ಪಟ್ನಾ: ಬಿಹಾರದ ಮಹಾಘಟಬಂಧನ ಮೈತ್ರಿಕೂಟವು ದಲಿತ, ಮಹಿಳೆ ಹಾಗೂ ಆರ್ಥಿಕವಾಗಿ ಹಿಂದುಳಿದವರ ಪರವಾಗಿ ಕೆಲಸ ಮಾಡಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. ಪಟನಾದಲ್ಲಿ ಸಂವಿಧಾನ ಸುರಕ್ಷಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರತಿ ಬಾರಿಯಂತೆ ಈ ಸಲವೂ ಬಿಹಾರದ ಜನತೆ ದೇಶಕ್ಕೆ ಹೊಸ ದಿಕ್ಕನ್ನು ತೋರಿಸಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಮೇಲೆ ಇರುವ ಶೇ. 50ರ ಹುಸಿ ಮಿತಿಯನ್ನು ತೆಗೆದು ಹಾಕುತ್ತೇವೆ ಎಂದು ಪುನರುಚ್ಛರಿಸಿದ ಅವರು, ತೆಲಂಗಾಣದಲ್ಲಿ ಮಾಡಿದಂಥ ಜಾತಿ ಗಣತಿ ಇಡೀ ದೇಶದ ಅಭಿವೃದ್ಧಿಯ ಚಹರೆಯನ್ನೇ ಬದಲಿಸಲಿದೆ ಎಂದಿದ್ದಾರೆ.
ಸಮಾಜದ ದುರ್ಬಲ ಸಮುದಾಯದವರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನಡೆಸಿಕೊಳ್ಳಲಾಗುತ್ತದೆ ಎಂದು ಆರೋಪಿಸಿದ ಅವರು, ಮಹಾಘಟಬಂಧನ ಮೈತ್ರಿಯು ಮಹಿಳೆ, ದಲಿತ ಹಾಗೂ ಹಿಂದುಳಿದ ವರ್ಗದ ಅಭಿವೃದ್ಧಿಗೆ ಕಟಿಬದ್ಧವಾಗಿದೆ. ಜಾತಿ ಗಣತಿ ಮೂಲಕ ನಾವು ದೇಶದ ಎಕ್ಸ್ ರೇ ಮಾಡುತ್ತೇವೆ. ಆದರೆ ಬಿಜೆಪಿ ಹಾಗೂ ಆರ್ ಎಸ್ ಎಸ್ ಇದಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಡೆಸುತ್ತಿರುವ ವಲಸೆ ತಪ್ಪಿಸಿ, ಕೆಲಸ ಕೊಡಿ ಪಾದಯಾತ್ರೆಯಲ್ಲಿ ಭಾಗಿಯಾಗಲು ಬೆಳಿಗ್ಗೆ ಪಟ್ನಾಗೆ ರಾಹುಲ್ ಗಾಂಧಿ ಆಗಮಿಸಿದ್ದರು. ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಈ ಪಾದಯಾತ್ರೆಯ ನೇತೃತ್ವ ವಹಿಸಿದ್ದಾರೆ.