Wednesday, May 22, 2024

ಬಿಲ್ಕಿಸ್ ಬಾನೊ ಪ್ರಕರಣ | ಹೋರಾಟವೊಂದರ ಮಹಾ ಕಥನ

Most read

ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಹನ್ನೊಂದು ಅಪರಾಧಿಗಳನ್ನು 2022ರ ಆಗಸ್ಟ್‌ ನಲ್ಲಿ ಗುಜರಾತ್ ಸರ್ಕಾರ ಅವಧಿಪೂರ್ಣ ಬಿಡುಗಡೆ ಮಾಡಿತ್ತು. ಅಪರಾಧಿಗಳ ಬಿಡುಗಡೆಯನ್ನು ರಿಟ್ ಪಿಟೀಶನ್ ಮೂಲಕ ಬಿಲ್ಕಿಸ್‌ ಪ್ರಶ್ನಿಸಿದರು. ಅವಧಿಪೂರ್ವ ಬಿಡುಗಡೆ ಮಂಜೂರು ಮಾಡಿದ ಗುಜರಾತ್ ಸರಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಎರಡು ವಾರಗಳೊಳಗೆ ದೋಷಿಗಳು ಜೈಲಿಗೆ ಮರಳುವಂತೆ ಆದೇಶಿಸಿತು. ಈ ಆದೇಶದ ಪ್ರಕಾರ ಬಿಲ್ಕಿಸ್ ಬಾನೊ ಪ್ರಕರಣದ ಎಲ್ಲ ದೋಷಿಗಳು ಇವತ್ತು ಅಂದರೆ ಭಾನುವಾರ, 21.01.2024 ರಂದು ಜೈಲಿಗೆ ಮರಳಬೇಕಾಗಿದೆ.ಈ ಹಿನ್ನೆಲೆಯಲ್ಲಿ, ಇಡೀ ಪ್ರಕರಣವನ್ನು ಅವಲೋಕಿಸಿದ್ದಾರೆ ಶ್ರೀನಿವಾಸ ಕಾರ್ಕಳ

2002 ರ ಗುಜರಾತ್ ನರಮೇಧ ಸಮಯದಲ್ಲಿ ಐದು ತಿಂಗಳ ಗರ್ಭಿಣಿ ಬಿಲ್ಕಿಸ್ ಬಾನೋ ಮೇಲೆ ಬರ್ಬರ ಅತ್ಯಾಚಾರ ನಡೆಯಿತು. ಆಕೆಯ ಕುಟುಂಬದ 14 ಮಂದಿಯನ್ನು ಕೊಂದು ಹಾಕಲಾಯಿತು. ಈ ಪ್ರಕರಣದ ಎಲ್ಲ ಮಾಹಿತಿಗಳೂ ಸ್ಪಷ್ಟವಿದ್ದರೂ, ವಿಶ್ವಾಸಾರ್ಹ ಸಾಕ್ಷ್ಯಗಳಿಂದ್ದರೂ ಗುಜರಾತ್ ಸರಕಾರ ಮತ್ತು ಅಲ್ಲಿನ ಪೊಲೀಸರು ಅದನ್ನು ಮುಚ್ಚಿಹಾಕುವ ಎಲ್ಲ ಪ್ರಯತ್ನ ಮಾಡಿದರು. ಆದರೆ ನ್ಯಾಯವಾದಿಗಳಾದ ಶೋಭಾ ಗುಪ್ತಾ ನಿರಂತರವಾಗಿ ಬಿಲ್ಕಿಸ್ ಬಾನೊ ಜತೆ ನಿಂತರು. ಇವರ ಜತೆ ಇಂದಿರಾ ಜೈಸಿಂಗ್, ವೃಂದಾ ಗ್ರೋವರ್ ಕೈಜೋಡಿಸಿದರು, ಮಹುವಾ ಮೊಯಿತ್ರಾ, ರೇವತಿ ಲಾಲ್, ಮೀರನ್ ಚಡ್ಡಾ ಬೋರ್ವಾಂಕರ್, ಶುಭಾಷಿಣಿ ಅಲಿ ಮತ್ತು ರೂಪರೇಖಾ ವರ್ಮಾ ಕೂಡಾ ಜತೆಯಾದರು. ಸರಿ ಸುಮಾರು ಎರಡು ದಶಕಗಳ ಕಾಲ ಕೋರ್ಟ್ ನಲ್ಲಿ ಹೋರಾಡಿದರು. 11 ಮಂದಿ ಆರೋಪಿಗಳಿಗೆ ಶಿಕ್ಷೆಯಾಯಿತು. ಬಿಜೆಪಿ ಸರಕಾರ ತನ್ನವರು ಏನೇ ಮಾಡಿದರೂ ಅವರನ್ನು ರಕ್ಷಿಸುವ ಕಾರ್ಯನೀತಿಯ ಭಾಗವಾಗಿ ಅವರನ್ನು 2022 ಆಗಸ್ಟ್ ನಲ್ಲಿ ಅವಧಿಪೂರ್ಣ ಬಿಡುಗಡೆ ಮಾಡಿದಾಗ ಮತ್ತೆ ಕಾನೂನು ಸಮರ ಹೂಡಿ ಅವರನ್ನು ಜೈಲಿಗೆ ಮರಳಿಸುವ ತೀರ್ಪು ಬರುವಂತೆ (2024) ಮಾಡಲಾಯಿತು.

