ಪಕ್ಷದ ಶಿಸ್ತು ಉಲ್ಲಂಘನೆ ಆರೋಪ: ಹೆಬ್ಬಾರ್, ಸೋಮಶೇಖರ್, ಬಿ.ಪಿ ಹರೀಶ್ ಸೇರಿ ಐವರಿಗೆ ಕಾರಣ ಕೇಳಿ ಬಿಜೆಪಿ ನೋಟಿಸ್

Most read

ಬೆಂಗಳೂರು: ಪಕ್ಷದ ಆಂತರಿಕ ವಿಷಯಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಪ್ರಸ್ತಾಪಿಸುವ ಮೂಲಕ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದೀರಿ ಎಂದು ಆರೋಪಿಸಿರುವ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು, ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಮತ್ತು ಬಿ.ಪಿ ಹರೀಶ್ ಅವರಿಗೆ ನೋಟಿಸ್ ನೀಡಿದೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತರಾದ ಮಾಜಿ ಸಚಿವರಾದ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಎಂ.ಪಿ.ರೇಣುಕಾಚಾರ್ಯ ಅವರಿಗೂ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ನೋಟಿಸ್ ಜಾರಿ ಮಾಡಿದ್ದು, ಪಕ್ಷದ ನಿಯಮ ಉಲ್ಲಂಘಿಸಿರುವ ನಿಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂಬುದನ್ನು ನೋಟಿಸ್ ತಲುಪಿದ 72 ಗಂಟೆಯೊಳಗೆ ಉತ್ತರಿಸಬೇಕು. ಕಾಲಮಿತಿಯೊಳಗೆ ಉತ್ತರಿಸದಿದ್ದಲ್ಲಿ, ಹೇಳಲು ಏನೂ ಇಲ್ಲವೆಂದು ಭಾವಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಿದ್ದಾರೆ.

ಶಾಸಕ ಬಿ.ಪಿ ಹರೀಶ್ ಅವರು ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿದ್ದರೆ, ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದಾರೆ. ಯಡಿಯೂರಪ್ಪ ಅವರ ವಿರೋಧಿ ಬಸನಗೌಡ ಪಾಟೀಲ ಯತ್ನಾಳ ಅವರ ವಿರುದ್ಧ ಸೆಡ್ಡು ಹೊಡೆದಿರುವ ರೇಣುಕಾಚಾರ್ಯ ಹಾಗೂ ಸುಬ್ರಹ್ಮಣ್ಯ ನಾಯ್ಡು ಅವರು ನಿರಂತರವಾಗಿ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ವೀರಶೈವ ಲಿಂಗಾಯತ ಸಮಾವೇಶ ಮಾಡುವ ಮೂಲಕ ಯತ್ನಾಳ್ ಗೆ ಟಾಂಗ್ ನೀಡಲು ನಿರ್ಧರಿಸಿದ್ದ ಬೆನ್ನಲ್ಲೇ ನೋಟಿಸ್ ನೀಡಲಾಗಿದೆ.

ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್, ಇಬ್ಬರು ಶಾಸಕರ ವಿರುದ್ಧ ಶಿಸ್ತುಕ್ರಮ ಆಗಲಿದೆ. ಪಕ್ಷ ದ್ರೋಹ ಕೆಲಸ ಮಾಡಿದ ಈ ಇಬ್ಬರು ಶಾಸಕರ ವಿರುದ್ಧ ಈ ಮಾಸಾಂತ್ಯದಲ್ಲಿ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದ್ದರು. ಎಲ್ಲಾ ಗೊಂದಲಗಳಿಗೂ ತೆರೆ ಎಳೆಯಲಾಗುತ್ತದೆ ಎಂದೂ ಹೇಳಿದ್ದರು. ಈ ಮೂಲಕ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡುವ ಮೂಲಕ ಬಣಬಡಿದಾಟಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಯತ್ನಾಳ್ ಗೆ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿದೆ. ಅವಕಾಶ ಸಿಕ್ಕಾಗಲೆಲ್ಲಾ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ ಪಕ್ಷದ ನಾಯಕರನ್ನು ಟೀಕಿಸುತ್ತಲೇ ಬಂದಿದ್ದರು.

More articles

Latest article