ಬೀದರ್: ಜಿಲ್ಲೆಯ ಗಡಿಭಾಗದಲ್ಲಿ ಹಕ್ಕಿಜ್ವರ ದೃಢಪಟ್ಟಿರುವುದರಿಂದ ಮಹಾರಾಷ್ಟ್ರದಿಂದ ಜಿಲ್ಲೆಗೆ ಮೊಟ್ಟೆ, ಕೋಳಿ ಮಾಂಸ, ಗೊಬ್ಬರ ಸಾಗಾಟದ ಮೇಲೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಈ ಭಾಗದಲ್ಲಿ ಕೋಳಿ ಮತ್ತು ಕಾಗೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದು ದೃಢಪಟ್ಟಿದೆ.
ಮಹಾರಾಷ್ಟ್ರದೊಂದಿಗೆ ಗಡಿಭಾಗ ಹಂಚಿಕೊಂಡಿರುವ ಜಿಲ್ಲೆಯ ಐದು ತಾಲ್ಲೂಕುಗಳ ಗಡಿಯಲ್ಲಿ ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ. ಜಿಲ್ಲೆಯ ಔರಾದ್ (ಬಿ) ತಾಲ್ಲೂಕಿನ ಜಂಬಗಿ, ಚಿಂತಾಕಿ, ಬಾದಲಗಾಂವ್, ಏಕಂಬಾ, ಭಾಲ್ಕಿ ತಾಲ್ಲೂಕಿನ ಅಳವಾಯಿ, ಲಖನಗಾಂವ್, ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪೂರ, ಕಮಲನಗರ ಪಟ್ಟಣ, ಹುಲಸೂರ ಪಟ್ಟಣದಲ್ಲಿ ಚೆಕ್ಪೋಸ್ಟ್ ತೆರೆಯಲಾಗಿದೆ. ದಿನದ 24 ಗಂಟೆ ಕಾಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಧಿಕಾರಿಗಳು ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸುವ ಎಲ್ಲ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಮೊಟ್ಟೆ, ಕೋಳಿ ಮಾಂಸ, ಕೋಳಿಯಿಂದ ತಯಾರಿಸಲಾಗುವ ಇತರೆ ಉತ್ಪನ್ನಗಳಿದ್ದರೆ ವಾಪಸ್ ಕಳುಹಿಸಲಾಗುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಈ ಆದೇಶ ಜಾರಿಯಲ್ಲಿರಲಿದೆ.
ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಉದಗೀರ್ನಲ್ಲಿ ಏಕಾಏಕಿ ಸುಮಾರು 50 ಕಾಗೆಗಳು ಅಸು ನೀಗಿದ್ದವು. ಮಧ್ಯ ಪ್ರದೇಶದ ಭೋಪಾಲ್ನಲ್ಲಿರುವ ದೇಶದ ಏಕಮಾತ್ರ ಪ್ರಯೋಗಾಲಯಕ್ಕೆ ಸ್ಯಾಂಪಲ್ ಕಳುಹಿಸಲಾಗಿತ್ತು. ಎಚ್5ಎನ್1 ವೈರಸ್ನಿಂದ ಉಂಟಾಗುವ ಹಕ್ಕಿಜ್ವರ ಇರುವುದು ದೃಢಪಟ್ಟಿದೆ. ಕಾಗೆಗಳಿಂದ ಕೋಳಿಗಳಿಗೂ ಹರಡಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಗಡಿಭಾಗಗಳಲ್ಲಿ ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ. ಮಹಾರಾಷ್ಟ್ರದಿಂದ ಮೊಟ್ಟೆ, ಕೋಳಿ ಹಾಗೂ ಕೋಳಿ ಉತ್ಪನ್ನಗಳನ್ನು ಜಿಲ್ಲೆಗೆ ಸಾಗಾಟ ಮಾಡದಂತೆ ತಡೆಯಲಾಗುತ್ತಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮಾಹಿತಿ ನೀಡಿದೆ.
‘ಜಿಲ್ಲೆಯ ಕೋಳಿ ಫಾರ್ಮ್ಗಳಿಗೆ ನಮ್ಮ ಸಿಬ್ಬಂದಿ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲಾದರೂ ಹಠಾತ್ ಆಗಿ ಕೋಳಿಗಳು ಸಾವನ್ನಪ್ಪಿದರೆ ಗಮನಕ್ಕೆ ತರಬೇಕು ಎಂದು ಕೋಳಿ ಫಾರ್ಮ್ ಮಾಲೀಕರಿಗೆ ತಿಳಿಸಲಾಗಿದೆ’ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಮೊಟ್ಟೆ, ಕೋಳಿ ಮಾಂಸವನ್ನು ನಿರ್ಬಂಧಿಸಿರುವುದರಿಂದ ಜಿಲ್ಲೆಯ ವ್ಯಾಪಾರಸ್ಥರು ನೆರೆಯ ತೆಲಂಗಾಣ, ಆಂಧ್ರ ಪ್ರದೇಶದ ಮೂಲಕ ಆಮದು ಮಾಡಿಕೊಳ್ಳುತ್ತಿದ್ದಾರೆ. ಹಕ್ಕಿಜ್ವರದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಜನ ಮೊಟ್ಟೆ, ಕೋಳಿ ಮಾಂಸ ಸೇವಿಸಲು ಹಿಂದೇಟು ಹಾಕುತ್ತಿದ್ದಾರೆ.
‘ಎಚ್5ಎನ್1 ವೈರಸ್ ಮಾರಣಾಂತಿಕವಾದದ್ದು. ಕೋಳಿಗಳಿಂದ ಕೋಳಿಗಳಿಗೆ ಅವುಗಳಿಂದ ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ. ಮೊಟ್ಟೆ ಹಾಗೂ ಕೋಳಿ ಮಾಂಸದ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೇಯಿಸಿ ತಿನ್ನಬೇಕು. ಇದರಿಂದ ವೈರಸ್ ಹರಡುವ ಅಪಾಯ ಕಡಿಮೆ ಇರುತ್ತದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ನರಸಪ್ಪ ಸಲಹೆ ಮಾಡಿದ್ದಾರೆ.