ಪಶ್ಚಿಮ ಘಟ್ಟದ ಕಣಿವೆ ಕಾಡು ಸಂರಕ್ಷಣೆಯ ಕಹಿ ಸತ್ಯಗಳು…

Most read

ಸರ್ಕಾರ ಮತ್ತು ಜನಸಮೂಹ ಇಬ್ಬರಿಗೂ ಪರಿಸರ ಸಂರಕ್ಷಣೆ ನಿರಾಸಕ್ತ ವಿಷಯವಾಗಿರುವಾಗ, ನಿಸರ್ಗ ಧೂಳೀಪಟವಾಗುತ್ತಿದೆ. ನೆಲಮೂಲದ ಕೃಷಿ ಬದುಕು ಹತಾಶವಾಗುತ್ತಿದೆ. ಜೀವವೈವಿಧ್ಯ ಸಂಕಟ ಪಡುತ್ತಿದೆ. ಹೀಗಿರುವಾಗ ಅಳಿದುಳಿದಿರುವುದರ ಸಂರಕ್ಷಣೆಯನ್ನು ಕೋರ್ಟ್ ಮೆಟ್ಟಿಲು ಹತ್ತಿ ಮಾಡಬೇಕಾದ ಅನಿವಾರ್ಯತೆಯಿದೆ. ದುರಿತ ಕಾಲದಲ್ಲಿ ಅದೊಂದೇ ಸಣ್ಣ ಭರವಸೆ –ನಾಗರಾಜ ಕೂವೆ, ಪರಿಸರ ಬರಹಗಾರರು.

ಸರ್ಕಾರ ಶರಾವತಿ ಅಂತರ್ಗತ ಜಲವಿದ್ಯುತ್ ಯೋಜನೆ ಮಾಡಲು ಹೊರಟಿದೆ. ಎತ್ತಿನಹೊಳೆ ಯೋಜನೆಗೆ ಇನ್ನಷ್ಟು ಕಾಡಿನ ನಾಶಕ್ಕೆ ಅಸ್ತು ಎಂದಿದೆ. ಆಗುಂಬೆಯಲ್ಲಿ ಸುರಂಗ ಮಾರ್ಗ ಎಂಬ ಮಾತು ಕೇಳಿಬರುತ್ತಿದೆ. ನಾಗರಿಕರ ಬದುಕಿಗೆ ಯಾವುದೇ ದೊಡ್ಡ ಅನುಕೂಲವಿಲ್ಲದ ಇಂತಹ ಹತ್ತು ಹಲವು ಯೋಜನೆಗಳಿಗೆ ನಮ್ಮ ಪಶ್ಚಿಮ ಘಟ್ಟದ ಅಳಿದುಳಿದ ಕಾಡುಗಳು ಬಲಿಯಾಗಲು ದಿನವೆಣಿಸುತ್ತಿವೆ.

ಇವತ್ತು ನಮ್ಮಲ್ಲಿನ ನೈಸರ್ಗಿಕ ಅರಣ್ಯದ ಪ್ರಮಾಣ ತೀರಾ ಕುಸಿದು ಕುಳಿತಿದೆ. ದಿನದಿಂದ ದಿನಕ್ಕೆ ಪಾತಾಳಕ್ಕಿಳಿಯುತ್ತಿದೆ ಕೂಡಾ. ಅರಣ್ಯ ಸಂವರ್ಧನೆ, ಪರಿಸರ ಸಂರಕ್ಷಣೆ ತುಂಬಾ ಅಗತ್ಯವೆಂದು ಎಲ್ಲರಿಗೂ ತಿಳಿದಿದೆ! ಅಷ್ಟಾಗ್ಯೂ ಅರಣ್ಯಾಭಿವೃದ್ಧಿ ಹಾಗಿರಲಿ ಅಳಿದುಳಿದಿರುವ ಕಾಡಿನ ಸಂರಕ್ಷಣೆಯ ಬಗೆಗೂ ಆಡಳಿತ  ನಡೆಸುವವರಿಗೆ ಆಸಕ್ತಿಯಿಲ್ಲ. ಜನರಿಗೂ ನಮಗೆ ಒಳ್ಳೆಯ ಪರಿಸರ ಬೇಕೆಂಬ ಭಾವನೆ ಕಾಣಿಸುತ್ತಿಲ್ಲ.

