾಸಕ ರವಿಕುಮಾರ್‌ ಹೇಳಿಕೆ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ

Most read

ಬೀದರ್: ಬಿಜೆಪಿ ಮುಖಂಡ ವಿಧಾನ ಪರಿಷತ್‌ ಸದಸ್ಯ‌ ಎನ್. ರವಿಕುಮಾರ ಅವರು‌ ಸರ್ಕಾರದ‌ ಮುಖ್ಯ‌ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ನೀಡಿರುವ ಹೇಳಿಕೆ ಇಡೀ‌ ಸ್ತ್ರೀ ಕುಲಕ್ಕೆ ಮಾಡಿರುವ ಅವಮಾನ ಎಂದು‌ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಗುಡುಗಿದ್ದಾರೆ.

ನಗರದಲ್ಲಿ ಇಂದು ಮಾತನಾಡಿದ ಅವರು, ಬಿಜೆಪಿಯವರು ಮಾತೆತ್ತಿದರೆ ರಾಮಾಯಣ ಕುರಿತು ಭೋದನೆ ಮಾಡುತ್ತಾರೆ. ಮಹಿಳೆಯರನ್ನು ಗೌರವಿಸಬೇಕು ಎಂದು ಹೇಳುತ್ತಾರೆ. ಇನ್ನೊಂದು ಕಡೆ ಹಲ್ಕಾ ಮಾತನಾಡುತ್ತಾರೆ. ಇದು ಬಿಜೆಪಿಯವರ ಸಂಸ್ಕೃತಿ ತೋರಿಸುತ್ತದೆ. ಇವರಿಗೆ ಮಾನ ಮರ್ಯಾದೆ ಇಲ್ಲ ಎಂದು ಲೇವಡಿ ಮಾಡಿದರು.

ರವಿಕುಮಾರ್‌ ಗೆ ಮಹಿಳೆಯರ ಬಗ್ಗೆ ಹಗುರ ಮಾತನಾಡುವ ಕೆಟ್ಟ ಚಾಳಿ ಬೆಳೆಸಿಕೊಂಡಿದ್ದಾರೆ. ಮಹಿಳೆಯರನ್ನು ಅವಮಾನಿಸುವುದು, ಅವಾಚ್ಯ ಪದಗಳಿಂದ ನಿಂದಿಸಿ ಮಾನಸಿಕ ಹಿಂಸೆ ಕೊಡುವುದು‌ ಅವರಿಗೆ ಅಭ್ಯಾಸವಾಗಿದೆ. ಮತ್ತೊಬ್ಬ ಬಿಜೆಪಿ ಮುಖಂಡ ಸಿ.ಟಿ. ರವಿ‌ ಸದನದಲ್ಲಿ ನನ್ನನ್ನು ನಿಂದಿಸಿದ್ದರು. ಇವರಿಗೆ ನೈತಿಕ ಜವಾಬ್ದಾರಿ ಇಲ್ಲ. ಇಂತಹವರು ವಿಧಾನಸಭೆಯಲ್ಲಿ ಇರಬಾರದು ಎಂದರು.

ಕೆಟ್ಟ ಬಾಯಿ, ಹೊಲಸು ಬಾಯಿ ಏನು ಮಾತಾಡಿದರೂ ಜನ ಸಹಿಸುತ್ತಾರೆ, ಕರ್ನಾಟಕ ರಾಜ್ಯದ ಜನ ಅವರನ್ನ ಬದುಕಿಸುತ್ತಾರೆ ಎಂಬ ಭಾವನೆ ಅವರಿಗೆ ಬಂದು ಬಿಟ್ಟಿದೆ. ಇದು ಅತ್ಯಂತ ಖಂಡನೀಯ, ಹೆಣ್ಣು ಮಕ್ಕಳನ್ನ ಅವಮಾನ‌ ಮಾಡಿದರೆ ಖಂಡಿಸುವುದು ನಮ್ಮ ಸಮಾಜದ ಧರ್ಮ. ಮನುಸ್ಮೃತಿಯನ್ನು ಎಲ್ಲಾ ಕಡೆ ಬಿತ್ತನೆ ಮಾಡಲು ಹೊರಟ್ಟಿದ್ದಾರೆ ಎಂದರು.

ರಾಜ್ಯದಲ್ಲಿ ಸೆಪ್ಟೆಂಬರ್ ನಲ್ಲಿ ಕ್ರಾಂತಿಯಾಗಲಿದೆ ಎಂಬ ವಿಚಾರ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ನನ್ನ ಕಡೆಯಿಂದ  ಯಾವುದೇ ಉತ್ತರ ನಿಮಗೆ ಸಿಗುವುದಿಲ್ಲ. ನಾನು ಪಕ್ಷದ ಒಬ್ಬ ಶಿಸ್ತಿನ ಸಿಪಾಯಿ, ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ದ ಎಂದರು.‌

More articles

Latest article