ಸಕಲೇಶಪುರ: ತಮ್ಮ ವಿರುದ್ಧ ಪಿತೂರಿ ನಡೆಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ದೇಶದಲ್ಲಿ ಭ್ರಷ್ಟಾಚಾರದ ಪಿತಾಮಹ ಯಾರಾದರೂ ಇದ್ದರೆ ಅದು ಬಿಜೆಪಿಯವರು ಎಂದು ಟೀಕಿಸಿದರು.
ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ದೊಡ್ಡತಪ್ಲು ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರದ್ದು 40% ಭ್ರಷ್ಟಾಚಾರ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದರು. ಕುಮಾರಸ್ವಾಮಿ, ಅಶೋಕ್, ವಿಜಯೇಂದ್ರ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದರಲ್ಲದೆ ಅವರ ಕಾಲದ ಎಲ್ಲಾ ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎಂದು ನುಡಿದರು.
ಇನ್ನು ಹತ್ತು ತಿಂಗಳು ಮಾತ್ರ ಸರ್ಕಾರ ಇರುತ್ತೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಕುಮಾರಸ್ವಾಮಿ ಎಷ್ಟು ದಿನ ಮಂತ್ರಿಯಾಗಿರುತ್ತಾರೆ ಗೊತ್ತಿದೆಯೇ ಎಂದು ಪತ್ರಕರ್ತರಿಗೆ ಮರುಪ್ರಶ್ನಿಸಿದರು.
ನಮಗೆ 136 ಶಾಸಕ ಸ್ಥಾನ ಕೊಟ್ಟು ಜನರು ಆಶೀರ್ವಾದ ಮಾಡಿದ್ದಾರೆ. ಜೆಡಿಎಸ್ 19 ಸೀಟ್ ಮಾತ್ರ ಗೆದ್ದಿದೆ. ಇದು ಕುಮಾರಸ್ವಾಮಿ ಅವರಿಗೆ ಇದು ನೆನಪು ಇದೆಯೇ ಎಂದು ಅವರು ಪ್ರಶ್ನಿಸಿದರು.
ಹಾಸನದಲ್ಲಿ ಇವರ ಕುಟುಂಬದವರು ಆಳ್ವಿಕೆ ಮಾಡುತ್ತಿದ್ದರು. ಈಗ ಹಾಸನದಲ್ಲಿ ಲೋಕಸಭಾ ಸ್ಥಾನ ಗೆದ್ದಿರುವವರು ಯಾರು? ಅದನ್ನೊಮ್ಮೆ ನೆನಪಿಸಿಕೊಳ್ಳಲಿ ಎಂದು ಕಾಲೆಳೆದರು.
ಜೆಡಿಎಸ್- ಬಿಜೆಪಿ ಪಿತೂರಿ ಹಿನ್ನೆಲೆಯಲ್ಲಿ ನಾವು ಸಮಾವೇಶಗಳನ್ನು ಆರಂಭಿಸಿದ್ದೇವೆ. ರಾಮನಗರ, ಚನ್ನಪಟ್ಟಣದಲ್ಲಿ ಸಭೆ ನಡೆದಿದೆ. ಆ.9 ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ. ಅವರ ಕಾಲದ ಎಲ್ಲಾ ಹಗರಣಗಳನ್ನು ಬಿಚ್ಚಿಡುತ್ತೇವೆ ಎಂದು ಸಿದ್ಧರಾಮಯ್ಯ ಹೇಳಿದರು.
ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ಆಗಿದೆ.
ಅವರು ರಾಜಕೀಯದಲ್ಲಿ ಇರಲು ನಾಲಾಯಕ್ ಎಂದು ಟೀಕಿಸಿದ ಅವರು, ಬಿಜೆಪಿ ಪಾದಯಾತ್ರೆಗೆ ರಾಜಕೀಯವಾಗೇ ಉತ್ತರ ನೀಡುವುದಾಗಿ ಹೇಳಿದರು.