ಬಿಲ್ಕಿಸ್‌ ಬಾನೊ ಕೇಸಿನಲ್ಲಿ ಹೋರಾಡಿದ ನ್ಯಾಯವಾದಿಗಳು

ಸಂತ್ರಸ್ತರು ದುರ್ಬಲರಿದ್ದಾಗ ಮತ್ತು ಸರಕಾರವೇ ಅಪರಾಧಿಗಳ ಜತೆ ಕೈಜೋಡಿಸಿದಾಗ ನ್ಯಾಯದ ಹೋರಾಟ ಎಷ್ಟು ಕಷ್ಟ ಎನ್ನುವುದಕ್ಕೆ ಹಾಗೂ ನ್ಯಾಯದ ಮೇಲೆ ನಂಬಿಕೆ ಇಟ್ಟು ಛಲದಿಂದ ಹೋರಾಟ ನಡೆಸಿದರೆ ಮತ್ತು ನ್ಯಾಯಾಲಯದಲ್ಲಿ ಜಸ್ಟಿಸ್ ನಾಗರತ್ನರಂತಹ ಪ್ರಾಮಾಣಿಕ ನ್ಯಾಯಾಧೀಶರಿದ್ದಾಗ ನ್ಯಾಯ ದೊರೆಯುವುದು ಹೇಗೆ ಸಾಧ್ಯ ಎನ್ನುವುದಕ್ಕೂ ಬಿಲ್ಕಿಸ್ ಬಾನೊ ಪ್ರಕರಣ ಒಂದು ಉದಾಹರಣೆ.

ಬಿಲ್ಕಿಸ್ ಪ್ರಕರಣ, ಕಾಲರೇಖೆ

ಫೆಬ್ರವರಿ 28, 2002: ಗೋದ್ರಾ ರೈಲು ದಹನ ಹಿನ್ನೆಲೆಯಲ್ಲಿ ಗುಜರಾತಿನಾದ್ಯಂತ ಭೀಕರ ಕೋಮು ಧಾಳಿ ಆರಂಭವಾಯಿತು. ಇದರ ಕಾರಣ ಹೆದರಿದ ಬಿಲ್ಕಿಸ್ ಮತ್ತು ಅವರ ಕುಟುಂಬ ರಾಧಿಕಾಪುರದಿಂದ ಪಲಾಯನಗೈದಿತು.

ಮಾರ್ಚ್ 3, 2002: ಐದು ತಿಂಗಳ ಗರ್ಭಿಣಿ ಬಿಲ್ಕಿಸ್ ಳ ಮೇಲೆ ಬರ್ಬರ ಅತ್ಯಾಚಾರ ಮಾಡಿದ ಗುಂಪು ಆಕೆಯ ಕುಟುಂಬದ 14 ಮಂದಿಯನ್ನು ಕೊಂದು ಹಾಕಿತು.

