ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬಿಜೆಪಿಯವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಈ ಆರೋಪ ಮಾಡುತ್ತಿದ್ದಾರೆ. ಕೆಲವು ಮಾಧ್ಯಮಗಳ ಗುಂಪಿನಿಂದಲೂ ಈ ಗೊಂದಲ ಸೃಷ್ಟಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸಿದ 58 ಸಾವಿರ ಕೋಟಿ ರೂಗಳ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ. ಇವುಗಳ ಲಾಭ ಜನತೆಗೆ ಸಿಗುತ್ತಿದೆ. ಈ ಯೋಜನೆಗಳು ಇಡೀ ದೇಶದ ಗಮನ ಸೆಳೆದಿವೆ. ಸರ್ಕಾರದ ಈ ಯಶಸ್ಸಿನಿಂದ ಹತಾಶೆಗೊಂಡಿರು ಬಿಜೆಪಿ ಯಶಸ್ಸನ್ನು ಮರೆಮಾಚಲು ಕಾಂಗ್ರೆಸ್ನಲ್ಲಿ ಇಲ್ಲದ ಒಡಕನ್ನು ಸೃಷ್ಟಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕರ್ನಾಟಕ ಬಿಜೆಪಿ ಘಟಕದಲ್ಲಿ ಒಂದಲ್ಲ, ಎರಡಲ್ಲ, ಹಲವಾರು ಬಣಗಳಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬಣ, ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ಬಣ, ಆರ್. ಅಶೋಕ್ ಅವರ ಬಣ, ಡಾ. ಅಶ್ವತ್ಥ ನಾರಾಯಣ ಅವರ ಬಣ ಇದೆ ಎಂದು ಬಿಜೆಪಿ ವಿರುದ್ಧ ಸುರ್ಜೆವಾಲ ವ್ಯಂಗ್ಯ ಮಾಡಿದ್ದಾರೆ. ವಿಜಯೇಂದ್ರ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸುತ್ತಿದ್ದಾರೆ. ಯತ್ನಾಳರಿಗೆ ರಮೇಶ್ ಜಾರಕಿಹೊಳಿ ಬೆಂಬಲ ನೀಡುತ್ತಿದ್ದಾರೆ. ಬಿಜೆಪಿಯ ಆಂತರಿಕ ಕಿತ್ತಾಟಕ್ಕೆ ಜೆಡಿಎಸ್ ಕೂಡ ಬೆಂಬಲ ನೀಡುತ್ತಿದೆ. ಈ ಎಲ್ಲಾ ಹತಾಶೆಗಳನ್ನು ಮುಚ್ಚಿಹಾಕಲು ಕಾಂಗ್ರೆಸ್ ವಿರುದ್ಧ ಬಿಜೆಪಿ ಇಲ್ಲದ ಆರೋಪ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದೊಳಗೆ ಯಾವುದೇ ಒಡಕಿಲ್ಲ. ಸಿಎಂ ಮತ್ತು ಡಿಸಿಎಂ ಮಧ್ಯೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.