ಮೈಸೂರು: ಕೇಂದ್ರ ಸರ್ಕಾರ ರೈತರ ಪರ ಇಲ್ಲದ ಸರ್ಕಾರ. ರೈತರು ಎಂಎಸ್ ಪಿ ಕಾನೂನು ಮಾಡುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ವೇಳೆ ನೂರಾರು ಜನರು ಸಾವನ್ನಪ್ಪಿದ್ದಾರೆ. ರೈತರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಮಣಿಯುತ್ತಿಲ್ಲ. ಇದು ಮಾನವೀಯತೆ ಇಲ್ಲದ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಬಿಜೆಪಿ ಬಾಬಾಸಾಹೇಬ ಅಂಬೇಡ್ಕರ್ ಅವರ ಬಗ್ಗೆ ಯಾವ ರೀತಿ ಗೌರವ ಇಟ್ಟಿದ್ದಾರೆ ಎಂಬುದು ಗೃಹ ಸಚಿವ ಅಮಿತ್ ಶಾ ಹೇಳಿಕೆಯಿಂದ ಎಲ್ಲರಿಗೂ ಗೊತ್ತಾಗಿದೆ. ಇನ್ನೊಂದು ಕಡೆ ಅಂಬೇಡ್ಕರ್ ಪರವಾಗಿ ಅಭಿಯಾನ ಮಾಡುತ್ತಿದ್ದಾರೆ. ಇದು ಹಾಸ್ಯಾಸ್ಪದ ಎಂದರು.
ಅಂಬೇಡ್ಕರ್ ಕೈಯಲ್ಲಿ ಸಂವಿಧಾನ ಬರೆಸಿದ್ದು ಕಾಂಗ್ರೆಸ್ ಪಕ್ಷ. ಸಂವಿಧಾನಕ್ಕೆ ಗೌರವ ಕೊಡುತ್ತಿರುವುದು ಕಾಂಗ್ರೆಸ್. ವಾಜಪೇಯಿ ಕಾಲದಲ್ಲಿ ಸಂವಿಧಾನ ಬದಲಾವಣೆ ಮಾಡಲು ಹೊರಟರು. ಆರ್ ಎಸ್ ಎಸ್ ನವರು ಸಂವಿಧಾನಕ್ಕೆ ವಿರೋಧ ಮಾಡಿದ್ದಾರೆ. ನಾವು ಅವರ ರೀತಿ ತೋರಿಸಿಕೊಳ್ಳುವ ಅಗತ್ಯ ಇಲ್ಲ. ನಾವು ಸಂವಿಧಾನ ರಕ್ಷಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಹಿಂಪಡೆದಿದ್ದಾರೆ. ಇಂದು ಅವರ ಜೊತೆ ಚರ್ಚಿಸಿದ್ದೇನೆ. ಅವರಿಗೆ ಪ್ರತಿ ತಿಂಗಳು ತಲಾ 10 ಸಾವಿರ ರೂ. ನೀಡಲು ಒಪ್ಪಿಕೊಂಡಿದ್ದೇವೆ ಎಂದರು. ಇತ್ತೀಚೆಗೆ ಶರಣಾದ ನಕ್ಸಲರ ಶಸ್ತ್ರಾಸ್ತ್ರಗಳು ನಾಪತ್ತೆಯಾಗಿವೆ ಎಂಬ ವಿಚಾರ. ಶಸ್ತ್ರಾಸ್ತ್ರಗಳು ಇವೆ. ಮಹಜರು ಮಾಡಿ ಅವುಗಳನ್ನು ತೆಗೆದುಕೊಂಡು ಬರುತ್ತಾರೆ. ಶಸ್ತ್ರಾಸ್ತ್ರಗಳು ಎಲ್ಲಿವೆ ಎಂಬುದು ಗೊತ್ತಿದೆ ಎಂದು ತಿಳಿಸಿದರು.
ಮೈಸೂರಿನ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡಬೇಕೆಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು ನಾನು ಯಾರಿಗೂ ನನ್ನ ಹೆಸರಿಡಿ ಎಂದು ಹೇಳಿಯೇ ಇಲ್ಲ. ನಾನು 40 ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಮೈಸೂರು ವಿವಿಯಲ್ಲಿ ಡಾಕ್ಟರೇಟ್ ಕೊಟ್ಟಾಗಲೇ ನಾನು ಬೇಡ ಎಂದು ಹೇಳಿದೆ. ಡಾಕ್ಟರೇಟ್ ತೆಗೆದುಕೊಳ್ಳುವಷ್ಟು ಯೋಗ್ಯತೆ ನನಗೆ ಇಲ್ಲ. ಆ ರಸ್ತೆಗೆ ಬೇರೆ ಹೆಸರಿದ್ದರೆ ಬದಲಾವಣೆ ಮಾಡುವುದು ಬೇಡ. ಹೆಸರಿಡುವ ವಿಚಾರವಾಗಿ ನಾನು ಯಾರ ಜೊತೆಯೂ ಚರ್ಚೆಯನ್ನೂ ಮಾಡಿಲ್ಲ ಎಂದು ಸ್ಪಷಟಪಡಿಸಿದರು.
ಚಾಮರಾಜನಗರದಲ್ಲಿ ಬರುವ ಫೆಬ್ರುವರಿ 15 ರಂದು ಕ್ಯಾಬಿನೆಟ್ ಮೀಟಿಂಗ್ ನಡೆಯಲಿದೆ. ಕ್ಯಾಬಿನೆಟ್ ಮೀಟಿಂಗ್ ನಡೆಸುವ ಮೂಲಕ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಕೊಡುವ ಕೆಲಸ ಆಗುತ್ತದೆ ಎಂದು ತಿಳಿಸಿದರು.