ಬೆಂಗಳೂರು: ಕರಾವಳಿ ಪ್ರತಿಭೆ ಬಿಗ್ ಬಾಸ್ ಖ್ಯಾತಿಯ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ತುಳು ಹಾಗೂ ಕನ್ನಡ ಚಲನಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು.
ಟೀಸರ್ ಬಿಡುಗಡೆಗೊಳಿಸಿ ಮಾತನಾಡಿದ ರೋರಿಂಗ್ ಸ್ಟಾರ್ ನಟ ಶ್ರೀಮುರಳಿ, ಟೀಸರ್ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಪ್ರತಿ ಹಂತದಲ್ಲೂ ತಂಡದ ಶ್ರಮ ಕಾಣುತ್ತದೆ. ರೂಪೇಶ್ ಶೆಟ್ಟಿ ಬಹಳ ಸುರಸುಂದರಾಂಗ ನಾಯಕ ನಟ. ತುಳು ಭಾಷೆಯ ಸಂಸ್ಕೃತಿ, ಆಚಾರ ವಿಚಾರಗಳನ್ನು ಕುರಿತು ಅಪಾರ ಪ್ರೀತಿಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಎಂದರು.
ಬಿಗ್ ಬಾಸ್ ಶೋದಿಂದಲೂ ಅವರನ್ನು ನೋಡುತ್ತಾ ಬಂದಿದ್ದೇನೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿರುವುದರ ಜತೆಗೆ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಅವರಿಗೆ ಶುಭವಾಗಲಿ ಎಂದರು.
ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರನ್ನು ತುಳು ಸಿನಿಮಾಗೆ ಕರೆ ತಂದಿರುವುದು ಮತ್ತೊಂದು ವಿಶೇಷ. ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತರುವುದು ಹೇಗೆ ಎಂಬ ಗುಟ್ಟನ್ನು ನಮಗೂ ತಿಳಿಸಿಕೊಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ಚಿತ್ರತಂಡಕ್ಕೆ ಶುಭ ಹಾರೈಸಿ ತಂಡದ ಜೊತೆ ಸೇರಿ ಹುಲಿ ವೇಷದ ಕುಣಿತಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದರು.
ನಟ, ನಿರ್ದೇಶಕ ರೂಪೇಶ್ ಶೆಟ್ಟಿ ತಮ್ಮ ಅಭಿಪ್ರಾಯ ಹಂಚಿಕೊಂಡು ಇದು ನನ್ನ ನಿರ್ದೇಶನದ ಮೂರನೆಯ ಚಿತ್ರ. ಈ ಹಿಂದೆ ನಾನು ಗಿರ್ಗಿಟ್ ಸರ್ಕಸ್ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದೆ. ಆ ಚಿತ್ರ ಯಶಸ್ವಿ ಪ್ರದರ್ಶನವನ್ನು ಕಂಡಿತ್ತು. ಈಗ ಜೈ ಎನ್ನುವ ಚಿತ್ರವನ್ನು ನಿರ್ದೇಶಿಸಿ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದೇನೆ ಎಂದರು.
ಈ ಚಿತ್ರ ಕರಾವಳಿ ಭಾಗದ ಲೋಕಲ್ ಪೊಲಿಟಿಕಲ್ ಕಂಟೆಂಟ್ ಇರುವ ಚಿತ್ರ. ತುಳು ಭಾಷೆಯಲ್ಲಿ ಸಿದ್ಧವಾಗಿದ್ದು , ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿದ್ದೇವೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಸುನಿಲ್ ಶೆಟ್ಟಿ ಸರ್ ಅಭಿನಯಿಸಿದ್ದಾರೆ. ತಮ್ಮ ಭಾಷೆಯ ಅಭಿಮಾನದಿಂದ ಒಂದು ರೂಪಾಯಿಯನ್ನು ಪಡೆಯದೆ ನಮ್ಮ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬರೀ ಗೆಸ್ಟ್ ರೋಲ್ ಅಲ್ಲದೆ, ಸುಮಾರು 18 ನಿಮಿಷಗಳ ಕಾಲ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾವು ಶ್ರಮಪಟ್ಟು ಕೆಲಸ ಮಾಡಿದರೆ ಯಶಸ್ಸು ಮತ್ತು ಬೆಂಬಲ ಇದ್ದೇ ಇರುತ್ತದೆ ಎನ್ನುವುದಕ್ಕೆ ಸುನಿಲ್ ಶೆಟ್ಟಿ ಅವರೇ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರದ ನಿರ್ಮಾಪಕರು ಕೇಳಿಇದ್ದೆಲ್ಲವನ್ನೂ ಕೊಟ್ಟಿದ್ದಾರೆ. ಜೈ ಚಿತ್ರದಲ್ಲಿ ಅನುಭವಿ ಕಲಾವಿದರ ದಂಡೇ ಇದೆ. ನಿರೀಕ್ಷೆಯಂತೆ ಚಿತ್ರೀಕರಣ ಮುಗಿದಿದ್ದು , ನವೆಂಬರ್ 14ರಂದು ಎರಡು ಭಾಷೆಯಲ್ಲಿ ನಮ್ಮ ಚಿತ್ರವನ್ನು ರಿಲೀಸ್ ಮಾಡುವ ಉದ್ದೇಶ ಇದೆ. ಜೈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೀತಿ , ಬೆಂಬಲ ಇರಲಿ ಎಂದು ಕೇಳಿಕೊಂಡರು.
