ಚಿಕ್ಕಮಗಳೂರು: ಬಿಜೆಪಿ ಜೆಡಿಎಸ್‌ನವರು ಬೆಂಗಳೂರಿನಿಂದ ಗಣೇಶ ಮೂರ್ತಿಗಳನ್ನು ಮದ್ದೂರಿಗೆ ತಂದು ವಿಗ್ರಹಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಂಡಿದೆ ಎಂದು ಕೃಷಿ ಸಚಿವ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಚಲುವರಾಯಸ್ವಾಮಿ ಆಪಾದಿಸಿದ್ದಾರೆ. ಮೂಲಗಳ ಪ್ರಕಾರ ಸಾಮೂಹಿಕ ಗಣಪತಿ ಮೆರವಣಿಗೆಗೆ ಮಂಡ್ಯದ ನಾಲ್ಕೈದು ಗಣಪತಿಗಳು ಮಾತ್ರ ಇದ್ದವು ಎಂದಿದ್ದಾರೆ.
ಮದ್ದೂರಿನಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯುವಾಗ ಮುಸ್ಲಿಮರಿಂದಲೇ ಗಲಾಟೆ ಆಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂದೂಗಳ ವಿರುದ್ಧ ಪ್ರಕರಣ ದಾಖಲಿಸಿಲ್ಲ ಮತ್ತು ಬಂಧಿಸಿಲ್ಲ. ಗಲಭೆಗೆ ಕಾರಣರಾದ 21 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದರೂ ಬಿಜೆಪಿಯವರು ಸುಳ್ಳು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಆಪಾದಿಸಿದರು.
ಕೇವಲ ಕಾಂಗ್ರೆಸ್ ಅಧಿಕಾರದಲ್ಲಿ ಮಾತ್ರ ಗಲಭೆಗಳು ನಡೆದಿಲ್ಲ. ತಮ್ಮ ಪಕ್ಷದ ಅಧಿಕಾರವಿದ್ದಾಗ ಏನೆಲ್ಲಾ ಅನಾಹುತಗಳು ನಡೆದಿವೆ ಎನ್ನುವುದನ್ನು ಒಮ್ಮೆ ಹಿಂದೆ ತಿರುಗಿ ನೋಡಿಕೊಳ್ಳಲಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ರಾಜ್ಯ ಬಿಜೆಪಿ ಮುಖಂಡರಿಗೆ ನಾಚಿಕೆಯಾಗಬೇಕು ಎಂದರು.