ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪಿತೂರಿ ನಡೆಸುತ್ತಿದೆ: ಸುರ್ಜೇವಾಲ ಆಪಾದನೆ

Most read

ಹುಬ್ಬಳ್ಳಿ: ಬಿಜೆಪಿ ಇತಿಹಾಸವೇ ದ್ವೇಷದ ರಾಜಕಾರಣ. ದ್ವೇಷ ಸಾಧಿಸುವುದೇ ಬಿಜೆಪಿಯ ಗುಣ. ದ್ವೇಷ. ಹಿಂಸೆ ಬಿಜೆಪಿಯ ಮೂಲಭೂತ ಗುಣ. ಹೀಗಾಗಿ ಅವರು ಸಿದ್ದರಾಮಯ್ಯ ಅವರ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು  ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಪಕ್ಷದ ನಾಯಕರೊಂದಿಗೆ ಸಮಾವೇಶದ ಪೂರ್ವಭಾವಿ ಸಭೆ ನಡೆಸಿದ ನಂತರ ಸುರ್ಜೆವಾಲ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಪಿತೂರಿ ನಡೆಸಿದ್ದರು. ರಾಹುಲ್ ಗಾಂಧಿ. ಪ್ರಿಯಾಂಕ್ ಗಾಂಧಿ ಅವರ ವಿರುದ್ಧ ದಿನನಿತ್ಯ ದಾಳಿ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳ ನಾಯಕರ ವಿರುದ್ಧ ನಿರಂತರ ದಾಳಿ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ನಾವು ಜನರ ಧ್ವನಿಯಾಗಿದ್ದೇವೆ. ಶೋಷಿತ ಸಮುದಾಯಗಳ ಪರವಾಗಿ ಧ್ವನಿ ಎತ್ತುವ ಎಲ್ಲರ ವಿರುದ್ಧವೂ ಬಿಜೆಪಿಯವರು ದಾಳಿ ಮಾಡುತ್ತಿದ್ದಾರೆ. ಹೀಗಾಗಿ ರೈತ ನಾಯಕರ ವಿರುದ್ಧವೂ ದಾಳಿ ಮಾಡುತ್ತಿದ್ದಾರೆ. ಅವರ ಈ ಪಿತೂರಿ ಸಿದ್ದರಾಮಯ್ಯ, ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.  

ಗೋಡ್ಸೆ ವಂಶಸ್ಥರು ನಿರಂತರವಾಗಿ ಗಾಂಧಿ ಅವರ ವಿಚಾರಧಾರೆಗಳನ್ನು ಹತ್ತಿಕ್ಕುತ್ತಲೇ ಬಂದಿದ್ದಾರೆ. ಜನವರಿ 30ರಂದು ಗಾಂಧಿ ಅವರ ಹತ್ಯೆಯಾದಾಗ ಅದು ಕೇವಲ ಅವರ ದೇಹದ ಹತ್ಯೆ ಮಾತ್ರವಲ್ಲ. ಗಾಂಧಿಜಿ ಅವರ ವಿಚಾರಧಾರೆಯ ಹತ್ಯೆಯಾಗಿದೆ. ಭಾರತದ ಸಂಸ್ಕೃತಿ ಹಾಗೂ ಸಂವಿಧಾನದ ವಿಚಾರವಾಗಿ ಇಂದಿಗೂ ಆ ಹೋರಾಟ ಮುಂದುವರಿಯುತ್ತಿದೆ. ಗೋಡ್ಸೆ, ಹಿಂಸೆ, ವಿಭಜನೆ ವಿಚಾರಧಾರೆ ಹಾಗೂ ಪ್ರೀತಿ, ಸೌಹಾರ್ದತೆಯ ವಿಚಾರ ನಡುವೆ ಸಂಘರ್ಷ ನಡೆಯುತ್ತಿದೆ. ಬಿಜೆಪಿಯವರು ಬೇಧ ಭಾವ ಮಾಡುತ್ತಾರೆ. ನಾವು ಎಲ್ಲರನ್ನು ಸಮನಾಗಿ ಕಾಣುತ್ತೇವೆ. ಬಿಜೆಪಿ ದಲಿತ, ಶೋಷಿತ, ಆದಿವಾಸಿ, ಬಡವರು, ಮಹಿಳೆಯರು, ಯುವಕರ ಮೇಲೆ ದೌರ್ಜನ್ಯ ನಡೆಸಿದರೆ ನಾವು ಈ ವರ್ಗದವರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದೇವೆ. ಅವರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಿದರೆ, ನಾವು ಅಲ್ಪಸಂಖ್ಯಾತರಿಗೆ ಸಂವಿಧಾನಬದ್ಧವಾಗಿ ಸಮಾನತೆ ನೀಡುತ್ತಿದ್ದೇವೆ. ಅವರು ಶ್ರೀಮಂತರಿಗೆ ನೆರವು ನೀಡಿದರೆ, ನಾವು ಬಡತನದ ವಿರುದ್ಧ ಹೋರಾಟ ಮಾಡಿ ಎಲ್ಲರಿಗೂ ಸಮಾನ ಅವಕಾಶ ನೀಡುವ ಪ್ರಯತ್ನ ಮಾಡುತ್ತೇವೆ. ಇದೇ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಣ ವ್ಯತ್ಯಾಸ ಎಂದು ಅವರು ವಿಶ್ಲೇಷಿಸಿದರು.

