ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಕೆಗಳು ಗರಿಗೆದರಿವೆ. ರಾಜಕೀಯ ಮುಖಂಡರ ಮುಖಂಡರ ಪಕ್ಷಾಂತ ಪರ್ವವೂ ಆರಂಭವಾಗಿದೆ. ಜೆಡಿಯು ಮುಖಂಡ, ಮಾಜಿ ಲೋಕಸಭಾ ಸದಸ್ಯ ಸಂತೋಷ್ ಕುಶ್ವಾಹ ಆರ್ ಜೆಡಿ ಸೇರಲು ಸಜ್ಜಾಗಿದ್ದಾರೆ. ಇದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ದೊಡ್ಡ ಹಿನ್ನೆಡೆ ಎಂದು ಹೇಳಲಾಗುತ್ತಿದೆ.
ಕುಶ್ವಾಹ ಪುರ್ನಿಯಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಸಂತೋಷ್ ಕುಶ್ವಾಹ ಈ ಭಾಗದಲ್ಲಿ ಜನಾನುರಾಗಿ ಎಂದು ಹೆಸರಾಗಿದ್ದಾರೆ ಮತ್ತು ಹಲವು ಕ್ಷೇತ್ರಗಳಲ್ಲಿ ಪ್ರಭಾವಿ ನಾಯಕರಾಗಿದ್ದಾರೆ.
ಬಾಂಕಾ ಕ್ಷೇತ್ರದ ಹಾಲಿ ಜೆಡಿಯು ಸಂಸದ ಗಿರಿಧಾರಿ ಚಾಣಕ್ಯ ಅವರ ಪುತ್ರ ಪ್ರಕಾಶ್ ರಂಜನ್ ಹಾಗೂ ಜಹಾನಬಾದ್ ಮಾಜಿ ಸಂಸದ ಜಗದೀಶ್ ಶರ್ಮಾ ಅವರ ಪುತ್ರ ರಾಹುಲ್ ಶರ್ಮಾ ಅವರೂ ಆರ್ ಜೆಡಿ ಕದ ತಟ್ಟುತ್ತಿದ್ದಾರೆ.
ಇಂದು ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಆರ್ ಜೆಡಿ ಹಿರಿಯ ಮುಖಂಡರ ಸಮ್ಮುಖದಲ್ಲಿ ಇವರೆಲ್ಲರೂ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅನುಭವಿ ನಾಯಕರು ಮತ್ತು ಸ್ಥಳೀಯ ಮಟ್ಟದಲ್ಲಿ ಪ್ರಭಾವ ಹೊಂದಿರುವವರನ್ನು ಸೆಳೆಯುವಲ್ಲಿ ಆರ್ ಜೆಡಿ ಮುಖಂಡರು ಸಫಲರಾಗುತ್ತದ್ದಾರೆ. ಇದು ಎನ್ ಡಿಎ ನಾಯಕರಿಗೆ ಹಿನ್ನೆಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಬಿಹಾರ ವಿಧಾನಸಭೆ ಚುನಾವಣೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯ ಅವಧಿ ನವೆಂಬರ್ 22 ರಂದು ಕೊನೆಗೊಳ್ಳಲಿದೆ.