ಪಟ್ನಾ: ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದು, ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರ ಹಿಡಿಯಲಿದೆ. ಎನ್ ಡಿಎ ಮೈತ್ರಿಯು ಸರಳ ಬಹುಮತವನ್ನು ಮೀರಿ ಭರ್ಜರಿ ಬಹುಮತದ್ದ ದಾಪುಗಾಲು ಹಾಕುತ್ತಿದೆ. ಆದರೆ
ಆರ್‌ಜೆಡಿ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ ತೀವ್ರ ಹಿನ್ನಡೆ ಅನುಭವಿಸುತ್ತಿದೆ.
243 ಸ್ಥಾನಗಳ ವಿಧಾನಸಭೆಯಲ್ಲಿ 190ಕ್ಕೂ ಅಧಿಕ ಸ್ಥಾನಗಳಲ್ಲಿ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿದೆ. ಈ ಚುನಾವಣೆಯಲ್ಲಿ ಬಿಜೆಪಿ 101 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, 80ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಅಚ್ಚರಿ ಮೂಡಿಸಿದೆ. ರಾಜ್ಯದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ನಿಚ್ಚಳವಾಗಿದೆ. 2020ರಲ್ಲಿ ಕೇವಲ 43 ಸ್ಥಾನಗಳನ್ನು ಪಡೆದಿದ್ದ ಜೆಡಿಯು ಈ ಚುನಾವಣೆಯಲ್ಲಿ 70ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ನಿತೀಶ್ ಕುಮಾರ್ ಐದನೇ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲ್ಪಟ್ಟಿದ್ದ ತೇಜಸ್ವಿ ಯಾದವ್ ಯಾವುದೇ ಕಮಾಲ್ ಮಾಡಲು ಸಾಧ್ಯವಾಗಿಲ್ಲ. ಅವರ ನೇತೃತ್ವದ ಆರ್‌ಜೆಡಿ 32 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಆರ್ ಜೆಡಿ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. 61 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್, ಕೇವಲ 5 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ, ಮತ ಕಳವು ಕಾಂಗ್ರೆಸ್ ಕೈ ಹಿಡಿದಿಲ್ಲ ಎನ್ನುವುದು ವಿಪರ್ಯಾಸ.

