ಕಾಂಗ್ರೆಸ್‌ ಕುರಿತು ಮಾತನಾಡಲು ಬಿಜೆಪಿ, ಜೆಡಿಎಸ್ ಗೆ ನೈತಿಕತೆ ಇಲ್ಲ; ಲಕ್ಷ್ಮಿ ಹೆಬ್ಬಾಳಕರ್

Most read

ಹಾಸನ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಕುರಿತು ಮಾತನಾಡುವುದಕ್ಕೆ ಬಿಜೆಪಿ, ಜೆಡಿಎಸ್ ನವರಿಗೆ ಯಾವ ನೈತಿಕತೆಯೂ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಕ್ಷುಲ್ಲಕ ವಿಷಯವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಲೇವಡಿ ಮಾಡಿದ್ದಾರೆ.

ಹಾಸನದಲ್ಲಿ ಗುರುವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಸ್ವಾಭಿಮಾನಿ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ಜನಕಲ್ಯಾಣ ಸಮಾವೇಶದಲ್ಲಿ ಪಾಲ್ಗೊಂಡು, ಸಾರ್ವಜನಿಕರನ್ನು ಉದ್ದೇಶಿಸಿ ಸಚಿವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ನಾಲ್ಕು ದಶಕಗಳಿಂದ ಕಳಂಕರಹಿತ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಇಂತಹ ಮುಖ್ಯಮಂತ್ರಿಯವರಿಗೆ ಮುಡಾ ಹಗರಣದ ಹೆಸರಿನಲ್ಲಿ ಕಳಂಕ ತರಲು ವಿರೋಧ ಪಕ್ಷದವರು ಯತ್ನಿಸುತ್ತಿದ್ದಾರೆ. ಇದರ ಒಳಸಂಚೇನು ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದು ಕಿಡಿಕಾರಿದರ

ಬಿಜಿಪಿ, ಜೆಡಿಎಸ್ ನವರಿಗೆ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಬಗ್ಗೆ ಮಾತಾಡುವುದಕ್ಕೆ ಯಾವುದೇ ನೈತಿಕತೆ ಇಲ್ಲ.  ಮುಖ್ಯಮಂತ್ರಿ ಸ್ಥಾನ ಎರಡುವರೆ ಸಾವಿರ ಕೋಟಿಗಳಿಗೆ ಮಾರಾಟವಾಗಿತ್ತೆಂದು ಅವರ ಪಕ್ಷದ ನಾಯಕರೇ ಆರೋಪ ಮಾಡಿದ್ದರು. ಇನ್ನು ಜೆಡಿಎಸ್ ನವರು ಮೊದಲು ಹೆಣ್ಣು ಮಕ್ಕಳಿಗೆ ಗೌರವ ಕೊಡುವುದನ್ನು ಕಲಿಯಲಿ. ಯಾರು ಹೆಣ್ಣು ಮಕ್ಕಳಿಗೆ ಅವಮಾನ ಮಾಡಿದ್ದಾರೆ: ಯಾರು ದುಶ್ಯಾಸನರು, ಎಷ್ಟು ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರ ಪಕ್ಷದ ಚಿನ್ಹೆ ತೆನೆ ಹೊತ್ತ ಮಹಿಳೆಗೇ ಅಗೌರವ ತೋರಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಎಂದೂ ಮಹಿಳೆಯರಿಗೆ ಅಗೌರವ ತೋರುವುದಿಲ್ಲ. ಮಹಿಳೆಯರ ಸಬಲೀಕರಣಕ್ಕೆ ಗೃಹಲಕ್ಷ್ಮಿ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ. ರಾಜ್ಯದಲ್ಲಿ 138 ಶಾಸಕ ಬಲದೊಂದಿಗೆ ಗಟ್ಟಿಯಾದ ಸರಕಾರವಿದೆ. ಅಲ್ಪ ಬಹುಮತವಿದ್ದಿದ್ದರೆ ಬಿಜೆಪಿ ಇಷ್ಟೊತ್ತಿಗಾಗಲೆ ಏನೆಲ್ಲ ಕಿತಾಪತಿ ಮಾಡಲು ಪ್ರಯತ್ನಿಸುತ್ತಿತ್ತು. ನಮ್ಮ ಅರ್ಧಕ್ಕಿಂತ ಕಡಿಮೆ ಸ್ಥಾನವಿದ್ದರೂ ನಮ್ಮ ಶಾಸಕರಿಗೆ ಆಮಿಷಗಳನ್ನೊಡ್ಡಿ ಈಗಲೂ ಆಪರೇಷನ್ ಮಾಡಲು ಹುನ್ನಾರ ನಡೆಸುತ್ತಿದೆ ಎಂದು ಸಚಿವರು ಆರೋಪಿಸಿದರು.