ಮಾರ್ಚ್ 4, 2002: ಬಿಲ್ಕಿಸ್ ಳನ್ನು ಲಿಮಖೇಡಾ ಪೊಲೀಸ್ ಠಾಣೆಗೆ ಒಯ್ಯಲಾಯಿತು. ಅಲ್ಲಿ ಎಫ್ ಐ ಆರ್ ರಿಜಿಸ್ಟರ್ ಆಯಿತು. ಆದರೆ ರೇಪ್ ಆದ ವಿಚಾರ ಅದರಲ್ಲಿರಲಿಲ್ಲ. 12 ಆರೋಪಿಗಳು ರಾಧಿಕಾಪುರದ ನಿವಾಸಿಗಳಾಗಿದ್ದು ಅವರನ್ನು ಬಿಲ್ಕಿಸ್ ಸ್ಪಷ್ಟವಾಗಿ ಗುರುತಿಸಿದ್ದಳು. ಆದರೂ ಆರೋಪಿಗಳ ಹೆಸರನ್ನು ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಿಲ್ಲ.

ಮಾರ್ಚ್ 5, 2002: ಬಿಲ್ಕಿಸ್ ಳನ್ನು ಗೋಧ್ರಾ ಪರಿಹಾರ ಶಿಬಿರಕ್ಕೆ ಒಯ್ಯಲಾಯಿತು. ಪಂಚಮಲ್ ಕಲೆಕ್ಟರ್ ಜಯಂತಿ ರವಿ ಯವರ ಸೂಚನೆಯ ಮೇರೆಗೆ ಅಲ್ಲಿ ಆಕೆಯ ಹೇಳಿಕೆಯನ್ನು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟರು ದಾಖಲಿಸಿಕೊಂಡರು. ಆಕೆಯ ಕುಟುಂಬದ ಏಳು ಮಂದಿಯ ದೇಹಗಳು ಕೇಶರಪುರ ಅರಣ್ಯದಲ್ಲಿ ಪತ್ತೆಯಾದವು.

ಪೊಲೀಸರ ನಡೆ

ನವೆಂಬರ್ 6, 2002: ಪೊಲೀಸರು  ಸಮ್ಮರಿ ವರದಿ ‘A’ ಸಲ್ಲಿಸಿದರು. ಪ್ರಕರಣ ನಡೆದುದು ನಿಜ ಆದರೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಮತ್ತು ಆರೋಪಿಗಳು ಸಿಕ್ಕಿಲ್ಲ ಎಂದು ಅದರಲ್ಲಿತ್ತು. ಪ್ರಕರಣ ಮುಗಿಸುವಂತೆ ವಿನಂತಿಯನ್ನೂ ಮಾಡಿಕೊಳ್ಳಲಾಗಿತ್ತು. ಆದರೆ ಕೋರ್ಟ್ ಈ ಮುಕ್ತಾಯ ವರದಿಯನ್ನು ಸ್ವೀಕರಿಸಲಿಲ್ಲ. ತನಿಖೆ ಮುಂದುವರಿಸುವಂತೆ ನಿರ್ದೇಶಿಸಿತು.

ಫೆಬ್ರವರಿ, 2003: ಲಿಮಖೇಡಾ ಪೊಲೀಸರು ಸಮ್ಮರಿ ‘A’ ವರದಿ ಸಲ್ಲಿಸಿ ಪ್ರಕರಣ ಮುಕ್ತಾಯಗೊಳಿಸುವಂತೆ ಕೋರಿದರು. ನ್ಯಾಯಾಲಯ ಅದನ್ನು ಒಪ್ಪಿಕೊಂಡಿತು.

ಪ್ರಕರಣ ಸಿಬಿಐ ಗೆ ವರ್ಗಾವಣೆಯಾಯಿತು

ಎಪ್ರಿಲ್ 2003: ಬಿಲ್ಕಿಸ್ ಸುಪ್ರೀಂ ಕೋರ್ಟ್ ನ ಕದ ತಟ್ಟಿದಳು. ಸಮ್ಮರಿ ‘A’ ವರದಿ ಸ್ವೀಕರಿಸಿದ ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸಲು ಕೋರಿದಳು. ಸಿಬಿಐ ತನಿಖೆ ನಡೆಸುವಂತೆ ಪ್ರಾರ್ಥಿಸಿದಳು.

