2002ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮುಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಪ್ರಕರಣದ 11 ಅಪರಾಧಿಗಳಲ್ಲಿ ಒಬ್ಬರಾದ ಗೋವಿಂದಭಾಯ್ ನ್ಯಾಯ್ ಅವರು ತಮ್ಮ ಆರೋಗ್ಯ ಮತ್ತು ಕುಟುಂಬದ ಜವಾಬ್ದಾರಿಗಳನ್ನು ಉಲ್ಲೇಖಿಸಿ ಶರಣಾಗಲು ನಾಲ್ಕು ವಾರಗಳ ಕಾಲಾವಕಾಶ ಕೋರಿದ್ದಾರೆ.
ಮಾತ್ರವಲ್ಲ, ಸ್ವಾತಂತ್ರ್ಯ ದಿನದಂದು ಬಿಡುಗಡೆಯಾದ ಅಪರಾಧಿಗಳು ಜನವರಿ 22 ರೊಳಗೆ ಶರಣಾಗುವಂತೆ ನ್ಯಾಯಾಧೀಶರು ಸೂಚಿಸಿದ್ದರು. ಕ್ಷೌರಿಕನಾಗಿ ಕೆಲಸ ಮಾಡುತ್ತಿರುವ ಗೋವಿಂದ ಭಾಯ್ ಅವರು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ ಅರ್ಜಿಯಲ್ಲಿ, 88 ವರ್ಷದ ಹಾಸಿಗೆ ಹಿಡಿದಿರುವ ತಂದೆ ಮತ್ತು 75 ವರ್ಷದ ತಾಯಿಗೆ ತಾನೊಬ್ಬನೇ ಪಾಲಕನಾಗಿದ್ದು, ನನ್ನ ಮೇಲೆ ಅವರು ಸಂಪೂರ್ಣ ಅವಲಂಬಿತರಾಗಿದ್ದಾರೆ ಎಂದು ಅವಧಿ ವಿಸ್ತರಣೆಗೆ ಹಲವು ಕಾರಣಗಳನ್ನು ನೀಡಿದ್ದಾರೆ.
ತನ್ನ ಇಬ್ಬರು ಮಕ್ಕಳ ಆರ್ಥಿಕ ಅಗತ್ಯಗಳಿಗೂ ತಾವೇ ಜವಾಬ್ದಾರನಾಗಿದ್ದು, ಈಗ ನಾನು ಕೂಡ ಅನಾರೋಗ್ಯದಿಂದ ನರಳುತ್ತಿದ್ದೇನೆ. ಜೈಲಿನಿಂದ ಬಿಡುಗಡೆಯಾದ ನಂತರ ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ ಮತ್ತು ಬಿಡುಗಡೆ ಆದೇಶದ ಷರತ್ತುಗಳನ್ನು ಪಾಲಿಸಿದ್ದೇನೆ ಹಾಗಾಗಿ ಶರಣಾಗಲು ಕಾಲಾವಕಾಶ ಕೊಡಿ ಎಂದು ನ್ಯಾಯ್ ತಮ್ಮ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.
ಚಳಿಗಾಲದ ಬೆಳೆ ಕೊಯ್ಲು ಇರುವುದರಿಂದ ಶರಣಾಗತಿಗೆ ಆರು ವಾರಗಳ ಸಮಯಾವಕಾಶ ನೀಡಬೇಕೆಂದು ಮಿತೇಶ್ ಚಮನ್‌ಲಾಲ್ ಭಟ್ ಕೇಳಿಕೊಂಡಿದ್ದಾನೆ. ಇನ್ನು ಮಗನ ಮದುವೆಯ ಕಾರಣಕ್ಕೆ ಆರು ವಾರಗಳ ಕಾಲಾವಕಾಶ ನೀಡಬೇಕೆಂದು ರಮೇಶ್ ರೂಪಭಾಯ್ ಚಂದನ್ ಅರ್ಜಿಯ ಸಲ್ಲಿಸುವ ಮೂಲಕ ವಿನಂತಿಸಿದ್ದಾನೆ.
2002ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮುಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಅವರನ್ನು ಸಾಮೂಹಿಕ ಅತ್ಯಾಚಾರ ನಡೆಸಿದ ಮತ್ತು ಆಕೆಯ ಕುಟುಂಬದ ಏಳು ಸದಸ್ಯರ ಹತ್ಯೆಯಲ್ಲಿ ಭಾಗಿಯಾಗಿರುವ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 11 ಮಂದಿಯ ಶಿಕ್ಷೆಯನ್ನು ಕಡಿತಗೊಳಿಸಿ ಗುಜರಾತ್ ರಾಜ್ಯ ಸರ್ಕಾರ ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು.
ಗುಜರಾತ್ ಸರ್ಕಾರದ ನಿರ್ಧಾರವನ್ನು ಬಾನೊ ಸೇರಿದಂತೆ ಹಲವು ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ದಶಕಗಳ ಹಿಂದಿನ ಗುಜರಾತ್ ಗಲಭೆ ಸಂದರ್ಭದಲ್ಲಿ ನಡೆದ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಶಿಕ್ಷೆಯಿಂದ ಅವಧಿಪೂರ್ವವಾಗಿ ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.