ಬಿಜೆಪಿಯವರು ರಾಜ್ಯದಲ್ಲಿ ಅಧಿಕಾರದಲ್ಲಿರಲಿ, ಕೇಂದ್ರದಲ್ಲಿ ಅಧಿಕಾರದಲ್ಲಿರಲಿ, ವ್ಯವಸ್ಥೆಯನ್ನು ಬಳಸಿಕೊಂಡು ವಿರೋಧ ಪಕ್ಷದವರಿಗೆ ಕಿರುಕುಳ ನೀಡುವುದೇ ದಂಧೆಯಾಗಿದೆ. ಈಗ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳಾದ ಸಿಬಿಐ, ಇಡಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಹಾಗಾಗಿ, ನಾವು ಒಗ್ಗಟ್ಟಿನಿಂದ ಸರಕಾರವನ್ನು ಸಮರ್ಥಿಸಿಕೊಳ್ಳುವ, ಬಿಜೆಪಿಯವರನ್ನು ಖಂಡಿಸುವ ಕೆಲಸ ಮಾಡಬೇಕಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಸಚಿವರು ಸಲಹೆ ನೀಡಿದರು.

ಬಿಜೆಪಿಯವರು ನೂರು ಬಾರಿ ಸುಳ್ಳನ್ನು ಹೇಳಿ ಅದೇ ಸತ್ಯ ಎನ್ನುವಂತೆ ಬಿಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ, ಮೊದಲ ಸುಳ್ಳಿನಲ್ಲೇ ಅದನ್ನು ಖಂಡಿಸುವ, ಸುಳ್ಳೆಂದು ಸಾಬೀತುಪಡಿಸುವ ಕೆಲಸವನ್ನು ನಾವು ಮಾಡಬೇಕಿದೆ. ಬಿಜೆಪಿಗೆ ಈಗ ರಾಜ್ಯದಲ್ಲಿ ಶಕ್ತಿ ಇಲ್ಲವಾಗಿದೆ, ಮಾತನಾಡಲು ಯಾವುದೇ ವಿಷಯಗಳು ಇಲ್ಲವಾಗಿದೆ. ತನ್ನ ಒಳಜಗಳದಿಂದಾಗಿ ಜನರಿಗೆ, ಕಾರ್ಯಕರ್ತರಿಗೆ ಮುಖ ತೋರಿಸಲಾಗದಂತಹ ಸ್ಥಿತಿ ಬಿಜೆಪಿ ನಾಯಕರಿಗಾಗಿದೆ. ಆದರೂ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ನಾಯಕರು ಎಷ್ಟೇ ಕಿರುಕುಳ ಕೊಟ್ಟರೂ ಜಗ್ಗದ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸಾರಥ್ಯದ ನಮ್ಮ ಸರ್ಕಾರ ಇಡೀ ದೇಶಕ್ಕೆ ಮಾದರಿಯಾಗುವಂತ ಆಡಳಿತವನ್ನು ನೀಡುತ್ತಿದೆ. ಇಡೀ ರಾಜ್ಯದ ಜನರು ನಮ್ಮ ಪಕ್ಷದೊಂದಿಗಿದ್ದಾರೆ, ನಮ್ಮ ಸರಕಾರದೊಂದಿಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ, ಚುನಾವಣೆಗೂ ಮುನ್ನ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಕಾಂಗ್ರೆಸ್ ಪಕ್ಷದ ಇತಿಹಾಸವೇ ಹಾಗಿದೆ, ತ್ಯಾಗ, ಬಲಿದಾನಗಳಿಂದಲೇ ಕಟ್ಟಲ್ಪಟ್ಟಿರುವ ಪಕ್ಷ ನಮ್ಮದು. ಕೊಟ್ಟ ಮಾತಿನಿಂದ ಎಂದಿಗೂ ಹಿಂದೆ ಸರಿಯುವ ಪಕ್ಷ ನಮ್ಮದಲ್ಲ, ಬಿಜೆಪಿಯವರ ಹಾಗೆ ಸುಳ್ಳು ಹೇಳಿ ಎಂದೂ ಅಧಿಕಾರಕ್ಕೆ ಬಂದಿಲ್ಲ. ನಾವು ಕಾಂಗ್ರೆಸಿಗರು ಸದಾ ಬಡವರ ಪರವಾಗಿದ್ದೇವೆ. ನಮಗೆ ಬಡವರ, ದೀನ ದಲಿತರ, ಅಲ್ಪಸಂಖ್ಯಾತರ, ರೈತರ, ಕಾರ್ಮಿಕರ, ಮಹಿಳೆಯರ ಸಬಲೀಕರಣವೇ ಮುಖ್ಯವಾಗಿದೆ ಎಂದು ಹೇಳಿದರು.

ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೇರಿದಂತೆ ಎಲ್ಲ ಸಚಿವರು, ಶಾಸಕರು, ಮಾಜಿ ಸಚಿವರು ಮತ್ತು ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು, ಮುಖಂಡರು ಪಾಲ್ಗೊಂಡಿದ್ದರು.

More articles

Latest article