ಡಿಸೆಂಬರ್ 6, 2003: ತನಿಖೆಯನ್ನು ಸಿಬಿಐ ಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತು.

ಜನವರಿ 1, 2004: ಸಿಬಿಐ ಡಿಎಸ್ಪಿ ಕೆ ಎನ್ ಸಿನ್ಹಾ ಅವರು ಗುಜರಾತಿನ ಪೊಲೀಸರಿಂದ ತನಿಖೆಯನ್ನು ವಶಕ್ಕೆ ತೆಗೆದುಕೊಂಡರು.

ಫೆಬ್ರವರಿ 1-2, 2004: ಕೊಲೆಯಾದವರ ಮೃತ ದೇಹಗಳನ್ನು ಸಿಬಿಐ ತನಿಖೆಗಾಗಿ ಹೊರತೆಗೆಯಲಾಯಿತು. 109 ಎಲುಬುಗಳು ಸಿಕ್ಕವು, ತಲೆಬುರುಡೆ ಸಿಗಲಿಲ್ಲ. ‘ಒಂದು ಹಂತದಲ್ಲಿ ತಲೆಗಳನ್ನು ಕತ್ತರಿಸಿರಬೇಕು ಎಂದು ಕಾಣಿಸುತ್ತದೆ’ ಎಂದು ಮುಂದೆ ತನ್ನ ತೀರ್ಪಿನಲ್ಲಿ ಬಾಂಬೇ ಹೈಕೋರ್ಟ್ ಹೇಳಿತು.

ಎಪ್ರಿಲ್ 19, 2004: ಸಿಬಿಐ 20 ಜನ ಆರೋಪಿಗಳ ವಿರುದ್ಧ ಅಹಮದಾಬಾದ್ ನ ಸಿಜೆಎಂ ಮುಂದೆ ಚಾರ್ಚ್ ಶೀಟ್ ಸಲ್ಲಿಸಿತು. ಆರು ಪೊಲೀಸ್ ಅಧಿಕಾರಿಗಳು ಮತ್ತು ಮಾರ್ಚ್ 5, 2002 ರಂದು ಏಳು ದೇಹಗಳ ಪೋಸ್ಟ್ ಮಾರ್ಟಂ ನಡೆಸಿದ ಇಬ್ಬರು ವೈದ್ಯರ ಮೇಲೂ ಚಾರ್ಚ್ ಶೀಟ್ ದಾಖಲಾಯಿತು.

ಪ್ರಕರಣ ಮುಂಬಯಿಗೆ ವರ್ಗಾವಣೆಯಾಯಿತು

ಆಗಸ್ಟ್ 2004: ಸುಪ್ರೀಂ ಕೋರ್ಟ್ ಪ್ರಕರಣದ ತನಿಖೆಯನ್ನು ಗುಜರಾತ್ ನಿಂದ ಮುಂಬಯಿಗೆ ವರ್ಗಾಯಿಸಿತು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಿಸುವಂತೆ ಕೇಂದ್ರ ಸರಕಾರಕ್ಕೆ ಆದೇಶ ನೀಡಿತು.

ಜನವರಿ 21, 2008: ಗ್ರೇಟರ್ ಮುಂಬಯಿಯ ವಿಶೇಷ ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು. ಕೊಲೆ ಮತ್ತು ರೇಪ್ ಮಾಡಿದ್ದಕ್ಕೆ 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಏಳು ಮಂದಿಯ ಖುಲಾಸೆ. ವಿಚಾರಣೆ ಸಮಯ ಇಬ್ಬರು ಆರೋಪಿಗಳು ಸತ್ತುದರಿಂದ ಅವರನ್ನು ಪ್ರಕ್ರಿಯೆಯಿಂದ ಕೈಬಿಡಲಾಯಿತು.

