ಬೆಂಗಳೂರು: ಬಡವರ ಹೊಟ್ಟೆ ತುಂಬಿಸುವ ಮನರೇಗಾ ಯೋಜನೆಯನ್ನು ರದ್ದುಗೊಳಿಸಿ ಕಾರ್ಪೊರೇಟ್ ಸಂಸ್ಥೆಗಳಿಗೆ ಸಹಾಯ ಮಾಡಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಆದರೆ ವಿಬಿಜಿ ರಾಮ್ ಜಿ ಯೋಜನೆಯನ್ನು ರದ್ದುಗೊಳಿಸುವವರೆಗೆ ಕಾಂಗ್ರೆಸ್ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಸೇರಿದಂತೆ ನಾನು ಯಾರ ಹೇಳಿಕೆಗೂ ಪ್ರತಿಕ್ರಿಯೆ ನೀಡುವುದಿಲ್ಲ. ಬಡವರಿಗೆ ಸಹಾಯ ಮಾಡುವ ನರೇಗಾ ಯೋಜನೆಗೆ ಕೊಡಲಿ ಪೆಟ್ಟು ಹಾಕುತ್ತಿದ್ದಾರೆ. ಪಂಚಾಯಿತಿಯಲ್ಲಿ ನಡೆಯುವ ಕೆಲಸಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ರಾಜ್ಯದ ಮೇಲೆ 30% ಹೆಚ್ಚಿನ ಭಾರವನ್ನು ಹೊರಿಸುತ್ತಿದ್ದಾರೆ ಎಂದು ಟೀಕಿಸಿದರು.
ಡಾ. ಮನಮೋಹನ್ ಸಿಂಗ್ ಅವರು ಬಡವರ ಹೊಟ್ಟೆ ತುಂಬಿಸುವುದಕ್ಕೆ ಈ ಯೋಜನೆಯನ್ನು ಜಾರಿಗೆ ತಂದರು. ಆದರೆ ಮೋದಿ ಅವರು ಬಡವರಿಗೆ ಸಿಗುವ ಸವಲತ್ತುಗಳನ್ನು ನಿಲ್ಲಿಸಲು ಹೊರಟಿದ್ದಾರೆ. ನರೇಗಾ ಯೋಜನೆ ಸರಿ ಇಲ್ಲ ಎಂದು ಹೇಳಿದವರ ಬಳಿಯೇ ಆಡಿಟ್ ಸಂಸ್ಥೆಗಳಿವೆ. ಆಡಿಟ್ ಮಾಡಿಸಿ ಸತ್ಯಾಂಶ ತಿಳಿದುಕೊಳ್ಳಲಿ. ನರೇಗಾ ಯೋಜನೆಯಿಂದ ಆಸ್ತಿ ಹೆಚ್ಚಳವಾಗಿದೆ ಎಂದು ಸಿಎಜಿ ವರದಿ ಹೇಳುತ್ತದೆ ಎಂದು ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.

