ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರೋಧಿ ಹೇಳಿಕೆಗಳು ಭಾರತೀಯ ಜನತಾ ಪಕ್ಷದಲ್ಲಿ ಮಾಮೂಲಾಗಿ ಹೋಗಿದ್ದು, ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆಯ ನಂತರ ಇದೀಗ ಇನ್ನೋರ್ವ ಬಿಜೆಪಿ ನಾಯಕಿ, ರಾಜಸ್ತಾನದ ನಾಗೌರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜ್ಯೋತಿ ಮಿರ್ಧಾ ಸಂವಿಧಾನ ಬದಲಾವಣೆಯ ಮಾತುಗಳನ್ನಾಡಿದ್ದಾರೆ.
ನಾಗೌರ್ ನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾರ್ಚ್ 30ರಂದು ಜ್ಯೋತಿ ಆಡಿದ ಮಾತುಗಳ ವಿಡಿಯೋ ವೈರಲ್ ಆಗಿದ್ದು, ಸಂವಿಧಾನ ಬದಲಾವಣೆಗೆ ಬಿಜೆಪಿಗೆ ಬಹುದೊಡ್ಡ ಬಹುಮತ ಬೇಕಿದೆ ಎನ್ನುವ ದೃಶ್ಯಗಳು ಈ ವಿಡಿಯೋದಲ್ಲಿದೆ.
ಹಲವು ಕಠಿಣ ನಿರ್ಧಾರಗಳನ್ನು ದೇಶ ಹಿತಾಸಕ್ತಿಯ ದೃಷ್ಟಿಯಿಂದ ನಾವು ತೆಗೆದುಕೊಳ್ಳಬೇಕಿದೆ. ಇದಕ್ಕಾಗಿ ಸಂವಿಧಾನ ಬದಲಾವಣೆ ಆಗಬೇಕಿದೆ. ಸಂವಿಧಾನ ಬದಲಾವಣೆಗೆ ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ನಮಗೆ ದೊಡ್ಡ ಬಹುಮ ಬೇಕಾಗುತ್ತದೆ.
ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಬಹುಮತವಿದೆ. ಆದರೆ ರಾಜ್ಯಸಭೆಯಲ್ಲಿ ಇಲ್ಲ ಎಂದು ಜ್ಯೋತಿ ಹೇಳಿದ್ದಾರೆ. ಸಂವಿಧಾನದಲ್ಲಿ ಭಾರತೀಯ ಜನತಾ ಪಕ್ಷ ಯಾವ ಅಂಶಗಳನ್ನು ಬದಲಿಸುವ ಉದ್ದೇಶ ಹೊಂದಿದೆ ಎಂದು ಜ್ಯೋತಿ ಬಹಿರಂಗಪಡಿಸಿಲ್ಲ.
ಮಾರ್ಚ್ 9ರಂದು ಮಾಜಿ ಕೇಂದ್ರ ಸಚಿವ, ಉತ್ತರ ಕನ್ನಡದ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಇದೇ ರೀತಿಯ ಹೇಳಿಕೆ ನೀಡಿದ್ದಾಗ, ಬಿಜೆಪಿ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು. ಹಿಂದೂಗಳನ್ನು ತುಳಿಯುವ ಕಾನೂನುಗಳನ್ನು ತೆಗೆದುಹಾಕುವ ದೃಷ್ಟಿಯಿಂದ ಸಂವಿಧಾನವನ್ನು ಬದಲಿಸಲು ಮೂರನೇ ಎರಡರಷ್ಟು ಬಹುಮತ ನೀಡಿ ಎಂದು ಕೋರಿದ್ದರು. ಸಂವಿಧಾನ ಬದಲಾಗಬೇಕೆಂದರೆ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ಅವರು ಹೇಳಿದ್ದರು.
ಬಿಜೆಪಿ ಮತ್ತು ಪ್ರಧಾನಿ ಮೋದಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತಾರೆ ಎಂಬುದಕ್ಕೆ ಜ್ಯೋತಿ ಮಿರ್ಧಾ ಅವರ ಹೇಳಿಕೆ ಸ್ಪಷ್ಟ ಉದಾಹರಣೆ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ. ಕಾಂಗ್ರೆಸ್ ಸಂಸದ ಈ ಬಗ್ಗೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದು, ಅನಂತ್ ಕುಮಾರ್ ಹೆಗಡೆ ಹೇಳಿಕೆ ನಂತರ ಬೆಕ್ಕುಗಳೆಲ್ಲ ಚೀಲದಿಂದ ಹೊರಗೆ ಬರುತ್ತಿವೆ. ಹೆಗಡೆಯ ಹೇಳಿಕೆಯಿಂದ ದೂರ ಉಳಿದು, ಅವರಿಗೆ ಟಿಕೆಟ್ ಕೂಡ ನೀಡದೆ ಬಿಜೆಪಿ ನಾಯಕರು ತರಾತುರಿಯಲ್ಲಿ ಮುಖ ಉಳಿಸಿಕೊಳ್ಳುವ ಯತ್ನ ನಡೆಸಿದ್ದರು. ಆದರೆ ಈಗ ಅವರ ಇನ್ನೊಬ್ಬ ಅಭ್ಯರ್ಥಿ ಬಹಿರಂಗವಾಗಿಯೇ ಬಿಜೆಪಿಯ ಉದ್ದೇಶ ಸಂವಿಧಾನ ಬದಲಾವಣೆ ಎಂದು ಹೇಳಿದ್ದಾರೆ.