2009-2011: ಆರೋಪಿತ ಅಪರಾಧಿಗಳು ಮತ್ತು ಸಿಬಿಐ ಮೇಲ್ಮನವಿ ಸಲ್ಲಿಸಿದರು. ಜಸ್ವಂತಿ ಭಾಯ್ ನಾಯ್, ಗೋವಿಂದಭಾಯ್ ನಾಯ್ ಮತ್ತು ಶೈಲೇಶ್ ಚಿಮನ್ ಲಾಲ್ ಭಟ್ ಅವರಿಗೆ ಮರಣದಂಡನೆ ವಿಧಿಸುವಂತೆ  ಸಿಬಿಐ ಕೋರಿತು. ಐಪಿಸಿ ಸೆಕ್ಷನ್ 201, 217 ಮತ್ತು 218 ಅಡಿಯಲ್ಲಿ ಎಂಟು ಮಂದಿಯನ್ನು ಖುಲಾಸೆ ಮಾಡಿದ್ದರ ವಿರುದ್ಧವೂ ಸಿಬಿಐ ಮೇಲ್ಮನವಿ ಸಲ್ಲಿಸಿತು (ಇವರಲ್ಲಿ ಒಬ್ಬರು ವಿಚಾರಣೆಯ ಕಾಲದಲ್ಲಿ ತೀರಿಕೊಂಡಿದ್ದರು).

2016: ಬಾಂಬೇ ಹೈಕೋರ್ಟ್ ಮೇಲ್ಮನವಿ ವಿಚಾರಣೆ ಆರಂಭಿಸಿತು.

ಮೇ 2017: ಬಾಂಬೇ ಹೈಕೋರ್ಟು ವಿಚಾರಣಾ ನ್ಯಾಯಾಲಯ ವಿಧಿಸಿದ್ದ 11 ಮಂದಿಯ ಶಿಕ್ಷೆಯನ್ನು (ಜೀವಾವಧಿ ಶಿಕ್ಷೆ) ಎತ್ತಿ ಹಿಡಿಯಿತು; ಶಿಕ್ಷೆ ಹೆಚ್ಚು ಮಾಡಲು ನಿರಾಕರಿಸಿತು. ಅಲ್ಲದೆ ಏಳು ಮಂದಿಯ (5 ಪೊಲೀಸರು ಮತ್ತು ಇಬ್ಬರು ವೈದ್ಯರು) ದೋಷಮುಕ್ತಿಯ ತೀರ್ಪನ್ನು ರದ್ದುಗೊಳಿಸಿತು. ಅವರನ್ನು ಐಪಿಸಿ ಸೆಕ್ಷನ್ 201 ಮತ್ತು 218 ಅಡಿಯಲ್ಲಿ ಅಪರಾಧಿ ಎಂದು ಘೋಷಿಸಿತು. ಈಗಾಗಲೇ ಜೈಲಿನಲ್ಲಿದ್ದ ಅವಧಿಯನ್ನು ಶಿಕ್ಷೆಯಾಗಿ ಪರಿಗಣಿಸಿತು ಮತ್ತು ದಂಡ ವಿಧಿಸಿತು.

ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ

ಜುಲೈ: ಮಂಬೈ ಹೈಕೋರ್ಟ್ ವಿಧಿಸಿದ ಶಿಕ್ಷೆಯ ವಿರುದ್ಧ ಇಬ್ಬರು ವೈದ್ಯರು ಮತ್ತು ನಾಲ್ವರು ಪೊಲೀಸರು ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿತು. ಒಬ್ಬ ಪೊಲೀಸ್ ಮೇಲ್ಮನವಿ ಸಲ್ಲಿಸಲಿಲ್ಲ.

ಎಪ್ರಿಲ್ 23, 2019: ಪರಿಹಾರ ಕೇಳಿ ಬಾನೋ ಅವರು 2017 ರಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಸಂಬಂಧ ಬಿಲ್ಕಿಸ್ ಬಾನೋ ಗೆ 50 ಲಕ್ಷ ರುಪಾಯಿ ಪರಿಹಾರ ನೀಡುವಂತೆ ಮತ್ತು ಆಕೆಯ ಆಯ್ಕೆಯ ಜಾಗದಲ್ಲಿ ವಸತಿ ಒದಗಿಸುವಂತೆ ಸುಪ್ರೀಂ ಕೋರ್ಟ್ ಗುಜರಾತ್ ಸರಕಾರಕ್ಕೆ ಆದೇಶಿಸಿತು. 17 ವರ್ಷಗಳಲ್ಲಿ ಮೊದಲ ಬಾರಿಗೆ ಆಕೆ ದಾಹೋಡ್ ನಲ್ಲಿ ಎಪ್ರಿಲ್ 2019 ರಂದು ಮತ ಚಲಾಯಿಸುತ್ತಾಳೆ.

