ಬಿಹಾರ: ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ, ಮಹಿಳೆಯರಿಗೆ ಮಾಸಿಕ ರೂ.2,500:ಇಂಡಿಯಾ ಬಣ ಭರವಸೆ

Most read

ನವದೆಹಲಿ: ಬಿಹಾರದಲ್ಲಿ ಸರ್ಕಾರ ರಚನೆಯಾದ ಕೇವಲ 20 ದಿನಗಳಲ್ಲೇ, ರಾಜ್ಯದ ಪ್ರತಿ ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ, ಡಿಸೆಂಬರ್ 1ರಿಂದ ಮಹಿಳೆಯರು ತಿಂಗಳಿಗೆ ರೂ.2,500, ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಇಂಡಿಯಾ ಮಹಾಮೈತ್ರಿಕೂಟ ಬಿಡುಗಡೆ ಮಾಡಿದೆ.

ಇಂಡಿಯಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್, ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ, ಉಪಮುಖ್ಯಮಂತ್ರಿ ಅಭ್ಯರ್ಥಿ ಮುಕೇಶ್ ಸಹಾನಿ, ಸಿಪಿಐ (ಎಂಎಲ್) (ಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಮತ್ತು ಇತರ ಮುಖಂಡರು ಜಂಟಿಯಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಹಳೆಯ ಪಿಂಚಣಿ ಜಾರಿ, ಮಾಯ್-ಬೆಹಿನ್‌ ಮಾನ್ ಯೋಜನೆಯಡಿಯಲ್ಲಿ ಡಿಸೆಂಬರ್ 1ರಿಂದ ಮಹಿಳೆಯರು ತಿಂಗಳಿಗೆ ರೂ.2,500  ಮತ್ತು ಮುಂದಿನ ಐದು ವರ್ಷಗಳವರೆಗೆ ವರ್ಷಕ್ಕೆ ರೂ.30,000  ಆರ್ಥಿಕ ನೆರವು ಮತ್ತು ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದೆ.

ಸೇಂದಿ ಮೇಲಿನ ನಿಷೇಧ ತೆಗೆದುಹಾಕುವುದು, ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿರುವ ಎಲ್ಲ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವುದು, ಐಟಿ ಪಾರ್ಕ್, ವಿಶೇಷ ಆರ್ಥಿಕ ವಲಯಗಳು (ಎಸ್‌ ಇ ಜೆಡ್‌ಗಳು), ಡೇರಿ ಆಧಾರಿತ ಕೈಗಾರಿಕೆಗಳು, ಐದು ಎಕ್ಸ್‌ ಪ್ರೆಸ್‌ ವೇಗಳ ನಿರ್ಮಾಣ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ 25 ಭರವಸೆಗಳನ್ನು ನೀಡಿದೆ.

ಪ್ರಣಾಳಿಕೆ ಬಿಡುಗಡೆ ಮಾತನಾಡಿದ ತೇಜಸ್ವಿ ಯಾದವ್‌, ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದೇಶದಲ್ಲೇ ಬಿಹಾರವನ್ನು ನಂಬರ್‌ ಒನ್ ರಾಜ್ಯವನ್ನಾಗಿ ಮಾಡಲಾಗುವುದು. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಲಂಚ ಕೊಟ್ಟರೆ ಮಾತ್ರ ಕೆಲಸ ಮಾಡಿಕೊಡಲಾಗುತ್ತದೆ. ರಾಜ್ಯದ ಜನತೆ ಅಪರಾಧ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ಬಯಸುತ್ತಿದ್ದಾರೆ. ಇಂಡಿಯಾ ಎಂದೂ ಅವರು ಹೇಳಿದ್ದಾರೆ.

More articles

Latest article