ಬಿಹಾರದಲ್ಲಿ ಕೈಬಿಟ್ಟಿರುವ 65 ಲಕ್ಷ ಮತದಾರರ ವಿವರ ಸಲ್ಲಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚನೆ

Most read

ನವದೆಹಲಿ: ನವಂಬರ್‌ ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ ಐ ಆರ್‌) ನಡೆಸಿದ ಬಳಿಕ ಮತದಾರರ ಕರಡು ಪಟ್ಟಿಯಿಂದ ಕೈಬಿಟ್ಟಿರುವ ಸುಮಾರು 65 ಲಕ್ಷ ಮತದಾರರ ವಿವರಗಳನ್ನು ಆಗಸ್ಟ್ 9ರೊಳಗೆ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌, ಉಜ್ಜಲ್‌ ಭುಯಾನ್‌ ಮತ್ತು ಎನ್‌.ಕೋಟೀಶ್ವರ್‌ ಅವರ ದ್ವಿಸದಸ್ಯ ಪೀಠ ಮತದಾರರ ಪಟ್ಟಿಯಿಂದ ತೆಗೆದುಹಾಕಿರುವ ಮತದಾರರ ವಿವರಗಳನ್ನು ಮತ್ತು ಈಗಾಗಲೇ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಂಡಿರುವ ಡೇಟಾವನ್ನು ಒದಗಿಸಬೇಕು. ಈ ಅಂಶಗಳ ಒಂದು ಪ್ರತಿಯನ್ನು ‘ಅಸೋಸಿಯೇಷನ್‌ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ಎಡಿಆರ್‌) ಸಂಸ್ಥೆಗೆ ನೀಡುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿದೆ.

ಇದು ಕೇವಲ ಕರಡು ಪಟ್ಟಿಯಾಗಿದ್ದು, ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದು ಹಾಕಿರುವುದಕ್ಕೆ ಕಾರಣಗಳನ್ನು ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗ ತಿಳಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಕೆಲವು ರಾಜಕೀಯ ಪಕ್ಷಗಳಿಗೆ ಅಳಿಸಿ ಹಾಕಿರುವ ಮತದಾರರ ಪಟ್ಟಿಯನ್ನು ನೀಡಲಾಗಿದೆ. ಆದರೆ, ಸದರಿ ಮತದಾರ ಮೃತಪಟ್ಟಿದ್ದಾನೆಯೇ ಅಥವಾ ವಲಸೆ ಹೋಗಿದ್ದಾನೆಯೇ ಎಂಬುದನ್ನು ಆಯೋಗ ಸ್ಪಷ್ಟಪಡಿಸಿಲ್ಲ ಎಂದು ಎಡಿಆರ್‌ ಪರ ಹಾಜರಿದ್ದ ವಕೀಲ ಪ್ರಶಾಂತ್ ಭೂಷಣ್ ವಾದಿಸಿದರು. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ ಐ ಆರ್‌) ನಡೆಸುವ ಕುರಿತು ಜೂನ್ 24ರಂದು ಚುನಾವಣಾ ಆಯೋಗ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಎಡಿಆರ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಬಿಹಾರದಲ್ಲಿ ಸುಮಾರು 65 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಮತದಾರರ ಪಟ್ಟಿಯಿಂದ ತೆಗೆದು ಹಾಕಲ್ಪಟ್ಟಿರುವವರು ಸು ನೀಗಿದ್ದಾರೆಯೇ ಅಥವಾ ಶಾಶ್ವತವಾಗಿ ವಲಸೆ ಹೋಗಿದ್ದಾರೆಯೇ ಅಥವಾ ಬೇರೆ ಯಾವ ಕಾರಣಕ್ಕಾಗಿ ಪರಿಗಣಿಸಲಾಗಿಲ್ಲ ಎಂಬ ಮಾಹಿತಿಯನ್ನು ಪ್ರಕಟಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಎಡಿಆರ್‌  ಮನವಿ ಮಾಡಿತ್ತು.

More articles

Latest article