ಬೆಂಗಳೂರು: ಈ ಬಾರಿಯ ಬಿಗ್ ಬಾಸ್ ವಿನ್ನರ್ ಖ್ಯಾತ ಗಾಯಕ ಹನುಮಂತು ರಾಜಕೀಯ ಪ್ರವೇಶಿಸಲಿದ್ದಾರೆಯೇ? ಇಂತಹುದೊಂದು ಚರ್ಚೆ ಅವರ ತವರು ಜಿಲ್ಲೆ ಹಾವೇರಿಯಲ್ಲಿ ಆರಂಭವಾಗಿದೆ. ಹನುಮಂತುಗೆ ಸಿನಿಮಾ ಸೀರಿಯಲ್ ಗಳಲ್ಲಿ ನಟಿಸಲು ಆಹ್ವಾನ ಬರುವುದು ವಿಶೇಷ ಅಲ್ಲ, ಅದು ಸ್ವಾಭಾವಿಕ. ಾದರೆ ರಾಜಕೀಯ ಕ್ಷೇತ್ರಕ್ಕೆ ಆಹ್ವಾನ ಬಂದಿರುವುದು ಮಾತ್ರ ಕುತೂಹಲ ಮೂಡಿಸಿದೆ. ಹನುಮಂತುಗೆ ಹಾವೇರಿ ಜಿಲ್ಲೆಯ ಮಾಜಿ ಸಚಿವರೊಬ್ಬರು ಕರೆ ಮಾಡಿ ಅಭಿನಂದಿಸಿರುವುದೇ ಈ ಚರ್ಚೆಗೆ ಕಾರಣವಾಗಿದೆ.
ಬಿಗ್ ಬಾಸ್ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪ್ರವೇಶ ಪಡೆದ ಹನುಮಂತು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ವೀಕ್ಷಕರ ಮನ ಗೆದ್ದಿದ್ದರು. ಪ್ರತಿವಾರ ಸೇಫ್ ಆಗುತ್ತಾ ಗ್ರ್ಯಾಂಡ್ ಫಿನಾಲೆಗೂ ಪ್ರವೇಶ ಪಡೆದಿದ್ದರು. ಕೊನೆಯ ಫಿನಾಲೆ ವಾರದಲ್ಲಿ ಹನುಮಂತನಿಗೆ 5.3 ಕೋಟಿ ವೋಟ್ ಮಾಡುವ ಮೂಲಕ ಹನುಂತುವನ್ನು ಬೆಂಬಲಿಸಿದ್ದು ದಾಖಲೆಯೇ ಸರಿ.
ಹನುಮಂತು ಸ್ವಗ್ರಾಮಕ್ಕೆ ಹಿಂತಿರುಗಿ ಟ್ರೋಫಿಯನ್ನು ತಮ್ಮ ಆರಾಧ್ಯ ದೈವ ಹನುಮಂತನ ಪಾದಕ್ಕೆ ಅರ್ಪಿಸಿ ಪೂಜೆ ಭಕ್ತಿಯನ್ನು ಪ್ರದರ್ಶಿಸಿದ್ದರು. ಇನ್ನು ಬಿಗ್ ಬಾಸ್ ಸೀಸನ್ 11ರಲ್ಲಿ ಪಾಲ್ಗೊಂಡಿದ್ದ ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ, ಭವ್ಯಾ ಗೌಡ ಅವರಿಗೂ ಸಿನಿಮಾಗಳಲ್ಲಿ ನಟಿಸಲು ಆಹ್ವಾನಗಳಿವೆ ಎಂಬ ಸುದ್ದಿ ಗಾಂಧಿ ನಗರದ ಪಡಶಾಲೆಗಳಲಿ ಓಡಾಡುತ್ತಿದೆ. ಆದರೆ ನಮ್ಮ ಹನುಮಂತುಗೆ ಸಿನಿಮಾ ಜತೆಗೆ ರಾಜಕೀಯ ಪ್ರವೇಶಕ್ಕೆ ಆಹ್ವಾನ ಬಂದಿರುವುದು ವಿಶೇಷ ಸುದ್ದಿಯಾಗಿದೆ. ಕರೆ ಮಾಡಿದ ರಾಜಕಾರಣಿ ಸ್ವತಃ ಹಾವೇರಿ ಜಿಲ್ಲೆಯವರೇ ಆಗಿದ್ದು, ಸ್ಥಳೀಯ ರಾಜಕಾರಣಕ್ಕೆ ಪ್ರವೇಶ ನೀಡಬಹುದು ಎಂಬ ಮಾತುಗಳು ಜೋರಾಗಿಯೇ ಕೇಳಿ ಬರುತ್ತಿಇವೆ.
ನಾಲ್ಕೈದು ದಿನಗಳ ದಿನಗಳ ಹಿಂದೆ ಹಾವೇರಿ ಜಿಲ್ಲೆಯ ಮುಖಂಡ ಮಾಜಿ ಕೃಷಿ ಸಚಿವ ಹಾಗೂ ನಟರೂ ಆಗಿರುವ ಬಿ.ಸಿ. ಪಾಟೀಲ್ ಅವರು ಕರೆ ಮಾಡಿ, ಹನುಮಂತುಗೆ ಶುಭ ಕೋರಿದ್ದಾರೆ. ಹಾವೇರಿ ಘನತೆ ಗೌರವವನ್ನು ಎತ್ತಿ ಹಿಡಿದಿದ್ದೀಯ. ನಾನು ನಿಮ್ಮನ್ನು ನೋಡ್ತಿದ್ದೇನೆ ತುಂಬಾ ಚೆನ್ನಾಗಿ ಆಟವಾಡಿದ್ದೀರಿ ಎಂದು ಅಭಿನಂದನೆ ಸಲ್ಲಿಸಿದ್ದಾರೆ. ಈ ಆಡಿಯೋವನ್ನು ಬಿ.ಸಿ. ಪಾಟೀಲ್ ಅವರೇ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ಹನುಮಂತು ಅವರ ರಾಜಕೀಯ ಪ್ರವೇಶ ಕುರಿತು ಪಾಟೀಲರು ಗುಟ್ಟು ಬಿಟ್ಟುಕೊಟ್ಟಿಲ್ಲ. ಜಿಲ್ಲೆಯ ಮೂಲಗಳ ಪ್ರಕಾರ ಪಾಟೀಲ್ ಅವರು ಹನುಮಂತುವನ್ನು ರಾಜಕೀಯಕ್ಕೆ ಕರೆತರಲು ಆಸಕ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಹನುಮಂತು ಹಾವೇರಿ ಜಿಲ್ಲೆಯ ಮತದಾರ ಜಾಗೃತಿಯ ಸ್ವೀಪ್ ರಾಯಭಾರಿಯಾಗಿಯೂ ಕೆಲಸ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಹನುಮಂತು ರಾಜಕೀಯ ಪ್ರವೇಶ ಮಾಡುತ್ತಾರೆಯೇ ಎನ್ನುವುದು ಖಚಿತವಾಗಿಲ್ಲ. ಒಂದು ವೇಳೆ ಅವರು ರಾಜಕಾರಣಕ್ಕೆ ಪ್ರವೇಶ ಮಾಡಿದ್ದೇ ಆದಲ್ಲಿ ಮುಂಚಿತವಾಗಿಯೇ ಆಲ್ ದಿ ಬೆಸ್ಟ್ ಹೇಳೋಣ.