ಪಶ್ಚಿಮ ಘಟ್ಟದ ಒಂದು ವಿಹಂಗಮ ನೋಟ

ಇವತ್ತು ದೊಡ್ಡ ದೊಡ್ಡ ಯೋಜನೆಗಳಿಗೆ ಪಾರಂಪರಿಕ ಸಸ್ಯಸಂಪತ್ತು ಬಲಿಯಾಗುತ್ತಿದೆ. ಬಲಾಢ್ಯರಿಂದ ಅರಣ್ಯ ಒತ್ತುವರಿ ಹೆಚ್ಚಾಗುತ್ತಿದೆ. ಕಾಡಿನ ಅಮೂಲ್ಯ ಮರಗಳು ರಾತ್ರೋರಾತ್ರಿ ಕಣ್ಮರೆಯಾಗುತ್ತಿವೆ. ವನ್ಯಜೀವಿ ಅಕ್ರಮ ಬೇಟೆಗಳಂತೂ ನಿರಂತರ. ಸಂಬಂಧಿಸಿದವರ ಕಣ್ಣು ತಪ್ಪಿಸಿ ರಕ್ಷಿತಾರಣ್ಯಗಳ ಒಳ ನುಗ್ಗುವವರು ಒಂದೆಡೆಯಾದರೆ, ಸಿಬ್ಬಂದಿಗಳ ಕೈ ಬಿಸಿ ಮಾಡಿ ಅವರ ಮಾರ್ಗದರ್ಶನದಲ್ಲೇ ಕಾಡು ಪ್ರವೇಶಿಸುವವರು ಇನ್ನೊಂದೆಡೆ. ನದಿಯ ಇಕ್ಕೆಲಗಳ ದಂಡೆಯ ತುದಿ ತುದಿಯವರೆಗೂ ಕಾಫಿ-ಅಡಿಕೆ ತೋಟಗಳು, ಅಕೇಶಿಯಾ-ಸಾಗುವಾನಿ ನೆಡುತೋಪುಗಳು ವಿಸ್ತರಿಸಿವೆ. ಅದೆಷ್ಟರ ಮಟ್ಟಿಗೆ ಎಂದರೆ ಇನ್ನೊಂದು ಗಿಡ ನೆಡಬೇಕೆಂದರೆ ನದಿಯ ಹರಿವಿಗೇ ಊರಬೇಕು ಎನ್ನುವ ಪರಿಸ್ಥಿತಿ ಇದೆ. ಪಟ್ಟಣಗಳ ಕಲುಷಿತ ನೀರು, ಪ್ರವಾಸಿಗರ ಮಲಮೂತ್ರಗಳು, ತೋಟ ಗದ್ದೆಗಳಿಗೆ ಸುರಿದಿರುವ ಎಲ್ಲಾ ತರದ ರಾಸಾಯನಿಕಗಳು, ಜನರಿಗೆ ಬೇಡ ಅನ್ನಿಸಿದ ಎಲ್ಲವೂ ಹೋಗಿ ಸೇರುತ್ತಿರುವುದೇ ಹಳ್ಳ ಹೊಳೆಗಳಿಗೆ. ಇಲ್ಲಿ ಜಲ ಸಂರಕ್ಷಣೆ ನಿರ್ಲಕ್ಷಿತ ವಿಷಯ.

ನಮ್ಮಲ್ಲಿ ಸಿಲ್ವರ್, ನೀಲಗಿರಿ, ಸಾಗುವಾನಿ, ರಬ್ಬರ್ ಮೊದಲಾದವುಗಳನ್ನು ಹೆಚ್ಚು ನೆಡಬೇಡಿ ಎಂದರೆ, ಬೇಕಾಬಿಟ್ಟಿ ಗಿಡ ಮರಗಳನ್ನು ಕಡಿಯಬೇಡಿ ಎಂದರೆ  ಕೇಳಿಸಿಕೊಳ್ಳುವವರೇ ಇಲ್ಲ. ಹಲಸು, ನಂದಿ ಮುಂತಾದವು ಕಂಡಾಗ ‘ಇದೊಳ್ಳೆ ನಾಟವಾಗುತ್ತೆ…’ ಎಂಬ ಮಾತು ಕೇಳಿ ಬರುವುದೇ ಹೆಚ್ಚು. ಕೆಂಜಳಿಲು, ಕಬ್ಬೆಕ್ಕು ಇತ್ಯಾದಿ ಕಂಡ ಒಂದೆರಡು ದಿನಗಳಲ್ಲಿ ಅವು ಪರಲೋಕ ಸೇರಿರುತ್ತವೆ. ಹುಸಲಕ್ಕಿ, ಚ್ವಾರಕ್ಕಿ ಮೊದಲಾದವು ಕಂಡ ತಕ್ಷಣ ಬಾಯಲ್ಲಿ ನೀರೂರಿ ಅವು ಚಾಟಿ ಬಿಲ್ಲಿಗೆ ನೆಲಕ್ಕುರುಳಿರುತ್ತವೆ. ಇನ್ನು ದಂತ, ಕೋಡು, ಚರ್ಮ, ಮಾಂಸಕ್ಕೆಂದು ಕಾಟಿ, ಆನೆಗಳ ಬೇಟೆಯಾಡುವವರ ಕೆಟಗರಿ ಬೇರೆಯದೇ ಇದೆ. ಪ್ರವಾಸದ ಹೆಸರಿನಲ್ಲಿ ಬಂದವರು ಕಾಡು ಪ್ರವೇಶಿಸಿ ಅಲ್ಲೇ ಮದ್ಯ, ಮಾಂಸ, ಗಾಜು, ಪ್ಲಾಸ್ಟಿಕ್ ಅದು ಇದು ಎಸೆದು ಮತ್ತದು ಸೃಷ್ಟಿಸುವ ಅವಾಂತರ ಒಂದೆರಡಲ್ಲಾ. ಪಶ್ಚಿಮ ಘಟ್ಟದ ಹೆಗ್ಗಾಡಿನ ಮಧ್ಯದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುವವರಿಗೆ ಹಲವು ಪ್ರಭಾವಿಗಳ ಪ್ರತ್ಯಕ್ಷ ಪರೋಕ್ಷ ಬೆಂಬಲವಿದ್ದೇ ಇದೆ. ಎಲ್ಲರಿಗೂ ಕಾಡು ಬಗೆದಷ್ಟೂ ಸಿಗುವ ಗಣಿಯಂತಾಗಿ ಬಿಟ್ಟಿದೆ. ಅರಣ್ಯ ಕಾನೂನುಗಳೆಲ್ಲಾ ದುರ್ಬಲರನ್ನು ಹೆದರಿಸಲು ಇರುವ ಅಸ್ತ್ರಗಳು ಮಾತ್ರ.

ನಗರಗಳಲ್ಲಿ ಕುಳಿತುಕೊಂಡು ಪರಿಸರ ಸಂರಕ್ಷಣೆಯ ಕುರಿತು ಬಾಷಣ ಹೊಡೆಯುವ ಹೆಚ್ಚಿನವರಿಗೆ ನೆಲಮೂಲದ ಸಮಸ್ಯೆಗಳ ಅರಿವಿರುವುದಿಲ್ಲ. ಪುಸ್ತಕದ ಬದನೆಕಾಯಿ ಹೇಳುವವರಿಗೆ ಸ್ಥಳೀಯ ಬಿಕ್ಕಟ್ಟುಗಳು ಅರ್ಥವಾಗುವುದಿಲ್ಲ. ಎಲ್ಲದಕ್ಕೂ ಅಂಕಿ ಅಂಶ, ಲಿಂಕ್ ಒದಗಿಸಿ ಮಾತನಾಡುವವರಿಗೆ ಪರಿಸರ ಸೂಕ್ಷ್ಮವೇ ತಿಳಿದಿರುವುದಿಲ್ಲ. ‘ಅವರಿಗೆ ಬದುಕಲು ಬೇರೆ ಮೂಲದಿಂದ ಆದಾಯವಿದೆ. ನಮ್ಮ ಕಷ್ಟ ಅವರಿಗೆ ತಿಳಿಯುತ್ತಾ? ನಮ್ಮ ತೋಟಕ್ಕೆ ಗೊಬ್ಬರ ಸುರಿಯದೇ, ಸರಿಯಾದ ಇಳುವರಿ ಬರದೇ ನಾವು ಬದುಕಲು ಸಾಧ್ಯವೇ? ದಿನನಿತ್ಯದ ಜೀವನಕ್ಕೆ ಏನು ಮಾಡೋದು?’ ಎಂದು ಸಣ್ಣ ರೈತರು ಕೇಳುತ್ತಾರೆ. ‘ತೋಟದ ಬೆಳೆಯೆಲ್ಲಾ ಮಂಗ, ನವಿಲು ಮತ್ತಿತರ ಕಾಡು ಪ್ರಾಣಿಗಳ ಪಾಲಾಗುತ್ತಿರುವಾಗ, ಕಾಫಿ-ಅಡಿಕೆ ಗಿಡಗಳೆಲ್ಲಾ ಕಾಟಿ, ಆನೆ, ಕಣೆಹಂದಿಗಳಿಗೆ ಬಲಿಯಾಗುತ್ತಿರುವಾಗ ನಮಗೆ ಪರ್ಯಾಯ ಆದಾಯ ಬೇಡವೇ? ಬದುಕೊಂದು ನಡೆಯಬೇಕಲ್ಲಾ’ ಎಂದು ಸಾಮಾನ್ಯ ಕೃಷಿಕರು ಕೇಳುತ್ತಾರೆ. ದೊಡ್ಡ ದೊಡ್ಡ ಹಿಡುವಳಿದಾರರನ್ನಂತೂ ಮಾತನಾಡಿಸುವಂತೆಯೇ ಇಲ್ಲ ಬಿಡಿ. ಉಳಿದವರದು ಬದುಕಾದರೆ, ಅವರದು ದುರಾಸೆ…

ಕಾಡುಹಂದಿಗಳು

ಪರಿಸರಾಸಕ್ತ ಕೃಷಿಕರಂತೂ ವರ್ಷವಿಡೀ ಪ್ರಕೃತಿಯೊಂದಿಗೆ ಗುದ್ದಾಡುತ್ತಾ ಹೇಗೋ ಬದುಕು ತೆಗೆಯುತ್ತಿದ್ದಾರೆ. ಕೃಷಿ ಕೂಲಿ ಕಾರ್ಮಿಕರಿಗೆ ನಾವೊಂದು ಸ್ವಲ್ಪವಾದರೂ ತೋಟ ಮಾಡೋಣವೆಂಬ ಆಸೆ. ಊರಲ್ಲಿ ಅಳಿದುಳಿದಿರುವ ಒಂದೆರಡು ಬೋಳುಗುಡ್ಡಗಳನ್ನು ಹಾಗೆಯೇ ಬಿಡಿ ಎಂದರೆ, ‘ಇವರಿಗೆ ಇಲ್ಲಿಗೆ ಬಂದು ತೋಟ ಮಾಡಲು ಸಾಧ್ಯವಿಲ್ಲವಲ್ಲ, ಇನ್ನೊಬ್ಬ ಉದ್ಧಾರನಾಗಬಾರದೆಂಬ ಹೊಟ್ಟೆಕಿಚ್ಚು!’ ಎಂಬ ಮಾತು ಕೇಳಿಬರುತ್ತದೆ. ‘ನಿರಾಶ್ರಿತರಿಗೆ ನಿವೇಶನ ಕೊಡುವುದಕ್ಕೂ ಇವರದು ಅಡ್ಡಗಾಲು’ ಎಂಬ ಮಾತುಗಳು ಇವೆ. ‘ಬೋಳುಗುಡ್ಡಗಳು, ಹುಲ್ಲುಗಾವಲುಗಳು  ಪರಿಸರಕ್ಕೆ ಅಗತ್ಯ’ ಅಂತ ಅರಿವು ಮೂಡಿಸಲು ಹೊರಟರೆ ಅದು ಯಾರಿಗೂ ಆಸಕ್ತಿ ಇಲ್ಲದ ಸಬ್ಜೆಕ್ಟು. ಪರಿಸರದ ಬಗ್ಗೆ ಅಲ್ಪಸ್ವಲ್ಪ ಮಾತಾಡಿದರೂ ‘ಅಭಿವೃದ್ಧಿ ವಿರೋಧಿ’ಗಳೆಂಬ ಹಣೆಪಟ್ಟಿ. ಅರಣ್ಯ ಇಲಾಖೆಗಳ ಜಾಗೃತಿ ಕಾರ್ಯಕ್ರಮಗಳೆಲ್ಲಾ ಕಡತಕ್ಕಷ್ಟೇ ಸೀಮಿತ. ಹೆಚ್ಚಿನ ಅರಣ್ಯಾಧಿಕಾರಿಗಳಿಗೆ ಬರುವ ಹಣವನ್ನು ಅಲ್ಪಸ್ವಲ್ಪ ಹೇಗೋ ಖರ್ಚು ಮಾಡಿ ಉಳಿದದ್ದು ತಾವು  ಜೇಬಿಗಿಳಿಸಿದರೆ ಸಾಕು ಎಂಬ ಭಾವನೆ. ಇಂತವರು ಮಾರ್ಗದರ್ಶನದ ಇಳಿಜಾರು ಗುಡ್ಡಗಳಲ್ಲಿ ತೋಡುವ ಕಂದಕ, ಇಂಗುಗುಂಡಿ ಮೊದಲಾದವುಗಳು ಉಂಟುಮಾಡುವ ಅನಾಹುತಗಳು ವಿಪರೀತ.

ಸರ್ಕಾರ ಮತ್ತು ಜನಸಮೂಹ ಇಬ್ಬರಿಗೂ ಪರಿಸರ ಸಂರಕ್ಷಣೆ ನಿರಾಸಕ್ತ ವಿಷಯವಾಗಿರುವಾಗ, ನಿಸರ್ಗ ಧೂಳೀಪಟವಾಗುತ್ತಿದೆ. ನೆಲಮೂಲದ ಕೃಷಿ ಬದುಕು ಹತಾಶವಾಗುತ್ತಿದೆ. ಜೀವವೈವಿಧ್ಯ ಸಂಕಟ ಪಡುತ್ತಿದೆ. ಹೀಗಿರುವಾಗ ಅಳಿದುಳಿದಿರುವುದರ ಸಂರಕ್ಷಣೆಯನ್ನು ಕೋರ್ಟ್ ಮೆಟ್ಟಿಲು ಹತ್ತಿ ಮಾಡಬೇಕಾದ ಅನಿವಾರ್ಯತೆಯಿದೆ. ದುರಿತ ಕಾಲದಲ್ಲಿ ಅದೊಂದೇ ಸಣ್ಣ ಭರವಸೆ.

ನಾಗರಾಜ ಕೂವೆ

ಪರಿಸರ ಬರಹಗಾರರು

ಇದನ್ನೂ ಓದಿ- ಮಂಗನಕಾಟದಿಂದ ನಲುಗುತ್ತಿರುವ ಮಲೆನಾಡಿನ ರೈತ

More articles

Latest article