ಎಪ್ರಿಲ್ 23, 2019: ಪ್ರಕರಣ ವರ್ಗಾಯಿಸುವಂತೆ 2003 ರಲ್ಲಿ ಬಿಲ್ಕಿಸ್ ಅವರು ಪ್ರಾರ್ಥಿಸಿದ್ದರು. ಇದರಲ್ಲಿಯೇ ಆಕೆ ಆರೋಪಿ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮ ಕೋರಿದ್ದರು. ಇದರ ಅನುಸಾರ ರಾಜ್ಯ ಸರಕಾರವು ಆದೇಶ ಹೊರಡಿಸಿ ಮೂವರು ಅಪರಾಧಿ ಪೊಲೀಸ್ ಅಧಿಕಾರಿಗಳ (ಇವರು ಆಗ ನಿವೃತ್ತರಾಗಿದ್ದರು) ನೂರಕ್ಕೆ ನೂರು ಪಿಂಚಣಿಯನ್ನು ಕಡಿತಗೊಳಿಸಿ ಅದನ್ನು ದಂಡವಾಗಿ ಪರಿಗಣಿಸಿತು. ಅಪರಾಧಿ ಐಪಿಎಸ್ ಅಧಿಕಾರಿ ಆರ್ ಎಸ್ ಭಗೋರಾ ಅವರಿಗೆ ಎರಡು ಹಂತದ ಹಿಂಬಡ್ತಿಯನ್ನು ಶಿಫಾರಸು ಮಾಡಿತು. ತೆಗೆದುಕೊಂಡ ಈ ಕ್ರಮದ ಬಗ್ಗೆ ಗುಜರಾತ್ ಸರಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿತು.

ಮೇ 30, 2019: ನಿವೃತ್ತಿಯ ಮುನ್ನಾ ದಿನ ಭಗೋರಾ ಅವರನ್ನು ಕೇಂದ್ರ ಗೃಹ ಇಲಾಖೆಯು ಸೇವೆಯಿಂದ ವಜಾಗೊಳಿಸಿತು. ಅಂದರೆ ಸರಕಾರಿ ನೌಕರನಾಗಿ ದೊರೆಯುವ ನಿವೃತ್ತಿ ಸೌಲಭ್ಯ ಆತನಿಗೆ ದೊರೆಯುವುದಿಲ್ಲ.

ಮೇ 2022: ದೋಷಿ ರಾಧೇಶ್ಯಾಂ ಶಾ ಗುಜರಾತ್ ಹೈಕೊರ್ಟ್ ನ ಜುಲೈ 17, 2019 ರ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತಾರೆ. ಮುಂಬಯಿಯಲ್ಲಿ ಸಿಬಿಐ ಕೋರ್ಟ್ 2008 ರಲ್ಲಿ ವಿಧಿಸಿದ್ದ ಜೀವಾವಧಿ ಶಿಕ್ಷೆಯಲ್ಲಿ ಈಗಾಗಲೇ 15 ವರ್ಷ ಮತ್ತು ನಾಲ್ಕು ತಿಂಗಳ ಶಿಕ್ಷೆಯಾಗಿರುವುದರಿಂದ ಆ ನೆಲೆಯಲ್ಲಿ ರೆಮಿಶನ್ (ಅವಧಿಪೂರ್ವ ಬಿಡುಗಡೆ) ಮನವಿ ನಿರ್ಧರಿಸಲು ಮಹಾರಾಷ್ಟ್ರವೇ ಸೂಕ್ತ ಸರಕಾರ ಎಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿತ್ತು.

ಮೇ 13, 2022: ಜಸ್ಟಿಸ್ ಅಜಯ್ ರಸ್ತೋಗಿ ಮತ್ತು ವಿಕ್ರಮ ನಾಥ ಅವರಿದ್ದ ಪೀಠವು ಶಾ ಅವರ ಮೇಲ್ಮನವಿಯ ಈ ವಿಷಯವನ್ನು ‘ಮುಂದಿನ ಎರಡು ತಿಂಗಳೊಳಗೆ’ ನಿರ್ಧರಿಸುವಂತೆ (ಅವಧಿಪೂರ್ವ ಬಿಡುಗಡೆ) ಗುಜರಾತ್ ಸರಕಾರಕ್ಕೆ ಆದೇಶ ನೀಡಿತು; ಯಾವಾಗ ಅವರು ದೋಷಿ ಎಂದು ತೀರ್ಮಾನವಾಯಿತೋ ಆ ದಿನಾಂಕದಲ್ಲಿ ರಾಜ್ಯದಲ್ಲಿ ಅನ್ವಯವಾಗುವ ನಿಯಮ ಪ್ರಕಾರ.

