ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕುರಿತು ಡಾ.ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೆ ಸತೀಶ್ ಅವರೂ ಪ್ರಗತಿಪರ ಚಿಂತಕರು ಎಂದು ಹೇಳಿದ್ದಾರೆ. ನಾವೂ ಅದನ್ನೇ ಹೇಳುತ್ತೇವೆ. ಅದರಲ್ಲಿ ತಪ್ಪೇನಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ನಗರದಲ್ಲಿ ಇಂದು ಮಾತನಾಡಿದ ಅವರು, ನವೆಂಬರ್ ಕ್ರಾಂತಿಯೂ ಇಲ್ಲ, ವಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ. ಮಾಧ್ಯಮದವರು ಆರಾಮಾಗಿ ಇರಿ. ನಾವೂ ಆರಾಮವಾಗಿ ಇದ್ದೇವೆ. ನಮಗೆ ಇಲ್ಲದ ಟೆನ್ಷನ್ ನಿಮಗೇಕೆ? ಇದೇ ವಿಷಯವನ್ನು ತಿಕ್ಕಿ ತಿಕ್ಕಿ ಕೇಳಬೇಡಿ. ಸಂಪುಟ ಪುನರ್ ರಚನೆ ಕುರಿತು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಗಟ್ಟಿಯಾದ ಹೈಕಮಾಂಡ್ ನಮ್ಮದು ಎಂದರು.
ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಅವರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ನಮ್ಮ ಪಕ್ಷದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಯಾವ ಕೆಲಸ ಮಾಡಬೇಕು ಎಂದು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಿ ಎಂದರು.
ಕೇಂದ್ರ ಸರ್ಕಾರ ಏನು ಅಭಿವೃದ್ಧಿ ಮಾಡಿದೆ ಎಂದು ನಮಗೆ ತೋರಿಸಲಿ. ಈ ಹಿಂದೆ ಇದ್ದ ಯುಪಿಎ ಸರ್ಕಾರವೇ ಎಲ್ಲವನ್ನು ಮಾಡಿದೆ. ಬಿಜೆಪಿ ಸರ್ಕಾರ ಒಂದೂ ಅಣೆಕಟ್ಟು ಕಟ್ಟಿಲ್ಲ. ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ. ಮೆಟ್ರೋ, ಅಣೆಕಟ್ಟು ಎಲ್ಲ ನಮ್ಮ ಕೊಡುಗೆ. ನಾವು ರೈತರಿಗೆ ಅನುಕೂಲ ಮಾಡಿದ್ದರೆ ನಾವು ಇಟ್ಟ ಹೆಸರುಗಳನ್ನು ಇವರು ಬದಲಾಯಿಸಿದ್ದಾರೆ ಅಷ್ಟೇ ಎಂದು ಟೀಕಿಸಿದರು.
ಬಿಜೆಪಿಯವರಿಗೆ ಸತ್ಯವನ್ನು ಹೇಳಿದರೆ ಮಿರ್ಚಿ ಇಟ್ಟಂತೆ ಆಗುತ್ತಿದೆ. ಆರ್‌ಎಸ್‌ಎಸ್ ದೇಶಭಕ್ತಿಯ ಯಾವ ಕೆಲಸ ಮಾಡಿದೆ? ಸ್ವಾತಂತ್ರಕ್ಕೆ ಹೋರಾಟ ಮಾಡಿದ, ಸಂವಿಧಾನ ಬರೆದ ಅಂಬೇಡ್ಕರ್ ಅವರನ್ನೇ ವಿರೋಧ ಮಾಡಿದ ಸಂಘಟನೆ ಅದು. ಸ್ವಾತಂತ್ರ ತಂದುಕೊಟ್ಟ ಗಾಂಧಿಯನ್ನು ವಿರೋಧ ಮಾಡಿದ ಸಂಘ. ಆರ್‌ಎಸ್‌ಎಸ್ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನೇ ಹಾರಿಸಲಾಗದಂತ ಸಂಘಟನೆ ಅದು. ಇವರು ದೇಶಭಕ್ತರಾ? ಯಾವ ಆಧಾರದ ಮೇಲೆ ಇವರದ್ದು ದೇಶಭಕ್ತಿ ಇರುವ ಸಂಸ್ಥೆ ಎಂದು ಹೇಳಲಿ ಎಂದು ತಂಗಡಗಿ ಸವಾಲು ಹಾಕಿದರು.
ಸರ್ಕಾರ ಆರ್‌ಎಸ್‌ಎಸ್ ನಿಷೇಧ ಮಾಡುತ್ತದೆ ಎಂದು ಎಲ್ಲಿಯೂ ಹೇಳಿಲ್ಲ. ಜಗದೀಶ ಶೆಟ್ಟರ್ ಹೊರಡಿಸಿದ ಆದೇಶವನ್ನೇ ಮರು ಆದೇಶ ಮಾಡಲಾಗಿದೆ. ಕೊಪ್ಪಳದಲ್ಲಿ ರೂ.2 ಸಾವಿರ ಕೋಟಿ ಅಷ್ಟು ಕಾಮಗಾರಿ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.