ಕಲಬುರಗಿ: ಜಿಲ್ಲೆಯ ಯಡ್ರಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ 11 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಶಿಕ್ಷಕನೊಬ್ಬ ಅತ್ಯಾಚಾರ ಮಾಡಿದ್ದ ಪ್ರಕರಣ ನಡೆದಿತ್ತು. ಅತ್ಯಾಚಾರ ಖಂಡಿಸಿ ಇಂದು ಬಂಜಾರ ಸಮುದಾಯ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ವೇಳೆ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿಯಾಗಿರುವ ಮಣಿಕಂಠ್ ರಾಠೋಡ್ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರ ಬಂದಿದ್ದ. ಇಂದು ಮತ್ತೆ ಸ್ಟೇಷನ್ ಬಜಾರ್ ಪೊಲೀಸರು ಬಂಧಿಸಿದ್ದಾರೆ.
ನಗರದ ಬಂಜಾರ ಭವನದಿಂದ ಡಿಸಿ ಕಚೇರಿವರೆಗೆ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಕೆಲವು ಕಿಡಿಗೇಡಿಗಳು ಕಲ್ಲುತೂರಾಟ ಮಾಡಿದ್ದರು. ಘಟನೆಯಲ್ಲಿ ಹಲವು ವಾಹನಗಳು ಜಖಂಗೊಂಡಿದ್ದವು. ಕೆಲವು ಅಂಗಡಿಗಳ ಕಿಟಕಿ, ಗಾಜುಗಳು ಪುಡಿ ಪುಡಿಯಾಗಿದ್ದವು. ಆಟೋ ಚಾಲಕರೊಬ್ಬರ ತಲೆಗೆ ಕಲ್ಲು ಬಿದ್ದು ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದರು. ಡಿಸಿ ಕಚೇರಿ ಎದುರು ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದ್ದರು.