ಅಪರಾಧಿಗಳ ಬಿಡುಗಡೆ

ಅಪರಾಧಿಗಳು

ಆಗಸ್ಟ್ 15, 2022: ಗುಜರಾತ್ ಸರಕಾರ ರೆಮಿಶನ್ ಘೋಷಿಸಿತು. ಆ ಪ್ರಕಾರ ರಾಧೇಶ್ಯಾಂ ಶಾ ಸೇರಿದಂತೆ 11 ದೋಷಿಗಳನ್ನು ಗುಜರಾತ್ ಸಬ್ ಜೈಲಿನಿಂದ ಬಿಡುಗಡೆಗೊಳಿಸಲಾಯಿತು.

ಸೆಪ್ಟಂಬರ್ 2022: ಬಿಲ್ಕಿಸ್ ಬಾನೊ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಲೇರಿದರು. 11 ದೋಷಿಗಳ ಅವಧಿ ಪೂರ್ವ ಬಿಡುಗಡೆಯನ್ನು ರಿಟ್ ಪಿಟೀಶನ್ ಮೂಲಕ ಪ್ರಶ್ನಿಸಿದರು.

ಐತಿಹಾಸಿಕ ತೀರ್ಪು, ಅಪರಾಧಿಗಳು ಮರಳಿ ಜೈಲಿಗೆ

ಜನವವರಿ 8, 2024: 11 ದೋಷಿಗಳಿಗೆ ಅವಧಿಪೂರ್ವ ಬಿಡುಗಡೆ ಮಂಜೂರು ಮಾಡಿದ ಗುಜರಾತ್ ಸರಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ತನಗೆ ಇದ್ದೇ ಇರದ ಅಧಿಕಾರ ಚಲಾಯಿಸಿದ್ದಕ್ಕೆ ಗುಜರಾತ್ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಎರಡು ವಾರಗಳೊಳಗೆ ದೋಷಿಗಳು ಜೈಲಿಗೆ ಮರಳುವಂತೆ ಆದೇಶಿಸಿತು.

ಜನವರಿ  17, 2024: ಬೇರೆ ಬೇರೆ ಕಾರಣಗಳನ್ನು ನೀಡಿ ದೋಷಿಗಳು ಜೈಲಿಗೆ ಶರಣಾಗುವ ತಮ್ಮ ದಿನಾಂಕವನ್ನು ಮುಂದೆ ದೂಡಬೇಕು ಎಂದು ಸುಪ್ರೀಂ ಕೋರ್ಟ್ ನ್ನು ವಿನಂತಿಸಿಕೊಂಡರು.

ಜನವರಿ 19, 2024: ಜಸ್ಟಿಸ್ ನಾಗರತ್ನ ಮತ್ತು  ಉಜ್ಜಲ್ ಭುಯಾನ್ ಅವರ ಪೀಠ ಈ ಮನವಿಯನ್ನು ತಳ್ಳಿ ಹಾಕಿತು. ನೀಡಲಾದ ಕಾರಣಗಳು  ಸಕಾರಣವಲ್ಲ ಎಂದು ಹೇಳಿತು.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಬಿಲ್ಕಿಸ್ ಬಾನೊ ಪ್ರಕರಣದ ಎಲ್ಲ ದೋಷಿಗಳು ಈವತ್ತು ಅಂದರೆ ಭಾನುವಾರ, 21.01.2024 ರಂದು ಜೈಲಿಗೆ ಮರಳಬೇಕಾಗಿದೆ.

ಶ್ರೀನಿವಾಸ ಕಾರ್ಕಳ

ಸಾಮಾಜಿಕ ಚಿಂತಕರು

More articles

Latest article