ನಾಯಕ ನಟಿಯಾಗಿ ಅಭಿನಯಿಸಿರುವ ಅದ್ವಿತಿ ಶೆಟ್ಟಿ ಮಾತನಾಡುತ್ತಾ ಇದು ನನ್ನ ಮೊದಲ ತುಳು ಚಿತ್ರ. ನನ್ನ ಮಾತೃಭಾಷೆ ತುಳು. ನನ್ನ ಅಪ್ಪನಿಗೆ ನಾನು ತುಳು ಸಿನಿಮಾದಲ್ಲಿ ನಡೆಸಬೇಕೆಂಬ ಆಸೆ ಇತ್ತು. ಅದರಂತೆ ನನ್ನ ಮೊದಲ ಚಿತ್ರ ಈಗ ಸಿದ್ಧವಾಗಿದೆ. ಆದರೆ ನನ್ನ ಅಪ್ಪ ನಮ್ಮನ್ನು ಅಗಲಿ ಎರಡು ವರ್ಷವಾಯಿತು. ನನ್ನೊಂದಿಗೆ ನನ್ನ ತಾಯಿ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. 13 ವರ್ಷ ಕನಸು ಈಗ ನೆರವೇರಿದೆ. ಚಿತ್ರದಲ್ಲಿ ನನ್ನದು ಜರ್ನಲಿಸ್ಟ್ ಪಾತ್ರ ನಿರ್ವಹಿಸಿದ್ದೇನೆ. ಇಡೀ ಚಿತ್ರ ತಂಡ ಬಹಳ ಹಾರ್ಡ್ ವರ್ಕ್ ಮಾಡಿದೆ. ನಿಮ್ಮೆಲ್ಲರ ಬೆಂಬಲ ಇದ್ಧೇ ಇರುತ್ತದೆ ಎಂದು ಭಾವಿಸುವುದಾಗಿ ತಮ್ಮ ಮಾತು ಮುಗಿಸಿದರು.
ಕರಾವಳಿ ಚಂಡೆ ವಾದ್ಯದ ಮೂಲಕ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡದ್ದು ಕಾರ್ಯಕ್ರಮದ ಹೈಲೈಟ್. ಮೈಸೂರು ಮೂಲದ ರಾಪ್ ಗಾಯಕರು ಜೈ ಚಿತ್ರಕ್ಕೆ ಸೈ ಎಂಬ ಹಿಪಪ್ ರಾಪ್ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು.
ಆರ್. ಎಸ್. ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಚಿತ್ರಕ್ಕೆ ಬಂಡವಾಳ ಹೂಡಿದ್ದು, ದೀಕ್ಷಿತ್ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರಕಥೆಯನ್ನು ರೂಪೇಶ್ ಶೆಟ್ಟಿ ಹಾಗೂ ವೇಣು ಹಸ್ರಳ್ಳಿ ಬರೆದಿದ್ದಾರೆ. ಮೂರು ಹಂತದಲ್ಲಿ ಚಿತ್ರೀಕರಣ ಮುಗಿದಿದೆ.
ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಮೊದಲಾದವರು ಬಣ್ಣ ಹಚ್ಚಿದ್ದಾರೆ. ತುಳು ಚಿತ್ರರಂಗದ ಖ್ಯಾತ ಡೈಲಾಗ್ ರೈಟರ್ ಪ್ರಸನ್ನ ಶೆಟ್ಟಿ ಬೈಲೂರು ಚಿತ್ರಕ್ಕೆ ಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ವಿನುತ್ ಛಾಯಾಗ್ರಹಣ , ಲೊಯ್ ವೆಲೆಂಟಿನ್ ಸಲ್ದಾನ ಸಂಗೀತ, ರಾಹುಲ್ ವಸಿಷ್ಠ ಸಂಕಲನವಿದೆ.