ಬಿಜೆಪಿ ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ: ಸಿದ್ದರಾಮಯ್ಯ

Most read

ಯಾದಗಿರಿ: ನರೇಂದ್ರ ಮೋದಿಯವರ ಬಳಿ ಹಣ ಜಾಸ್ತಿ ಇದ್ದರೆ, ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಏಕೆ ತುಂಬಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಅವರು ಇಂದು ಯಾದಗಿರಿಯಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ ಜಿ ಕುಮಾರ ನಾಯ್ಕ ರವರ ಪರವಾಗಿ ಮತದಾರರಲ್ಲಿ ಮತ ಯಾಚನೆ ಮಾಡಿ ನಂತರ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ನರೇಂದ್ರ ಮೋದಿಯವರ ಬಳಿ ಹಣ ಜಾಸ್ತಿ ಇದ್ದರೆ, 30 ಲಕ್ಷ ಹುದ್ದೆಗಳನ್ನು ಏಕೆ ತುಂಬಿಲ್ಲ, ಅದನ್ನು ತುಂಬಿದರೆ ಸುಮಾರು 50% ಹಿಂದುಳಿದವರು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದವರಿಗೆ ಮೀಸಲಾತಿ ದೊರಕುತ್ತದೆ.ಇನ್ನುಳಿದ 50% ಇತರರಿಗೆ ದೊರಕುತ್ತದೆ . ಅದನ್ನು ಏಕೆ ತುಂಬಿಲ್ಲ? ಸಂಬಳ ಕೊಡಲು ದುಡ್ಡಿಲ್ಲದೆ ಹೋಗಿದ್ದರೆ 8 ತಿಂಗಳಲ್ಲಿ 5 ಗ್ಯಾರಂಟಿ ಗಳನ್ನು ತುಂಬಲು ಸಾಧ್ಯವಾಗುತ್ತಿತ್ತೇ? ವೇತನ ದೊರಕಿಲ್ಲ ಎಂದು ಸರ್ಕಾರಿ ನೌಕರರು ಹೇಳಿದ್ದಾರೆಯೇ ? ಎಂದು ಪ್ರಶ್ನಿಸಿದರು. ದೇಶದ ಪ್ರಧಾನಿಯಾಗಿ ಮಹಾನ್ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಇದನ್ನು ಜನ ನಂಬಬೇಕೆ ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿಯವರಿಗೆ ದೇಶದಲ್ಲಿ ನಡೆದಿರುವ 2 ಹಂತದ ಚುನಾವಣೆಗಳಲ್ಲಿ ಕಾಂಗ್ರೆಸಿಗೆ ಹಾಗೂ ಎನ್.ಡಿ. ಎ ಗೆ ಎಷ್ಟು ಬರಬಹುದೆಂದು ಈಗಾಗಲೇ ಗೊತ್ತಾಗಿದೆ. ಎರಡು ಹಂತದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ. ಎ ಗೆ ಕಡಿಮೆ ಸ್ಥಾನಗಳು ಬರಲಿದೆ ಎಂದು ಅವರಿಗೆ ಗೊತ್ತಾಗಿದ್ದು, ನರೇಂದ್ರ ಮೋದಿಯವರಿಗೆ ಗೊತ್ತಾಗಿ ಹತಾಶರಾಗಿದ್ದಾರೆ. ಅದಕ್ಕೆ ಕರ್ನಾಟಕಕ್ಕೆ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಕೇವಲ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಕರ್ನಾಟಕದ ಖಜಾನೆ ಖಾಲಿಯಾಗಿದ್ದು ಸರ್ಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ ಎಂದು ಸುಳ್ಳು ಹೇಳಿದ್ದಾರೆ ಎಂದರು.

ಗ್ಯಾರಂಟಿ ಯೋಜನೆ ಜಾರಿಯಾದ ನಂತರ ಖಜಾನೆ ಖಾಲಿಯಾಗಿಲ್ಲ. ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿಲ್ಲ ಎಂದ ಅವರು ಪ್ರಧಾನಿಗಳು ಗ್ಯಾರಂಟಿ ಬಗ್ಗೆ ಅಪಹಾಸ್ಯ ಮಾಡಿ ಲಘುವಾಗಿ ಮಾತನಾಡಿದರು. ಮೊದಲೇ ಲೆಕ್ಕ ಹಾಕಿಯೇ ನಾವು ಘೋಷಣೆಗಳನ್ನು ಮಾಡಿದ್ದು ಎಂದರು.

ವರ್ಷಕ್ಕೆ ಗ್ಯಾರಂಟಿ ಯೋಜನೆಗಳಿಗೆ 56000 ಕೋಟಿ ರೂಪಾಯಿ ವ್ಯಯವಾಗುತ್ತಿದ್ದು. ಈ ಬಾರಿ ಬಜೆಟ್ ನಲ್ಲಿ 52009 ರೂಪಾಯಿಗಳನ್ನು ಮೀಸಲಿರಿಸಲಾಗಿದೆ. ಪ್ರಧಾನಿಗಳು ಭರವಸೆ ನೀಡಿದ್ದರಲ್ಲಿ ಎಷ್ಟು ಭರವಸೆ ಈಡೇರಿಸಿದ್ದಾರೆ. ಹತ್ತು ವರ್ಷಗಳಲ್ಲಿ ಏನು ಸಾಧನೆ ಮಾಡಿದ್ದಾರೆ ಎಂದು ಜನರ ಮುಂದಿಡಲಿ. ಜನ ಬಿಜೆಪಿಗೆ ತಕ್ಕ ಪಾಠವನ್ನು ಈ ಚುನಾವಣೆಯಲ್ಲಿ ಕಲಿಸಲಿದ್ದಾರೆ ಎಂದರು.

