ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖಂಡ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಹತ್ಯೆಗೆ ಪಿತೂರಿ ನಡೆಯುತ್ತಿದೆ ಎಂದು ಎಎಪಿ ಆರೋಪಿಸಿದೆ. ಒಂದುವೇಳೆ ಕೇಜ್ರಿವಾಲ್ ಅವರಿಗೆ ಏನಾದರೂ
ಸಂಭವಿಸಿದರೆ ಅದಕ್ಕೆ ಬಿಜೆಪಿಯೇ ಹೊಣೆ ಎಂದೂ ಎಚ್ಚರಿಕೆ ನೀಡಿದೆ.
ಪಶ್ಚಿಮ ದೆಹಲಿಯ ವಿಕಾಸಪುರಿಯಲ್ಲಿ ಪಾದಯಾತ್ರೆ ನಡೆಯುತ್ತಿರುವ ಸಂದರ್ಭದಲ್ಲಿ ಕೇಜ್ರಿವಾಲ್ ಅವರ ಮೇಲೆ ಬಿಜೆಪಿ ಗೂಂಡಾಗಳು ದಾಳಿ ನಡೆಸಿದ್ದರು ಎಂದ ಎಎಪಿ ನಾಯಕರು ಆರೋಪಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯ ಸಭಾ ಸದಸ್ಯ ಸಂಜಯ್ ಸಿಂಗ್, ಘಟನೆಯಲ್ಲಿ ಪೊಲೀಸರು ಭಾಗಿಯಾಗಿರುವುದು ಕೇಜ್ರಿವಾಲ್ ಅವರ ಹತ್ಯೆಗೆ ಪಿತೂರಿ ನಡೆಯುತ್ತಿರುವು ದನ್ನು ಪುಷ್ಟೀಕರಿಸುತ್ತದೆ. ಕೇಜ್ರಿವಾಲ್ ಅವರ ಜೀವಕ್ಕೆ ಬಿಜೆಪಿ ದೊಡ್ಡ ಶತ್ರುವಾಗಿದೆ ಎಂದು ಆಪಾದಿಸಿದರು.
ಕೇಜ್ರಿವಾಲ್ ಅವರು ನಿಗದಿಯಂತೆ ಪಾದಯಾತ್ರೆ ಮುಂದುವರಿಸಲಿದ್ದಾರೆ. ಘಟನೆ ಕುರಿತು ಎಎಪಿ ಏಕೆ ದೂರು ದಾಖಲಿಸಲಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ಪೊಲೀಸರು ನಿಷ್ಪಕ್ಷಪಾತಿಗಳಾಗಿದ್ದರೆ ಘಟನೆಯೇ ನಡೆಯುತ್ತಿರಲಿಲ್ಲ. ಬಿಜೆಪಿಯ ಯುವ ಮೋರ್ಚಾಗೆ ಸೇರಿದ ದಾಳಿಕೋರರನ್ನು ತಡೆಯಲು ಪೊಲೀಸ್ ಅಧಿಕಾರಿಗಳು ಏನು ಮಾಡಿರಲಿಲ್ಲ ಎಂದರು.
ಕೇಜ್ರಿವಾಲ್ ಅವರು ಯಾರ ಮುಂದೆಯೂ ತಲೆ ಬಾಗುವುದಿಲ್ಲ. ದೆಹಲಿ ಜನರಿಗಾಗಿ ತಮ್ಮ ಹೋರಾಟವನ್ನು ಮುಂದುವರಿಸಲಿದ್ದಾರೆ. ಅವರಿಗೆ ಏನಾದರೂ ಸಂಭವಿಸಿದರೆ ಅದಕ್ಕೆ ಬಿಜೆಪಿಯೇ ಹೊಣೆ ಎಂದು ಒತ್ತಿ ಹೇಳಿದರು.