ಇಡಿ ಸಂಸ್ಥೆ 300 ಕೋಟಿಯಷ್ಟು ಆಸ್ತಿ ಜಪ್ತಿ ಮಾಡಿರುವ ವಿಚಾರ ಕೇಳಿದಾಗ, ಮೋದಿ ಅವರ ಸರ್ಕಾರ ಹಾಗೂ ಬಿಜೆಪಿ ನಾಯಕರು ಬೆಳಗಾವಿಯಲ್ಲಿ ನಡೆಯುತ್ತಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶಕ್ಕೆ ಬೆದರಿದ್ದಾರೆ. ಹೀಗಾಗಿ ಇಂತಹ ಕೆಲಸಕ್ಕೆ ಮುಂದಾಗಿದ್ದಾರೆ. ಇವರ ಆರೋಪಗಳಿಗೆ ಯಾವುದೇ ಆಧಾರವಿಲ್ಲ, ಅಸ್ಥಿತ್ವವೂ ಇಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್  ಹಾಗೂ ಅವರ ಹಿಂಬಾಲಕರನ್ನು ಅಪಮಾನ ಮಾಡಿರುವ ಹಿನ್ನೆಲೆಯಲ್ಲಿ ಈ ಸಮಾವೇಶ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆ ಆಗ್ರಹಿಸುತ್ತಿದ್ದು, ಈ ಸಮಾವೇಶಕ್ಕೆ ಬಿಜೆಪಿ ಹೆದರಿ ಈ ರೀತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಉತ್ತರಿಸಿದರು.

ರಾಜ್ಯ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಆರಂಭವಾಗಿದೆಯೇ ಎಂದು ಕೇಳಿದಾಗ, ಪಕ್ಷದ ಮುಂದಾಳತ್ವವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬುದನ್ನು ಹೈಕಮಾಂಡ್ ನಾಯಕರು ತೀರ್ಮಾನ ನೀಡುತ್ತಾರೆ. ಈ ಬಗ್ಗೆ ನಿನ್ನೆ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲರೂ ಬೇರೆ ಕೆಲಸ ಮಾಡುವುದನ್ನು ಬಿಟ್ಟು ತಮಗೆ ನೀಡಲಾಗಿರುವ ಕೆಲಸ ಮಾತ್ರ ಮಾಡಿ ಎಂದು ಸ್ಪಷ್ಟವಾಗಿ ತೀಳಿಸಿದ್ದಾರೆ. ಇದು ಎಲ್ಲರ ರಾಜಕೀಯ ಭವಿಷ್ಯಕ್ಕೆ ಹಾಗೂ ಪಕ್ಷಕ್ಕೆ ಒಳ್ಳೆಯದಾಗಲಿದೆ ಎಂದು ತಿಳಿಸಿದರು

ಜಾತಿ ಗಣತಿ ವಿಚಾರವಾಗಿ ಕೇಳಿದಾಗ, ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಇರಬೇಕು ಎಂದು ಹೇಳಿದೆ. ಬಿಜೆಪಿ ಸಾಮಾಜಿಕ ನ್ಯಾಯ ಎಂಬ ಶಬ್ಧವನ್ನೇ ಸಂವಿಧಾನದಿಂದ ತೆಗೆದುಹಾಕಬೇಕು ಎಂದು ಹೇಳುತ್ತಿದ್ದಾರೆ. ಜಾತಿ ಗಣತಿಯು ಯಾವುದೇ ಜಾತಿಯ ವಿರುದ್ಧವಲ್ಲ. ಜಾತಿಗಣತಿಯು ಸಮಾಜದಲ್ಲಿ ಅಸಮಾನತೆಗೆ ಒಳಗಾಗಿರುವ ಸಮುದಾಯಗಳನ್ನು ಸರ್ಕಾರದ ಅನುದಾನದ ಮೂಲಕ ಮೇಲೆತ್ತಲು ನೆರವಾಗುವ ಉದ್ದೇಶವಾಗಿದೆ ಎಂದರು.

More articles

Latest article