ಬೆಂಗಳೂರು: ಬಿಜೆಪಿ ಶಾಸಕರಾದ ಎಸ್ ಟಿ .ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಇಬ್ಬರನ್ನೂ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.
ಪಕ್ಷದ ಶಿಸ್ತು ಉಲ್ಲಂಘಿಸಿ ಕಾಂಗ್ರೆಸ್ ಸಭೆಗಳಲ್ಲಿ ಇಬ್ಬರೂ ಶಾಸಕರು ಭಾಗಿಯಾಗಿದ್ದರು. ಶಿಸ್ತು ಸಮಿತಿ ಕಳೆದ ತಿಂಗಳು ನೋಟಿಸ್ ನೀಡಿದ್ದರೂ ಉತ್ತರ ನೀಡಿರಲಿಲ್ಲ. ಹಾಗಾಗಿ ಇಬ್ಬರನ್ನೂ 6 ವರ್ಷ ಉಚ್ಛಾಟನೆಗೊಳಿಸಿ ಹೈಕಮಾಂಡ್ ಆದೇಶ ಹೊರಡಿಸಿದೆ.
ಸೋಮಶೇಖರ್ ಬೆಂಗಳೂರಿನ ಯಶವಂತಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೆ ಶಿವರಾಂ ಹೆಬ್ಬಾರ್ ಯಲ್ಲಾಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಇಬ್ಬರೂ ಶಾಸಕರು ಬಿಜೆಪಿ ಪಕ್ಷದ ವಿರುದ್ಧವೇ ಬಹಿರಂಗವಾಗಿ ಮಾತನಾಡುತ್ತಿದ್ದರು ಮತ್ತು ಪಕ್ಷದ ಮುಖಂಡರನ್ನು ಟೀಕಿಸುತಿದ್ದರು. ಈ ಹಿಂದೆ ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಶಾಸಕರಾದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಕೇಂದ್ರ ಸಮಿತಿಗೆ ರಾಜ್ಯ ಬಿಜೆಪಿ ಶಿಸ್ತು ಸಮಿತಿ ವರದಿ ನೀಡಿತ್ತು.