ನವದೆಹಲಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಘಟನೆಯ ಮಾಜಿ ನಾಯಕನೊಬ್ಬ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಎದೆಗೆ ಗುಂಡು ಹಾರಿಸಲಾಗುವುದು ಎಂದು ನೀಡಿದ್ದ ವಿವಾದಾತ್ಮಕ ಹೇಳಿಕೆ ಕುರಿತು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಮತಗಳ್ಳತನ ಆರೋಪ ಬಹಿರಂಗಗೊಂಡ ನಂತರ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಬಾಯಿ ಮುಚ್ಚಿಸಲು ಬಿಜೆಪಿ ಹಾಗೂ ಆರ್ ಎಸ್ ಎಸ್ ಸಂಚು ರೂಪಿಸುತ್ತಿದೆ ಎಂದು ಪಕ್ಷದ ಮುಖಂಡರು ಆರೋಪಿಸಿದ್ದಾರೆ.
ಇತ್ತೀಚೆಗೆ ಎಬಿವಿಪಿಯ ಕೇರಳ ಘಟಕದ ಮಾಜಿ ಅಧ್ಯಕ್ಷ ಪ್ರಿಂಟು ಮಹದೇವ್ ಎಂಬಾತ ರಾಹುಲ್ ಗಾಂಧಿ ಅವರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಮಹಾತ್ಮ ಗಾಂಧಿ ಅವರನ್ನು ನಾಥುರಾಮ್ ಗೋಡ್ಸೆ ಕೊಂದರು. ಸೈದ್ಧಾಂತಿಕವಾಗಿ ಬೆತ್ತಲಾಗಿರುವ ಬಿಜೆಪಿ ಮುಖಂಡರು ಇದೀಗ ರಾಹುಲ್ ಗಾಂಧಿಯವರನ್ನು ಕೊಲ್ಲುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದೆ.
ಕಾಂಗ್ರೆಸ್ ಮಾದ್ಯಮ ಹಾಗೂ ಪ್ರಸಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಮಹದೇವ್ ನ ಹೇಳಿಕೆಯ ವಿಡಿಯೊ ಹಂಚಿಕೊಂಡಿದ್ದು, ಈ ಮೂಲಕ ಕೋಟ್ಯಂತರ ಬಡವರು, ದುರ್ಬಲ ವರ್ಗದ ಜನರ ಧ್ವನಿ ಅಡಗಿಸಲು ಸಂಚು ನಡೆಯುತ್ತಿದೆ. ಸಂಘ ಪರಿವಾರ ಸೋತಾಗಲೆಲ್ಲಾ ಅದರ ಕಾರ್ಯಕರ್ತರು ಹಿಂಸಾಚಾರದ ಹಾದಿ ಹಿಡಿಯುತ್ತಾರೆ ಎಂದು ಟೀಕಿಸಿದ್ದಾರೆ.
ದೇಶದ ಉದ್ದಗಲಕ್ಕೂ ರಾಹುಲ್ ಗಾಂಧಿ ಬಿಚ್ಚಿಟ್ಟಿರುವ ಮತ ಕಳ್ಳತನ ಕುರಿತು ಸಂಚಲನ ಸೃಷ್ಟಿಯಾಗಿದೆ. ಈ ವಿಷಯವನ್ನು ಬಿಜೆಪಿ ಸಂಘ ಪರಿವಾರ ಅರಿಗಿಸಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿಯೇ ಬಿಜೆಪಿ ಮುಖಂಡರು ರಾಹುಲ್ ಗಾಂಧಿ ಅವರ ಬಾಯಿ ಮುಚ್ಚಿಸಲು ಗುಂಡಿನ ದಾಳಿಯ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.