ಪುಣೆ (ಮಹಾರಾಷ್ಟ್ರ): ನನ್ನ ವಿರುದ್ಧ ನನ್ನ ಅತ್ತಿಗೆ ಸುನೇತ್ರ ಪವಾರ್ ಅವರನ್ನು ಸ್ಪರ್ಧಿಸುವಂತೆ ಮಾಡಿ ಭಾರತೀಯ ಜನತಾ ಪಕ್ಷ ಹೀನ ರಾಜಕೀಯ ಮಾಡುತ್ತಿದೆ ಎಂದು ಎನ್ ಸಿಪಿ ನಾಯಕಿ ಸುಪ್ರಿಯಾ ಸುಳೆ ನೊಂದು ನುಡಿದಿದ್ದಾರೆ.
ANI ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸುಪ್ರಿಯಾ, ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ನನ್ನ ವಿರುದ್ಧ ನನ್ನ ಅತ್ತಿಗೆ ಸುನೇತ್ರ ಪವಾರ್ ಅವರನ್ನುಅಜಿತ್ ಪವಾರ್ ಪಕ್ಷದ ಮೂಲಕ ಬಿಜೆಪಿ ಕಣಕ್ಕೆ ಇಳಿಸುತ್ತಿದೆ. ಶರದ್ ಪವಾರ್ ಅವರು ಕಟ್ಟಿದ ಎನ್ ಸಿಪಿಯನ್ನು ಮುಗಿಸುವುದೇ ಬಿಜೆಪಿಯ ಗುರಿ ಎಂದು ಹೇಳಿದ್ದಾರೆ.
ನನ್ನ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ, ನನ್ನ ಹೋರಾಟ ಇರುವುದು ಅವರ ಮನಸ್ಥಿತಿ ಮತ್ತು ನೀತಿ ನಿಲುವುಗಳ ವಿರುದ್ಧ. ಹದಿನೆಂಟು ವರ್ಷಗಳ ನನ್ನ ರಾಜಕೀಯ ಜೀವನವನ್ನು ನೀವು ನೋಡಿದ್ದೀರಿ. ಯಾವುದೇ ವ್ಯಕ್ತಿ ವಿರುದ್ಧ ನಾನು ವೈಯಕ್ತಿಕ ತೇಜೋವಧೆ ಮಾಡುವ ಕೆಲಸವನ್ನು ನಾನು ಮಾಡಿದವಳಲ್ಲ ಎಂದು ಅವರು ಹೇಳಿದ್ದಾರೆ.
ನಮ್ಮ ಸಂಸ್ಕೃತಿಯಲ್ಲಿ ಅತ್ತಿಗೆ ಯಾವಾಗಲೂ ತಾಯಿಯ ಸಮಾನ. ನನ್ನ ಅಣ್ಣನ ಹೆಂಡತಿಯನ್ನೇ ನನ್ನ ವಿರುದ್ಧ ನಿಲ್ಲಿಸಿದ್ದಾರೆ. ಇದು ಬಿಜೆಪಿಯ ಕೊಳಕು ರಾಜಕಾರಣ. ನಮ್ಮ ಕುಟುಂಬದಲ್ಲಿ ಒಡಕು ಹುಟ್ಟಿಸುವುದು ಅವರ ಉದ್ದೇಶ. ಸುನೇತ್ರ ಪವಾರ್ ನನಗೆ ತಾಯಿ ಇದ್ದಂತೆ. ಅವರನ್ನು ನನ್ನ ವಿರುದ್ಧ ನಿಲ್ಲಿಸುವ ಮೂಲಕ ಶರದ್ ಪವಾರ್ ಅವರ ಹೆಸರಿಗೆ ಧಕ್ಕೆ ತರುವುದು ಬಿಜೆಪಿಯ ಕುತಂತ್ರ ಎಂದು ಸುಪ್ರಿಯಾ ಹೇಳಿದ್ದಾರೆ.
ಈ ನಡುವೆ ಬಾರಾಮತಿಯಿಂದ ಸುಪ್ರಿಯಾ ವಿರುದ್ಧ ಸ್ಪರ್ಧಿಸಲಿರುವ ಸುನೇತ್ರ ಪವಾರ್, ತಮ್ಮ ಹೆಸರು ಘೋಷಣೆಯಾಗುತ್ತಿದ್ದಂತೆ ಇಂದು ನನ್ನ ಜೀವನದ ಬಹುದೊಡ್ಡ ದಿನ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರುಗಳಿಗೆ ಧನ್ಯವಾದ ಸಮರ್ಪಿಸುವುದಾಗಿ ಹೇಳಿದ್ದಾರೆ.
ಪುಣೆ ಜಿಲ್ಲೆಯ ಬಾರಾಮತಿ ಲೋಕಸಭಾ ಕ್ಷೇತ್ರ ಈ ಬಾರಿ ಅತ್ತಿಗೆ ನಾದಿನಿಯರ ಸ್ಪರ್ಧೆಯಿಂದ ಕುತೂಹಲ ಕೆರಳಿಸಿದೆ. ಎನ್ ಸಿಪಿ ಪಕ್ಷದ ಸುಪ್ರಿಯಾ ಸುಳೆಯವರನ್ನು ಕಾಂಗ್ರೆಸ್ ಮತ್ತು ಶಿವಸೇನೆ (ಉದ್ಧವ್ ಠಾಕ್ರೆ) ಬೆಂಬಲಿಸುತ್ತಿವೆ. ಮತ್ತೊಂದೆಡೆ ಎನ್ ಸಿಪಿ ಅಜಿತ್ ಪವಾರ್ ಬಣದ ಅಭ್ಯರ್ಥಿಯಾಗಿ ಸುನೇತ್ರ ಪವಾರ್ ಸ್ಪರ್ಧಿಸುತ್ತಿದ್ದಾರೆ. ಸುನೇತ್ರ ಅವರನ್ನು ಬಿಜೆಪಿ ಮತ್ತು ಶಿವಸೇನೆ (ಶಿಂಧೆ) ಬೆಂಬಲಿಸುತ್ತಿವೆ. ಹೀಗಾಗಿ ಬಾರಾಮತಿಯಲ್ಲಿ ಈ ಬಾರಿ ಪವಾರ್ V/s ಪವಾರ್ ಸಂಘರ್ಷ ತಾರಕಕ್ಕೆ ಏರಿದೆ.
1960ರಿಂದಲೂ ಬಾರಾಮತಿ ಕ್ಷೇತ್ರ ಶರದ್ ಪವಾರ್ ಅವರ ಭದ್ರಕೋಟೆಯಾಗಿದೆ. 1991ರಿಂದ ಅಜಿತ್ ಪವಾರ್ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಎನ್ ಸಿಪಿಯಿಂದ ಹೊರನಡೆದು ತಮ್ಮದೇ ಬಣ ಕಟ್ಟಿಕೊಂಡಿರುವ ಅಜಿತ್ ಪವಾರ್ ಈ ಬಾರಿ ತಮ್ಮ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದಾರೆ.