ಬೆಂಗಳೂರು: ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಹುಟ್ಟು ಹಬ್ಬವನ್ನು ಏರ್ ಇಂಡಿಯಾ ವಿಶೇಷವಾಗಿ ಆಚರಿಸುವ ಮೂಲಕ ಗೌರವ ಸಲ್ಲಿಸಿದೆ. ಕಳೆದ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ದೇವೇಗೌಡರು ಮರಳುತ್ತಿದ್ದರು. ಈ ಸಂದರ್ಭದಲ್ಲಿ ಏರ್ ಇಂಡಿಯಾ ವಿಮಾನ ಸಿಬ್ಬಂದಿ ದೇವೇಗೌಡರ ಹುಟ್ಟುಹಬ್ಬವನ್ನು ಆಚರಿಸಿ ಶುಭಾಶಯಗಳನ್ನು ಕೋರಿದ್ದಾರೆ
ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ದೇವೇಗೌಡರು, ವಿಮಾನ ಪ್ರಯಾಣ ಮಾಡುವ ವೇಳೆ 35 ಸಾವಿರ ಅಡಿ ಎತ್ತರದಲ್ಲಿ ನನ್ನ ಜನ್ಮದಿನವನ್ನು ಆಚರಿಸಿದ ಏರ್ ಇಂಡಿಯಾ ಸಿಬ್ಬಂದಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಹೆಚ್.ಡಿ.ದೇವೇಗೌಡರು ನಾಳೆ, ಭಾನುವಾರ 93ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ನಾಳೆ ಮುಂಜಾನೆ ತಿರುಪತಿ ವೆಂಕಟೇಶ್ವರನ ದರ್ಶನ ಪಡೆಯಲಿದ್ದಾರೆ. ಇಂದು ಸಂಜೆಯೇ ಗೌಡರು ಹೆಚ್ ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ತಿರುಪತಿಗೆ ತೆರಳಿದ್ದಾರೆ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಸೇರಿದಂತೆ ಅವರ ಕುಟುಂಬದ 20ಕ್ಕೂ ಹೆಚ್ಚು ಸದಸ್ಯರು ತಿರುಪತಿಗೆ ತೆರಳಿದ್ದಾರೆ.
ಇಂದು ರಾತ್ರಿ ತಿರುಪತಿಯಲ್ಲೇ ವಾಸ್ತವ್ಯ ಹೂಡಲಿರುವ ಗೌಡರು ಮತ್ತು ಕುಟುಂಬದವರು ಮುಂಜಾನೆ ವೆಂಕಟೇಶ್ವರಸ್ವಾಮಿ ದರ್ಶನ ಪಡೆಯಲಿದ್ದಾರೆ. ನಂತರ ಅತಿಥಿಗೃಹವೊಂದನ್ನು ಉದ್ಘಾಟನೆ ಮಾಡಲಿದ್ದಾರೆ. ನಂತರ ದೇವೇಗೌಡರು ಬೆಂಗಳೂರಿಗೆ ಮರಳಲಿದ್ದಾರೆ.