ಬೆಂಗಳೂರು: ಮಾಜಿ ಐಎಎಸ್ ಅಧಿಕಾರಿ, ಇತ್ತೀಚಿಗಷ್ಟೇ ನಿಧನರಾದ ಕೆ.ಶಿವರಾಮ್ ಅವರ ಪತ್ನಿ ವಾಣಿ ಶಿವರಾಮ್ ಇಂದು ವಿಧ್ಯುಕ್ತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ವಾಣಿ ಶಿವರಾಮ್ ಕಾಂಗ್ರೆಸ್ ಸೇರ್ಪಡೆಗೊಂಡರು. ಇದೇ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ಪಕ್ಷಗಳ ಅನೇಕ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು.
ಪಕ್ಷ ಸೇರ್ಪಡೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಾಣಿ ಶಿವರಾಮ್, ನನ್ನ ಪತಿ ಮೊದಲ ಬಾರಿಗೆ ಕನ್ನಡದಲ್ಲಿ ಐಎಎಸ್ ಪಾಸ್ ಮಾಡಿದ್ದರು. ಅಧಿಕಾರಿಯಾಗಿ ಜನಪರ ಕೆಲಸ ಮಾಡಿದ್ದರು. ಬಡತನ, ಶೋಷಣೆಗೆ ಒಳಗಾಗಬಾರದು ಎಂದು ಐಎಎಸ್ ಮಾಡಿದ್ದರು. ದೊಡ್ದ ಹಂತಕ್ಕೆ ಹೋಗಬೇಕು ಎಂದು ರಾಜಕೀಯಕ್ಕೆ ಬಂದರು. ಅವರ ಕನಸು, ಗುರಿ ಹಾಗೇ ಉಳಿದುಕೊಂಡವು. ಅದನ್ನು ನಾನು ಪೂರೈಸಲು ಪ್ರಯತ್ನ ಪಡುತ್ತೇನೆ ಎಂದರು.
ಶಿವರಾಮ್ ಅವರನ್ನು ಬಿಜೆಪಿಯವರು ದುಡಿಸಿಕೊಂಡರು, ಬಳಸಿಕೊಂಡರು. ದಲಿತ ಎಂದು ಯಾವ ಸ್ಥಾನಮಾನ ಕೊಡದೆ ಅವಮಾನ ಮಾಡಿದರು. ಮುಂದಿನ ದಿನಗಳಲ್ಲಿ ಯಾರಿಗೂ ಅನ್ಯಾಯ ಆಗಬಾರದು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮನೆಗೆ ಕರೆಸಿ ಅವರ ಧರ್ಮ ಪತ್ನಿ ಮೂಲಕ ಧೈರ್ಯ ತುಂಬಿಸಿದರು. ಬಿಜೆಪಿ ಮಾಡಿದ ಅನ್ಯಾಯಕ್ಕೆ ನ್ಯಾಯ ಜನ ಕೊಡಬೇಕು. ನಾನು ಮುಂದೆ ಕಾಂಗ್ರೆಸ್ ನಲ್ಲಿ ಇರುತ್ತೇನೆ. ನೀವು ಶಿವರಾಮ್ ಸಾವಿಗೆ ನ್ಯಾಯ ಕೊಡಬೇಕು ಎಂದು ವಿನಂತಿಸಿದರು.