ಪಟನಾ: ಬಿಹಾರದಲ್ಲಿ ಇಂಡಿಯಾ ಒಕ್ಕೂಟ ಅದಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣವನ್ನು ಶೇ.85ಕ್ಕೆ ಏರಿಕೆ ಮಾಡುವುದಾಗಿ ರಾಷ್ಟ್ರೀಯ ಜನತಾ ದಳ (ಆರ್ ಜೆ ಡಿ) ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ. ಅವರು ಮೋತಿಹಾರಿಯಲ್ಲಿ ನಡೆಯುತ್ತಿರುವ ಮತದಾರರ ಅಧಿಕಾರ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ. ಜನರು ತಮ್ಮ ಹಕ್ಕುಗಳನ್ನು ಕಾಪಾಡಲು ಒಂದಾಗಬೇಕು. ಮೀಸಲಾತಿ ಸೌಲಭ್ಯವನ್ನು ಹೆಚ್ಚಿಸುವ ತಮ್ಮ ಪಕ್ಷದ ಭರವಸೆಯನ್ನು ಪುನರುಚ್ಛರಿಸಿದ ತೇಜಸ್ವಿ ಯಾದವ್ ಅವರು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣವನ್ನು ಶೇ.85ಕ್ಕೆ ಏರಿಕೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈಗ ನಿಮ್ಮ ಮತವನ್ನು ಕದಿಯುತ್ತಿದ್ದಾರೆ. ಮುಂದೆ ನಿಮ್ಮ ಪಡಿತರ, ನಿಮ್ಮ ಪಿಂಚಣಿ ಮತ್ತು ಅಂತಿಮವಾಗಿ ನಿಮ್ಮ ಆಸ್ತಿಗಳನ್ನೂ ಕದಿಯಲಿದ್ದಾರೆ. ಮುಂದೆ ಸರ್ಕಾರದ ಕ್ರಮಗಳು ಕ್ರಮೇಣ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಬಹುದು. ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಅಧಿಕಾರದಲ್ಲಿರುವ ಬಿಜೆಪಿ ಒಕ್ಕೂಟದ ಎನ್ ಡಿಎ ಸರ್ಕಾರವನ್ನು ಕಿತ್ತುಹಾಕುವಂತೆ ಯಾದವ್ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು ಚಾಚಾ ನಿತೀಶ್ ಅವರು ಸಿಲುಕಿಕೊಂಡಿದ್ದಾರೆ. ಅವರು ಮೊದಲಿನಂತೆ ಇಲ್ಲ. ಅವರು ಇನ್ನು ಮುಂದೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಭವಿಷ್ಯ ನುಡಿದರು.
ನನ್ನ ದೇಹದಲ್ಲೂ ಲಾಲೂ ಪ್ರಸಾದ್ ಯಾದವ್ ಅವರ ರಕ್ತ ಹರಿಯುತ್ತಿದೆ.ಲಾಲೂಜಿ ಸಕ್ರಿಯವಾಗಿಲ್ಲದಿದ್ದರೂ ಅವರ ಪರವಾಗಿ ನಾನು ಹೋರಾಟ ನಡೆಸುತ್ತೇನೆ. ಲಾಲೂ ಪ್ರಸಾದ್ ಯಾದವ್ ಸಕ್ರಿಯರಾಗಿಲ್ಲದಿದ್ದರೂ ಅವರ ಮಕ್ಕಳಾದ ನಾವು ಹೋರಾಟಗಾರರಾಗಿದ್ದೇವೆ. ಪ್ರೀತಿಯ ಸಹೋದರರೇ ಎಲ್ಲರೂ ಒಂದಾಗೋಣ. ಇಲ್ಲದಿದ್ದರೆ, ಅವರು ನಿಮ್ಮ ಆಸ್ತಿ ಅಸ್ತಿತ್ವ ಎರಡನ್ನೂ ಕೊನೆಗೊಳಿಸುತ್ತಾರೆ ಎಂದು ಅಕ್ರೋಶ ಹೊರಹಾಕಿದರು.