ಬಿಜೆಪಿ ಮುಖಂಡ ಜನಾರ್ಧನ ರೆಡ್ಡಿಗೆ ಬಿಗ್‌ ರಿಲೀಫ್;‌ ಜೈಲು ಶಿಕ್ಷೆ ರದ್ದು, ಜಾಮೀನು ಮಂಜೂರು: ತೆಲಂಗಾಣ ಹೈಕೋರ್ಟ್‌

Most read

ಬೆಂಗಳೂರು: ಗಂಗಾವತಿ ಬಿಜೆಪಿ ಶಾಸಕರಾಗಿದ್ದ ಗಾಲಿ ಜನಾರ್ಧನ ರೆಡ್ಡಿ ಅವರಿಗೆ  ಸಿಬಿಐ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ತೆಲಂಗಾಣ ಹೈಕೋರ್ಟ್​  ರದ್ದುಪಡಿಸಿದ್ದು, ಜಾಮೀನು ಮಂಜೂರು ಮಾಡಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಮತ್ತು ಅವರ ಸಂಬಂಧಿ ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್ (ಓಎಂಸಿ) ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸ್ ರೆಡ್ಡಿ ಸೇರಿದಂತೆ ನಾಲ್ವರಿಗೆ ಹೈದರಾಬಾದ್‌ ನಲ್ಲಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ವಿಶೇಷ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು.

16 ವರ್ಷಗಳ ಹಿಂದೆ ಈ ಪ್ರಕರಣವನ್ನು ಸಿಬಿಐ ದಾಖಲಿಸಿತ್ತು. ಪ್ರಕರಣ ದಾಖಲಾಗುವ ಸಮಯದಲ್ಲಿ ಆಂಧ್ರಪ್ರದೇಶ ಗೃಹ ಸಚಿವೆಯಾಗಿದ್ದ ಸಬಿತಾ ಇಂದ್ರಾ ರೆಡ್ಡಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಬಿ ಕೃಪಾನಂದಂ ವಿರುದ್ಧದ ಆರೋಪಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿತ್ತು.

ಗಾಲಿ ಜನಾರ್ಧನ ರೆಡ್ಡಿಗೆ ಸಂಬಂಧಿಸಿದ ಅಕ್ರಮ ಗಣಿಗಾರಿಕೆ ಪ್ರಕರಣವು ಕರ್ನಾಟಕ ರಾಜಕೀಯ ಮತ್ತು ಗಣಿಗಾರಿಕೆ ಉದ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಓಬಳಾಪುರಂ ಗಣಿಗಾರಿಕೆ ಕಂಪನಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಜನಾರ್ಧನ ರೆಡ್ಡಿಯವರನ್ನು ಸಿಬಿಐ ಕೋರ್ಟ್ ಮೇ 6 ರಂದು ಸುದೀರ್ಘ ವರ್ಷಗಳ ತನಿಖೆಯ ನಂತರ ದೋಷಿಯೆಂದು ಘೋಷಿಸಿತ್ತು.

ರೆಡ್ಡಿ 2008-2011ರ ಅವಧಿಯಲ್ಲಿ ಕರ್ನಾಟಕ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ಬಳ್ಳಾರಿಯ ಓಬಳಾಪುರಂ ಗಣಿಗಾರಿಕೆ ಕಂಪನಿಯ ಮೂಲಕ ಕಾನೂನುಬಾಹಿರವಾಗಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಿದ ಆರೋಪ ದಾಖಲಾಗಿತ್ತು. ಓಎಂಸಿ ಕಂಪನಿಯು ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿಯಲ್ಲಿ ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸಿದೆ. ಗಣಿಗಾರಿಕೆಗೆ ನಿಗದಿಯಾದ ಪರವಾನಗಿಯ ಗಡಿಯನ್ನು ಮೀರಿ, ನಿಷೇಧಿತ ಪ್ರದೇಶದಲ್ಲೂ ಅಕ್ರಮವಾಗಿ ಅದಿರು ಗಣಿಗಾರಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಕರ್ನಾಟಕ– ಆಂಧ್ರಪ್ರದೇಶ ಅಂತರರಾಜ್ಯ ಗಡಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ 884 ಕೋಟಿ ರೂ. ನಷ್ಟ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಇವರನ್ನು ಆರೋಪಿ ಎಂದು ತೀರ್ಪು ನೀಡಿತ್ತು.

More articles

Latest article