ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ವಿರುದ್ದ ಕುರುಬ ಸಮುದಾಯ ಹಾಗೂ ಹಿಂದುಳಿದ ವರ್ಗಗಳ ಸಮುದಾಯದವರು ರಾಜ್ಯದೆಲ್ಲಡೆ ಸಿಡಿದೇಳಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಎಚ್ಚರಿಸಿದೆ.
ಬೆಂಗಳೂರಿನ ಮೌರ್ಯ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಈರಣ್ಣ, ಮಾಜಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮೂರ್ತಿ, ಕಾರ್ಯಾಧ್ಯಕ್ಷ ಬಸವರಾಜ ಲ.ಬಸಲಿಗುಂದಿ ಸಿದ್ಧರಾಮಯ್ಯ ವಿರುದ್ಧ ಪಾದಯಾತ್ರೆಯ ಬೆದರಿಕೆ ಹಾಕಿದರೆ ಪರ್ಯಾಯವಾಗಿ ಕುರುಬರ ಸಂಘ ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳು ಇಡೀ ರಾಜ್ಯಾದ್ಯಂತ ಪ್ರತಿಭಟನಾ ಕಾರ್ಯಕ್ರಮ ಮತ್ತು ಹಿಂದುಳಿದ ವರ್ಗಗಳ ಎಚ್ಚರಿಕೆ ಸಮಾವೇಶ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ತಮ್ಮ ಮೇಲೆ ಆರೋಪ ಬಂದಾಕ್ಷಣ ತನಿಖಾ ಆಯೋಗ ರಚಿಸಿರುವ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು, ಈ ಹಿಂದೆಯೂ ಹಿಂದುಳಿದ ವರ್ಗಗಳ ನಾಯಕರಾದ ದೇವರಾಜು ಅರಸು, ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರಂಸಿಂಗ್ ವಿರುದ್ಧ ಇಂತಹದೇ ಷಡ್ಯಂತ್ರ ರೂಪಿಸಲಾಗಿತ್ತು, ಈಗ ಸಮಸ್ತ ಹಿಂದುಳಿದ ಸಮುದಾಯಗಳು ಜಾಗೃತವಾಗಿವೆ, ಸಮಾಜವಾದದ ಹಿನ್ನಲೆಯಿಂದ ಬಂದಿರುವ ಸಿದ್ದರಾಮಯ್ಯನವರು ಬಡವರು, ಮಹಿಳೆಯರು, ರೈತರು, ಕಾರ್ಮಿಕರ ಪರ ಇರುವಂತೆ ಈ ವರ್ಗಗಳು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ಪರ ಬಂಡೆಯಂತೆ ನಿಂತಿವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯಲ್ಲಿ ಮುಂದುವರೆಯಬಾರದು ಎಂದು ಬಿಜೆಪಿ ಜೆಡಿಎಸ್ ಷಡ್ಯಂತ್ರ ರೂಪಿಸಿವೆ. ಕಪ್ಪುಚುಕ್ಕೆ ಇಲ್ಲದೆ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅವರಿಗೆ ಕಳಂಕ ತರುವ ಕಾರ್ಯವನ್ನು ಎರಡೂ ಪಕ್ಷಗಳು ಮಾಡುತ್ತಿವೆ.
ಮೂಡಾ ಹಗರಣದ ಮೂಲಕ ಅವರ ಮೇಲೆ ಕೆಟ್ಟ ಹೆಸರು ಬರುವಂತೆ ಮಾಡಲು ಬಿಜೆಪಿ ಜೆಡಿಎಸ್ ಮುಂದಾಗಿವೆ. ಪ್ರಕರಣ ಸಂಬಂಧ ಸಿದ್ದರಾಮಯ್ಯ ತನಿಖೆಗೂ ಆದೇಶಿಸಿ ಪಾರದರ್ಶಕತೆ ಮೆರೆದಿದ್ದಾರೆ
ವಿಜಯೇಂದ್ರ ಹಾಗೂ ಕುಮಾರಸ್ವಾಮಿ ಇಬ್ಬರೂ ಸೇರಿ ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯಲು ಹೊರಟಿದ್ದಾರೆ. ಸಮುದಾಯವಾಗಿ ನಾವು ಸಿದ್ದರಾಮಯ್ಯ ಬೆನ್ನಿಗೆ ನಿಲ್ಲುತ್ತೇವೆ.
ಪಾದಯಾತ್ರೆ ದುರುದ್ದೇಶ ಪೂರಿತ ರಾಜಕೀಯ ಪ್ರೇರಿತ ಯಾತ್ರೆ ಹಾಗಾಗಿ ಇದನ್ನ ನಿಲ್ಲಿಸಬೇಕು. ಇಲ್ಲದಿದ್ದರೆ ನಾವು ರಾಜ್ಯಾದ್ಯಂತ ದಂಗೆ ಏಳಬೇಕಾದೀತು. ಹಾಗೇ ರಕ್ತ ಕ್ರಾಂತಿ ಆದೀತು ಎಂದು ಸಂಘದ ನಾಯಕರು ಎಚ್ಚರಿಸಿದರು.