ನರೇಂದ್ರ ಮೋದಿಯವರ ರಾಜಕೀಯ ಅಂತ್ಯ ಕಾಲವಿದು. 2014 ರಲ್ಲಿ ಅನೇಕ ಭರವಸೆಗಳನ್ನು ನೀಡಿದರು. 15 ಲಕ್ಷ ರೋ ಕಪ್ಪುಹಣ ತಂದು ಪ್ರತಿಯೊಬ್ಬರಿಗೂ ನೀಡುವುದಾಗಿ ಹೇಳಿದರು, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ, ಅಗತ್ಯ ವಸ್ತುಗಳ ಬೆಲೆ ಇಳಿಸಿ, ರೂಪಾಯಿ ಬೆಲೆ ಹೆಚ್ಚು ಮಾಡುವುದಾಗಿ ಹೇಳಿದರು. ಅಚ್ಚೇ ದಿನ್ ಬರಲಿಲ್ಲ ಯಾವ ಭರವಸೆಯನ್ನೂ ಈಡೇರಿಸಿಲ್ಲ ಎಂದರು.

ಹತ್ತು ವರ್ಷಗಳಲ್ಲಿ ಜನರ ಭಾವನೆಗಳನ್ನು ಕೆರಳಿಸಿ ಜಾತಿ , ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡಿದರು. ಜನರನ್ನು ಹಿಂದೂ, ಮುಸಲ್ಮಾನರು, ಕ್ರಿಶ್ಚಿಯನ್ನರ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಮಾಡಿದ್ದಾರೆ. ಸಮಾಜ ದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಎಲ್ಲರೂ ಐಕ್ಯತೆಯಿಂದ ಒಟ್ಟಾಗಿ ಇರಬೇಕು, ದೇಶ ಒಗ್ಗಟ್ಟಿನಿಂದ ಇರಬೇಕು, ಸಾರ್ವಭೌಮತ್ವವನ್ನು ಕಾಪಾಡಬೇಕು.

ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದ, ಮಣಿಪುರದಿಂದ ಮುಂಬೈವರೆಗೆ ಪಾದಯಾತ್ರೆ ಮಾಡಿ, ಸಮಾಜ ಬೆಸೆಯುವ ಕೆಲಸ ಮಾಡಿದರು. ಭಾರತ ಜೋಡೋ ಹೆಸರಿನಲ್ಲಿ ದೇಶದ ಜನರನ್ನು ಪ್ರೀತಿ ವಿಶ್ವಾಸದಿಂದ ಒಗ್ಗೂಡಿಸುವ ಪ್ರಯತ್ನ ಮಾಡಿದರು. ಆದರೆ ಬಿಜೆಪಿ ದೇಶವನ್ನು ಒಡೆಯುತ್ತಿದೆ ಎಂದರು.

ಮೀಸಲಾತಿ ಪರವಾಗಿರುವ ಏಕೈಕ ಪಕ್ಷವೆಂದರೆ ಕಾಂಗ್ರೆಸ್ ಪಕ್ಷ . ಬಿಜೆಪಿಯವರು ಎಲ್ಲ ಕಾಲದಲ್ಲಿಯೂ ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿಯ ವಿರೋಧವಾಗಿ ಕೆಲಸ ಮಾಡಿದ್ದಾರೆ. ಗ್ರಾಮಪಂಚಾಯತಿ, ನಗರಸಭೆ ಸೇರಿದಂತೆ ವಿವಿಧ ಸ್ತರಗಳಲ್ಲಿ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡುವುದನ್ನು ಬಿಜೆಪಿಯವರು ವಿರೋಧಿಸಿದ್ದರು. ಬಿಜೆಪಿಯ ರಾಮ ಜೋಯಿಸ್ ಅವರು ಈ ಮೀಸಲಾತಿ ನೀಡಿಕೆಯನ್ನು ಸಂವಿಧಾನ ಬಾಹಿರ ಎಂದು ವಾದಿಸಿದ್ದರು. ಮುಸಲ್ಮಾನರಿಗೆ ನೀಡಲಾದ ಮೀಸಲಾತಿಯನ್ನು ಕಳೆದ 30 ವರ್ಷಗಳಿಂದ ನೀಡಲಾಗುತ್ತಿದೆ. ದಲಿತರಿಗೆ, ಹಿಂದುಳಿದವರಿಗೆ ನೀಡಲಾದ ಮೀಸಲಾತಿಯನ್ನು ರದ್ದುಪಡಿಸಿ ಮುಸಲ್ಮಾನರಿಗೆ ಕಾಂಗ್ರೆಸ್ ನೀಡಲಿದೆ ಎಂದು ಮೋದಿಯವರು ಸುಳ್ಳು ಹೇಳುತ್ತಿದ್ದಾರೆ. ಎಂದು ಪ್ರಶ್ನಿಸಿದರು. 25 ಬಿಜೆಪಿ ಸಂಸದರು ರಾಜ್ಯಕ್ಕಾದ ಅನ್ಯಾಯದ ವಿರುದ್ದ ಯಾಕೆ ಧ್ವನಿ ಎತ್ತಲಿಲ್ಲ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಶಾಸಕ ಚನ್ನಾರೆಡ್ಡಿ, ಸ್ಥಳೀಯ ಕಾಂಗ್ರೆಸ್ ಮುಖಂಡರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಉಪಸ್ಥಿತರಿದ್ದರು.

More articles

Latest article