ಬೆಂಗಳೂರು: ಮಾನ, ಮರ್ಯಾದೆ ಹಾಗೂ ಲಜ್ಜೆ, ಈ ಮೂರೂ ಇರುವ ಯಾವ ಸರ್ಕಾರವೂ ರಾಜ್ಯ ಸರ್ಕಾರವೊಂದಕ್ಕೆ ನ್ಯಾಯಾಲಯದ ಮೆಟ್ಟಿಲು ಹತ್ತುವ ಅವಕಾಶ ಮಾಡಿಕೊಡುತ್ತಿರಲಿಲ್ಲ, ಸರ್ವೋಚ್ಚ ನ್ಯಾಯಾಲಯದಿಂದ ತಪರಾಕಿ ಹೊಡೆಸಿಕೊಂಡು ಬಿಡಿಗಾಸು ಪರಿಹಾರ ಘೋಷಿಸಿದಕ್ಕೂ ಕ್ರೆಡಿಟ್ ಪಡೆಯಲು ಸುಳ್ಳಿನ ಸರ್ಕಸ್ ಮಾಡುತ್ತಿರುವ ಬಿಜೆಪಿ ನಾಯಕರು ನಿರ್ಲಜ್ಜತನದ ಪರಮಾವಧಿಗೆ ತಲುಪಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, NDRF ನಿಯಮದ ಪ್ರಕಾರ ಆಕ್ಟೊಬರ್ 31ನೇ ತಾರೀಕು ಕಳೆಯುವವರೆಗೂ ಬರ ಘೋಷಣೆ ಮಾಡುವ ಹಾಗಿಲ್ಲ, ಆದರೆ ನಮ್ಮ ಸರ್ಕಾರ ಸೆಪ್ಟೆಂಬರ್ 13ರಂದೇ ಬರ ಘೋಷಣೆ ಮಾಡಿದೆ, ತತಕ್ಷಣದ ನೆರವಿಗಾಗಿ ಬರ ಸಂತ್ರಸ್ತ ರೈತರಿಗೆ ₹2000 ನೀಡಿದೆ. ನಮ್ಮ ಸರ್ಕಾರ ಬರ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ ನಂತರ 6 ತಿಂಗಳು ಸಮಯಾವಕಾಶವಿತ್ತು.
ಕೇಂದ್ರ ತಂಡ ಬರ ಅಧ್ಯಯನ ನಡೆಸಿ 5 ತಿಂಗಳು ಕಳೆದಿದೆ, ನಮ್ಮದು ಸದೃಢ, ಸಂಪನ್ನ ಸರ್ಕಾರ ಎಂದು ಹೇಳಿಕೊಳ್ಳುವ ಮೋದಿಯವರಿಗೆ ಇಷ್ಟು ಸಮಯ ಸಾಲುವುದಿಲ್ಲವೇ? ಮಾನ, ಮರ್ಯಾದೆ ಹಾಗೂ ಲಜ್ಜೆ, ಈ ಮೂರೂ ಇರುವ ಯಾವ ಸರ್ಕಾರವೂ ರಾಜ್ಯ ಸರ್ಕಾರವೊಂದಕ್ಕೆ ನ್ಯಾಯಾಲಯದ ಮೆಟ್ಟಿಲು ಹತ್ತುವ ಅವಕಾಶ ಮಾಡಿಕೊಡುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
NDRF ನಿಯಮದ ಪ್ರಕಾರವೇ 18,174 ಕೋಟಿ ಪರಿಹಾರಕ್ಕೆ ಬೇಡಿಕೆ ಇಡಲಾಗಿತ್ತು, ಆದರೆ ಕೊಟ್ಟಿದ್ದು ಕೇವಲ 3,454 ಕೋಟಿ. ಕಾಲು ಬಾಗಕ್ಕಿಂತ ಕಡಿಮೆ ಮೊತ್ತವಿದು, ಇಷ್ಟು ಕಡಿಮೆ ಮೊತ್ತ ನೀಡುತ್ತಿರುವ ಕೇಂದ್ರ ಸರ್ಕಾರದ ಖಜಾನೆ ದಿವಾಳಿಯಾಗಿದೆಯೇ? ಪೂರ್ಣ ಮೊತ್ತ ನೀಡುವಂತಾಗಲು ಕರ್ನಾಟಕಕ್ಕೆ “ಅದಾನಿ” ಎಂದು ಮರುನಾಮಕರಣ ಮಾಡಬೇಕೆ!? ಸುಪ್ರೀಂ ಕೋರ್ಟಿನ ತೀರ್ಪಿಗೂ ಮುನ್ನ “ಕೊಡಬೇಕಾದ ಬರ ಪರಿಹಾರ ಕೊಟ್ಟಾಗಿದೆ” ಎಂದಿದ್ದ
ಅವರ ಮಾತು ಸುಳ್ಳೇ?
ಬಿಜೆಪಿಗರ ನಾಲಿಗೆ ಯಾವಾಗ ಹೇಗೆ ಬೇಕಾದರೂ 360 ಡಿಗ್ರಿಯಲ್ಲಿ ಹೊರಳಾಡುತ್ತದೆಯೇ? ಬಿಜೆಪಿಗರು ಸುಳ್ಳು ಕ್ರೆಡಿಟ್ ಪಡೆಯುವ ಬದಲು ಮೋದಿಯವರಲ್ಲಿ ಪೂರ್ಣ ಬರ ಪರಿಹಾರಕ್ಕಾಗಿ ಆಗ್ರಹಸಲಿ, ಮೋದಿ ಎದುರು ತಮ್ಮ ದಮ್ಮು ತಾಕತ್ತು ಪ್ರದರ್ಶಿಸಿ ನಂತರ ನೈಜ ಕ್ರೆಡಿಟ್ ಪಡೆಯಲಿ ಎಂದು ಅವರು ಆಗ್ರಹಿಸಿದ್ದಾರೆ.